ಬೆಳಗಾವಿ : ಬೆಳಗಾವಿ ತಾಲೂಕಿನ ನಾವಗೆ ಗ್ರಾಮದ ಹೊರವಲಯದಲ್ಲಿರುವ ಸ್ನೇಹಂ ಅಂತಾರಾಷ್ಟ್ರೀಯ ಇನ್ಸುಲಿನ್ ಟೇಪ್ ಉತ್ಪಾದನಾ ಕಾರ್ಖಾನೆಗೆ ನಿನ್ನೆ ರಾತ್ರಿ ಬೆಂಕಿ ತಗುಲಿದಾಗ ಬೆಂಕಿಯಿಂದ ತಪ್ಪಿಸಿಕೊಳ್ಳಲಾಗದೇ ಕಾರ್ಖಾನೆಯಲ್ಲಿ ಲಿಫ್ಟನಲ್ಲಿ ಸಿಲುಕಿದ್ದ 20 ವರ್ಷದ ಯಲ್ಲಪ್ಪನ ದೇಹ ಸಂಪೂರ್ಣ ಸುಟ್ಟು ಕರಕಲಾಗಿದ್ದು ಆಸ್ತಿ ಪಂಜರಗಳು ಮಾತ್ರ ಪತ್ತೆಯಾಗಿವೆ.
ನಿರಂತರವಾಗಿ ಎಸ್ ಡಿಆರ್ ಎಫ್ ತಂಡ 17 ಗಂಟೆ ಕೆಲಸ ಮಾಡಿದೆ. ಯಲ್ಲಪ್ಪನ ಆಸ್ತಿ ಪಂಜರವನ್ನು ಎಫ್ ಎಸ್ ಎಲ್ ವರದಿಗೆ ಕಳುಹಿಸಿ ವಿಧಿ ವಿಧಾನವನ್ನು ಪೂರೈಸಲಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರ ಸೊಸೆ ಡಾ. ಹಿತಾ ಮೃಣಾಲ್ ಬುಧವಾರ ಭೇಟಿ ನೀಡಿ ಅವಶೇಷದಲ್ಲಿ ಸಿಲುಕಿರುವ ಯಲ್ಲಪ್ಪನ ಕುಟುಂಬಕ್ಕೆ ಸಾಂತ್ವನ ಹೇಳಿದರು.
ನಮ್ಮ ಮನೆಗೆ ಆಸರೆಯಾಗಿದ್ದ ಒಬ್ಬನೇ ಮಗ ಮೃತಪಟ್ಟಿದ್ದಾನೆ. ನಮಗೆ ನ್ಯಾಯ ಕೊಡಿಸಬೇಕೆಂದು ಅವಶೇಷದಲ್ಲಿ ಸಿಲುಕಿರುವ ಯಲ್ಲಪ್ಪನ ಕುಟುಂಬಸ್ಥರು ಡಾ. ಹಿತಾ ಮುಂದೆ ಗೋಳಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಹಿತಾ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರು ಬೆಂಗಳೂರಿನಲ್ಲಿರುವುದರಿಂದ ನಾನು ಬಂದಿದ್ದೇನೆ. ಮೃತರ ಕುಟುಂಬಕ್ಕೆ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ವೈಯಕ್ತಿಕವಾಗಿ ಹಾಗೂ ಸರಕಾರದಿಂದ ಪರಿಹಾರ ಕೊಡಲಾಗುವುದು ಎಂದರು.