ಬಾಲಕಿಯನ್ನು ಕೋಣೆಗೆ ಕರೆದುಕೊಂಡು ಹೋಗಿ ಚಿಲಕ ಹಾಕಿಕೊಂಡರು ಯಡಿಯೂರಪ್ಪ; ಮಹಿಳೆಯ ಹೇಳಿಕೆ

A B Dharwadkar
ಬಾಲಕಿಯನ್ನು ಕೋಣೆಗೆ ಕರೆದುಕೊಂಡು ಹೋಗಿ ಚಿಲಕ ಹಾಕಿಕೊಂಡರು ಯಡಿಯೂರಪ್ಪ; ಮಹಿಳೆಯ ಹೇಳಿಕೆ

ಬೆಂಗಳೂರು, ೧೫: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಬಾಲಕಿಯೊಬ್ಬಳ ಮೇಲೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಕೆಳಗಿನಂತೆ ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

ಅಪ್ರಾಪ್ತ ಮಗಳ ಮೇಲೆ ಈ ಹಿಂದೆ ಆಗಿದ್ದ ಅತ್ಯಾಚಾರ ಸಂಬಂಧ ನ್ಯಾಯ ಒದಗಿಸುವಂತೆ ಕೋರಿ, ಎಸ್‌ಐಟಿ ತನಿಖೆಗೆ ವಹಿಸುವಂತೆ ಮನವಿ ಮಾಡಲು 2024ರ ಫೆಬ್ರುವರಿ 2ರಂದು ಬೆಳಿಗ್ಗೆ ಯಡಿಯೂರಪ್ಪನವರ ಮನೆಗೆ ಸಂತ್ರಸ್ತ ಬಾಲಕಿ ಹಾಗೂ ತಾಯಿ ಹೋಗಿದ್ದರು. ಆ ವೇಳೆ 9 ನಿಮಿಷಗಳ ಕಾಲ ಯಡಿಯೂರಪ್ಪ ಇವರೊಂದಿಗೆ ಮಾತನಾಡಿದ್ದರು. ಇಬ್ಬರಿಗೂ ಟೀ ಕುಡಿಸಿದ್ದರು. ಬಾಲಕಿಯು ಯಡಿಯೂರಪ್ಪನವರನ್ನು ‘ತಾತಾ’ ಎಂದು ಕರೆಯುತ್ತಿದ್ದರು. ಯಡಿಯೂರಪ್ಪ ಬಾಲಕಿಯ ಕೈ ಹಿಡಿದುಕೊಂಡೇ ಮಾತನಾಡುತ್ತಿದ್ದರು. ಬಾಲಕಿಯ ತಾಯಿ ಮಾಜಿ ಮುಖ್ಯಮಂತ್ರಿಯನ್ನು ‘ಅಪ್ಪಾಜಿ’ ಎಂದು ಸಂಬೋಧಿಸುತ್ತಿದ್ದರು ಎನ್ನಲಾಗಿದೆ.

ಆ ವೇಳೆ ಬಾಲಕಿಯನ್ನು ತನ್ನ ರೂಮಿಗೆ ಕರೆದುಕೊಂಡು ಹೋಗಿದ್ದ ಯಡಿಯೂರಪ್ಪ ಅವರು, ಸುಮಾರು 5 ನಿಮಿಷಗಳ ಕಾಲ ಬಾಗಿಲು ಹಾಕಿಕೊಂಡು ಇದ್ದರು. ಬಾಲಕಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ಯಡಿಯೂರಪ್ಪ ಹೊರಗೆ ಬಿಟ್ಟಿಲ್ಲ. ಆ ವೇಳೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ. ಬಾಲಕಿಯು ರೂಮಿನಿಂದ ಓಡಿಬಂದು ತಾಯಿಗೆ ವಿಷಯವನ್ನು ತಿಳಿಸಿದ್ದಾರೆ. “ಹೀಗೇಕೆ ಮಾಡಿದಿರಿ?” ಎಂದು ತಾಯಿ ಕೇಳಲಾಗಿ, “ಆಕೆಯ ಮೇಲೆ ರೇಪ್‌ ಆಗಿದೆಯೋ ಇಲ್ಲವೋ ಎಂದು ಚೆಕ್ ಮಾಡಲು ಹಾಗೆ ಮಾಡಿದೆ” ಎಂದಿದ್ದಾರೆ.

