ಹಾಸನ: ಬಿಜೆಪಿ ಲಜ್ಜೆಗೆಟ್ಟ ಸರ್ಕಾರ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಿದ್ದರಾಮಯ್ಯ ನಾಲಿಗೆ ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳಲಿ. ಹುಚ್ಚುಚ್ಚಾಗಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಶಾಸಕ ಪ್ರೀತಂಗೌಡ ಅವರ ಮನೆಗೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು , ಸಿದ್ದರಾಮಯ್ಯ ಹುಚ್ಚುಚ್ಚಾಗಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಮೈಸೂರಿನಲ್ಲಿ ಯಾಕೆ ಅವರಿಗೆ ಸೋಲಾಯ್ತು? ಬಾದಾಮಿಯಲ್ಲಿ ಇನ್ನೊಂದು ದಿನ ನಾನು ಹೋಗಿದ್ರೆ ಅಲ್ಲಿಯೂ ಸೋಲು ಅನುಭವಿಸುತ್ತಿದ್ದರು. ಮೊದಲು ಅವರ ಕ್ಷೇತ್ರ ಯಾವುದು ಎಂದು ಹುಡುಕಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಯಡಿಯೂರಪ್ಪ , ಆಧಾರ ರಹಿತವಾದ ಆರೋಪವನ್ನು ಯಾರು ಬೇಕಾದರೂ ಮಾಡಬಹುದು. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಲಿ, ಅವರ ಕಾಲದಲ್ಲಿ ಭ್ರಷ್ಟಾಚಾರ ಮಾಡಿ ಡಿಕೆಶಿ-ಸಿದ್ಧರಾಮಯ್ಯ ನಮ್ಮ ಮೇಲೆ ಆರೋಪ ಮಾಡ್ತಿದ್ದಾರೆ. ಭ್ರಷ್ಟಾಚಾರ ನಡೆದಿದ್ದರೆ ಸದನದಲ್ಲಿ ಗಮನಕ್ಕೆ ತರಲಿ ಸರಿ ಪಡಿಸಿಕೊಳ್ಳುವ ಕೆಲಸ ಮಾಡ್ತಿವಿ ಎಂದು ಅವರು ಹೇಳಿದ್ದಾರೆ.