ಬೆಳಗಾವಿ : ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆ ಚುನಾವಣೆಗೆ ಕೋಲಾರದಿಂದ ಸ್ಪರ್ಧಿಸುವದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಲಕ್ಷ್ಮಣ ಸವದಿ ಅವರ ಇಬ್ಬರು ಗಂಡು ಮಕ್ಕಳ ಮದುವೆಗೆ ಆಗಮಿಸಿದ್ದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿದರು. ಕಾಂಗ್ರೆಸ್ ನ ‘ಪ್ರಜಾಧ್ವನಿ’ ಯಾತ್ರೆ ವಿಚಾರ ಬಗ್ಗೆ ಮಾತನಾಡಿ ಸಿದ್ದರಾಮಯ್ಯ ಅವರು
ಯಾವ ಕಾರಣಕ್ಕೂ ಕೋಲಾರದಿಂದ ಸಿದ್ದರಾಮಯ್ಯ ನಿಲ್ಲುವುದಿಲ್ಲ. ಜನರ, ಇತರ ಪಕ್ಷಗಳ ಗಮನ ಬೇರೆಡೆ ಸೆಳೆಯಲು ರಾಜಕೀಯ ತಂತ್ರಗಾರಿಕೆ ಮಾಡುತ್ತಿದ್ದಾರೆಂದು ಯಡಿಯೂರಪ್ಪ ಹೇಳಿದರು.
“ನಾನು ಭವಿಷ್ಯ ಹೇಳುತ್ತಿಲ್ಲ ಅವರು ಕೋಲಾರದಿಂದ ನಿಲ್ಲುವುದಿಲ್ಲ. ಅವರು ಚುನಾವಣಾ ಹೊಸ್ತಿಲಲ್ಲಿ ಡ್ರಾಮಾ ಮಾಡುತ್ತಿದ್ದಾರೆ, ಮೈಸೂರಿಗೆ ಹೋಗೋಕೆ ಪ್ರಯತ್ನ ಮಾಡುತ್ತಿದ್ದಾರೆ. ಕೋಲಾರದಲ್ಲಿ ನಿಂತುಕೊಂಡರೆ ಅವರು ಮನೆಗೆ ಹೋಗುವುದು ನಿಶ್ಚಿತ” ಎಂದು ಹೇಳಿದರು.
“ಸಿದ್ದರಾಮಯ್ಯ ಅವರು ಸುಮ್ಮನೆ ರಾಜಕೀಯ ಡೊಂಬರಾಟ, ನಾಟಕ ಮಾಡುತ್ತಿದ್ದಾರೆ. ನನ್ನ ಪ್ರಕಾರ ಅವರು ಕೋಲಾರದಲ್ಲಿ ನಿಲ್ಲುವುದಿಲ್ಲ ಮೈಸೂರಿಗೆ ಹೋಗಬಹುದು. ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧೆ ಮಾಡಲಿ ಅಥವಾ ಮೂರು ಕಡೆಯಾದರೂ ನಿಂತು ಕೊಳ್ಳಲಿ ಅವರು ಸೋಲುವದು ನಿಶ್ಚಿತ” ಎಂದು ಅವರು ಹೇಳಿದರು.
ಒಬ್ಬ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಚುನಾವಣೆಗೆ ಸುರಕ್ಷಿತ ಕ್ಷೇತ್ರ ಹುಡುಕುತ್ತಿರುವದು ವಿಪರ್ಯಾಸ. ಅಭಿವೃದ್ಧಿ ಕಾರ್ಯ ಮಾಡಿದ್ದರೆ ಇಂತಹ ಪರಸ್ಥಿತಿ ಅವರಿಗೆ ಬರುತ್ತಿರಲಿಲ್ಲ. ಕಾಂಗ್ರೆಸ್ ನ ಮುಂಚೂಣಿ ನಾಯಕರಿಗೇ ಇಂತಹ ಪರಸ್ಥಿತಿ ಬಂದಿರುವಲ್ಲಿ ಆ ಪಕ್ಷದ ಇತರ ನಾಯಕರ ಸ್ಥಿತಿ ಹೇಗಿರಬಹುದು. ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರ ಪುನಃ ಸ್ಥಾಪಿಸುವದು ನಿಶ್ಚಿತ ಎಂದರು.
ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ತಮಗೆ ಪಕ್ಷ ಸಮಸ್ತವನ್ನೂ ನೀಡಿದೆ. ಈಗ ಪಕ್ಷಕ್ಕೆ ತಮ್ಮ ಸೇವೆಯ ಮೂಲಕ ಪಡೆದದನ್ನು ಹಿಂದಕ್ಕೆ ನೀಡಬೇಕಾಗಿದೆ. ಮುಂದಿನ ಚುನಾವಣೆಯಲ್ಲಿ ಶಕ್ತಿ ಮೀರಿ ದುಡಿದು ಪಕ್ಷವನ್ನು ಅಧಿಕಾರಕ್ಕೆ ತರುವದೇ ತಮ್ಮ ಗುರಿ ಎಂದು ತಿಳಿಸಿದರು.