ನಂತರ ಯಡಿಯೂರಪ್ಪ ಕ್ಷಮೆಯಾಚಿಸುತ್ತಾ, “ಈ ವಿಚಾರವನ್ನು ಹೊರಗಡೆ ಎಲ್ಲಿಯೂ ಹೇಳಬಾರದು” ಎಂದು ತಡೆಯಲು ಪ್ರಯತ್ನಿಸಿದ್ದಾರೆ. ಆಗಿರುವ ಅನ್ಯಾಯಕ್ಕೆ ನ್ಯಾಯ ಕೇಳಲು ಹೋದಾಗ ಲೈಂಗಿಕ ಕಿರುಕುಳ ನೀಡಿರುವ ಯಡಿಯೂರಪ್ಪನವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಂತ್ರಸ್ತ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

ವರದಿ ಮಾಡದಂತೆ ಪತ್ರಕರ್ತರಿಗೆ ಧಮಕಿ

ಯಡಿಯೂರಪ್ಪನವರ ವಿರುದ್ಧ ಸಂತ್ರಸ್ತ ಬಾಲಕಿ ಮತ್ತು ತಾಯಿ ಪೊಲೀಸ್ ಠಾಣೆಯ ಮೆಟ್ಟಿಲೇರಿರುವುದನ್ನು ತಿಳಿದ ಅನೇಕ ಪತ್ರಕರ್ತರು ತಡರಾತ್ರಿಯೇ ಪೊಲೀಸ್ ಠಾಣೆಗೆ ಧಾವಿಸಿದ್ದರು. ಪೊಲೀಸ್ ಠಾಣೆಯ ಎದುರು ಜನ ಜಮಾಯಿಸದಂತೆ ರಸ್ತೆ ಬದಿಯಲ್ಲಿ ನಿಂತಿದ್ದ ಮಾಧ್ಯಮಗಳ ವಾಹನಗಳನ್ನು ಮತ್ತು ಪತ್ರಕರ್ತರನ್ನು ತೆರವು ಮಾಡಿಸಲಾಯಿತು.

ಬಿಎಸ್‌ವೈ ಬೆಂಬಲಿಗರು ಮಾಧ್ಯಮಗಳಲ್ಲಿ ವರದಿಯಾಗುವುದನ್ನು ತಡೆಯಲು ಠಾಣೆಯ ಬಳಿ ದೌಡಾಯಿಸಿದ್ದರು. ಯಡಿಯೂರಪ್ಪನವರ ಬೆಂಬಲಿಗರು, ಮಾಧ್ಯಮದ ಪಿಆರ್‌ಒ ತಂಡ ಸ್ಥಳದಲ್ಲಿತ್ತು. “ಸುಳ್ಳು ಪ್ರಕರಣ ದಾಖಲಿಸಲು ಬಂದಿದ್ದಾರೆ, ಯಾವುದೇ ಕಾರಣಕ್ಕೂ ವರದಿ ಮಾಡಬಾರದು” ಎಂದು ತಾಕೀತು ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು. ಅಲ್ಲದೇ ಬಿಜೆಪಿ ಮುಖಂಡರಿಬ್ಬರು ಪತ್ರಕರ್ತರಿಗೆ ಬೆದರಿಕೆ ಹಾಕುತ್ತಿದ್ದ ದೃಶ್ಯಗಳು ಕಂಡುಬಂದವು ಎನ್ನಲಾಗಿದೆ.

