ಬಾದಾಮಿ : ಸಾರಾಯಿ ಕುಡಿದು ಸಂಸಾರಗಳು ಹಾಳಾಗುತ್ತಿವೆ. ಮಕ್ಕಳು, ಯುವಕರು, ಗಂಡಸರು ಕುಡಿತಕ್ಕೆ ದಾಸರಾಗಿ ಹಾಳಾಗುತ್ತಿರುವುದರಿಂದ ಮದ್ಯದಂಗಡಿಯನ್ನು ಬಂದ್ ಮಾಡುವಂತೆ ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಪಟ್ಟದಕಲ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಿ ಎನ್ ಜಾಲಿಹಾಳ ಗ್ರಾಮದ ಮಹಿಳೆಯರು ನಾಲ್ಕು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ.
ಗ್ರಾಮದಲ್ಲಿ ಮೂಲಭೂತ ಸಮಸ್ಯೆಗಳಿದ್ದು, ಕುಡಿಯುವ ನೀರು, ಮಕ್ಕಳಿಗೆ ಗ್ರಂಥಾಲಯ, ಸುಸಜ್ಜಿತ ಶಾಲೆ ಸೇರಿದಂತೆ ಇತರ ಮೂಲಭೂತ ಅವಶಕ್ಯಕತೆಗಳು ನಮ್ಮೂರಿಗೆ ಬೇಕೇ ಹೊರತು ಮದ್ಯದ ಅಂಗಡಿ ಬೇಕಾಗಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಕುಡಿಯಲು ನೀರು ಬೇಕು, ಸಾರಾಯಿ ಬೇಡ. ಶಿಕ್ಷಣ ಬೇಕು, ಸಾರಾಯಿ ಅಂಗಡಿ ಬೇಡ, ಗ್ರಂಥಾಲಯ, ಶಾಲೆಗಳು ಬೇಕು, ಮದ್ಯದ ಅಂಗಡಿ ಬೇಡವೇ ಬೇಡ” ಎಂದು ಧರಣಿ ನಿರತ ಮಹಿಳೆಯರು ಘೋಷಣೆ ಕೂಗಿದರು.
2014ರಿಂದ ಜಿಲ್ಲಾಧಿಕಾರಿಗೆ, ತಹಶೀಲ್ದಾರರಿಗೆ, ಅಬಕಾರಿ ಇಲಾಖೆಯವರಿಗೆ ಗ್ರಾಮದಲ್ಲಿರುವ ಮದ್ಯದ ಅಂಗಡಿಯನ್ನು ಬಂದ್ ಮಾಡಿಸುವಂತೆ ಮನವಿ ಕೊಡುತ್ತಲೇ ಬಂದಿದ್ದೇವೆ. ಆದರೆ, ಯಾವುದೇ ಅಧಿಕಾರಿಗಳು ಈ ವರೆಗೆ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು, ಮಹಿಳೆಯರು ಆರೋಪಿಸಿದರು.
ಸ್ಥಳೀಯ ನಿವಾಸಿ ಮುತ್ತವ್ವ ಮಾತನಾಡಿ, “ಸಾರಾಯಿ ಕುಡಿತದಿಂದ ಮೂರು ತಿಂಗಳ ಹಿಂದೆ ನಮ್ಮ ಮನೆಯಲ್ಲಿ ಒಬ್ಬರನ್ನು ಕಳ್ಕೊಂಡಿದ್ದೀವಿ. ಇನ್ನೊಬ್ಬನೂ ಕೂಡ ಹದಿನೈದು ದಿನಕ್ಕೊ, ತಿಂಗಳಿಗೋ ಸಾಯುವಂಗ ಅದಾನ. ಹತ್ತು ವರ್ಷದ ಮಕ್ಕಳಿಂದ ಹಿಡಿದು ಇಪ್ಪತೈದು ವರ್ಷದ ಊರಿನ ಪ್ರತಿಯೊಬ್ಬ ಯುವಕರು ಕುಡಿತಕ್ಕೆ ಬಲಿಯಾಗಿದ್ದಾರೆ. ಇದರಿಂದ ಊರಾಗಿನ ಹೆಣ್ಮಕ್ಕಳ ಸಂಸಾರ ಮೂರಾಬಟ್ಟಿ ಆಗ್ಯಾವು, ಇನ್ನೂ ಎಷ್ಟ ಮನಿ ಹಾಳ ಮಾಡಬೇಕಂತ ಮಾಡಿರಿ ? ಈ ಸಾರಾಯಿ ಅಂಗಡಿ ಬಂದ್ ಮಾಡೋವರ್ಗೂ ನಾವು ಇಲ್ಲಿಂದ ಹೋಗಂಗಿಲ್ಲ” ಎಂದು ಪಟ್ಟು ಹಿಡಿದರು.
“ಸಂಜೆ 5ರ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಅಬಕಾರಿ ಇಲಾಖೆಯ ಡಿವೈಎಸ್‌ಪಿ ಹನಮಂತಪ್ಪ ಭಜಂತ್ರಿ ಅವರಿಗೆ ಪ್ರತಿಭಟನಾನಿರತ ಮಹಿಳೆಯರು ಮನವಿ ಸಲ್ಲಿಸಿ ಈ ಕೂಡಲೇ ಬಾರ್ ಬಂದ್ ಮಾಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅಬಕಾರಿ ಇಲಾಖೆ ಡಿವೈಎಸ್‌ಪಿ ಹನಮಂತಪ್ಪ ಪೂಜಾರ ಅವರು, “ಈ ಕುರಿತು ಕೂಡಲೇ ಸರ್ಕಾರದ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಂತರ ಗ್ರಾಮದ ಹಿರಿಯರು ಹಾಗೂ ಮಹಿಳೆಯರು ಒಗ್ಗೂಡಿ ಮದ್ಯದಂಗಡಿಗೆ ಈಗಲೇ ಬೀಗ ಹಾಕಬೇಕು ಎಂದು ಆಗ್ರಹಿಸಿದರು. ಪೋಲಿಸರು ಒಪ್ಪದಿದ್ದಾಗ, ಮಹಿಳೆಯರು ಅಧಿಕಾರಿಗಳ ವಾಹನಗಳ ಮುಂದೆ ನಿಂತು ಪ್ರತಿಭಟಿಸಿದರು.