ಲೈಂಗಿಕ ಕಿರುಕುಳ ಘಟನೆಯ ನಂತರದಲ್ಲಿ ಬಿಜೆಪಿಯ ವರಿಷ್ಠರಿಗೆ ಸಂತ್ರಸ್ತರು ದೂರು ನೀಡುವ ಪ್ರಯತ್ನವನ್ನೂ ಮಾಡಿದ್ದರೆಂದು ತಿಳಿದುಬಂದಿದೆ. ಆದರೆ ಯಾವುದೇ ಕ್ರಮ ಜರುಗಿಸದೇ ಇದ್ದರಿಂದ ಸಂತ್ರಸ್ತರು ಅಂತಿಮವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಮುರುಘಾ ಮಠದ ಸ್ವಾಮೀಜಿ ವಿರುದ್ಧ ಪೋಕ್ಸೋ ದಾಖಲಾದ ನಂತರದಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರ ಮೇಲೆ ಇಂತಹದ್ದೇ ಗಂಭೀರ ಪ್ರಕರಣ ದಾಖಲಾಗಿರುವುದು ಇದೇ ಮೊದಲು.

ಎಷ್ಟೇ ಪ್ರಭಾವಿಯಾದರೂ ಕಾನೂನಿನ ಅನ್ವಯ ಬಂಧನವಾಗುವುದು ಖಚಿತ ಎಂದು ಕಾನೂನು ತಜ್ಞರು ಹೇಳುತ್ತಾರೆ. ಯಡಿಯೂರಪ್ಪನವರನ್ನು ಬಂಧನ ಮಾಡಲಾಗುತ್ತಾ? ಸಂತ್ರಸ್ತ ಹೆಣ್ಣುಮಗಳಿಗೆ ನ್ಯಾಯ ಸಿಗುತ್ತದಾ? ಯಾವುದೇ ರಾಜಕಾರಣ ನಡೆಯದೇ, ಸಂತ್ರಸ್ತರನ್ನು ಬೆದರಿಸದೆ, ಒತ್ತಡ ತರದೆ ಪ್ರಕರಣದ ತನಿಖೆಯಾಗುತ್ತಾ? ಎಂಬ ಪ್ರಶ್ನೆಗಳು ನಮ್ಮ ಮುಂದಿವೆ.

ಆರೋಪ ಸಾಬೀತಾದರೆ ಶಿಕ್ಷೆ ಏನು ?

ಯಡಿಯೂರಪ್ಪ ವಿರುದ್ಧ ಪೊಲೀಸರು ದಾಖಲಿಸಿಕೊಂಡಿರುವ ಪೋಕ್ಸೋ ಕಾಯ್ದೆಯ ಸೆಕ್ಷನ್‌ 8ರ ಪ್ರಕಾರ ಆರೋಪ ಸಾಬೀತಾದದಲ್ಲಿ ಕನಿಷ್ಠ ಮೂರು ವರ್ಷ, ಕೆಲವೊಮ್ಮೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಆಗಬಹುದು. ಜೊತೆಗೆ ದಂಡವನ್ನೂ ವಿಧಿಸಬಹುದು.

ಐಪಿಸಿ ಸೆಕ್ಷನ್ 354 ಎ ಲೈಂಗಿಕ ಕಿರುಕುಳಕ್ಕೆ ಶಿಕ್ಷೆಯನ್ನು ವಿಧಿಸುತ್ತದೆ. ಇಷ್ಟವಿಲ್ಲದಿದ್ದರೂ ಲೈಂಗಿಕ ಅಭಿವ್ಯಕ್ತಿಯನ್ನು ಮಾಡುವುದು, ಲೈಂಗಿಕ ಅನುಕೂಲಕ್ಕಾಗಿ ಬೇಡಿಕೆ ಅಥವಾ ವಿನಂತಿಯನ್ನು ಮಾಡುವುದು, ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಅಶ್ಲೀಲವಾದದ್ದನ್ನು ತೋರಿಸುವುದು ಶಿಕ್ಷಾರ್ಹ ಅಪರಾಧವೆಂದು ಈ ಸೆಕ್ಷನ್ ಹೇಳುತ್ತದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.