ದೋಹಾ: ಫಿಫಾ ಫುಟ್ಬಾಲ್ ವಿಶ್ವಕಪ್ ನ ಅಂತಿಮ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಫ್ರಾನ್ಸ ವಿರುದ್ಧ ಅರ್ಜೆಂಟೀನಾ ಭರ್ಜರಿ ಗೆಲುವು ಸಾಧಿಸಿದೆ. ಪಂದ್ಯದ 90 ನಿಮಿಷಗಳ ಅವಧಿಯಲ್ಲಿ ಎರಡೂ ತಂಡಗಳು ತಲಾ ಎರಡು ಗೋಲು ಗಳಿಸಿದ್ದವು. ನಂತರದ 30 ನಿಮಿಷಗಳ ಹೆಚ್ಚುವರಿ ಅವಧಿಯಲ್ಲಿ ತಲಾ ಒಂದು ಗೋಲು ಗಳಿಸಿ 3-3 ಸಮ ಮಾಡಿಕೊಂಡವು. ಹೀಗಾಗಿ, ಪೆನಾಲ್ಟಿ ಶೂಟೌಟ್ ನಲ್ಲಿ ಅರ್ಜೆಂಟೀನಾ ಗೆಲುವು ಸಾಧಿಸಿತು. ಮೆಸ್ಸಿ ಎರಡು ಗೋಲು ಗಳಿಸಿ ಗೆಲುವಿಗೆ ನೆರವಾದರು.
ಫೈನಲ್ನಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿ ಫ್ರಾನ್ಸ ಕೊನೆ ವರೆಗೂ ಹೋರಾಡಲು ನೆರವಾದ ಕಿಲಿಯಾನ್ ಎಂಬಾಪೆಯ ಆಟ ನೋಡಿ ಇಡೀ ಜಗತ್ತೇ ನಿಬ್ಬೆರಗಾಯಿತು.
ವಿಶ್ವ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಲಿಯೋನೆಲ್ ಮೆಸ್ಸಿ ಕೊನೆಗೂ ವಿಶ್ವಕಪ್ ಗೆದ್ದರು. ಅರ್ಜೆಂಟೀನಾ ಪರ ಅಂತಿಮ ವಿಶ್ವಕಪ್ ಪಂದ್ಯದಲ್ಲೇ ಮೆಸ್ಸಿ ಗೆಲುವಿನ ನಗೆ ಬೀರಿದರು.
ಫಿಫಾ ಈ ವಿಶ್ವಕಪ್ಗಾಗಿ 440 ಮಿಲಿಯನ್ ಡಾಲರ್ ಬಹುಮಾನ ಮೊತ್ತವನ್ನು ನಿಗದಿಪಡಿಸಿತು, ತಂಡಗಳು ಸ್ಪರ್ಧೆಯಲ್ಲಿ ಎಷ್ಟು ಮುನ್ನಡೆ ಸಾಧಿಸಿದವು ಎಂಬುದರ ಆಧಾರದ ಮೇಲೆ ಹಂತಹಂತವಾಗಿ ದೊಡ್ಡ ಮೊತ್ತವನ್ನು ಪಡೆಯುತ್ತವೆ. 2018 ರ ವಿಶ್ವಕಪ್ ಚಾಂಪಿಯನ್ ಫ್ರಾನ್ಸ್ 38 ಮಿಲಿಯನ್ ಡಾಲರ್ ಬಹುಮಾನವನ್ನು ಪಡೆದುಕೊಂಡಿತ್ತು. ಈ ಬೃಹತ್ ಕೂಟದಲ್ಲಿ ಮೊದಲ ಸ್ಥಾನ ಪಡೆದ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಬರೋಬ್ಬರಿ 42 ಮಿಲಿಯನ್ ಡಾಲರ್ ಅಂದರೆ 347.48 ಕೋಟಿ ರೂ ಬಾಚಿಕೊಂಡಿದೆ. ಎರಡನೇ ಸ್ಥಾನ ಪಡೆದ ಫ್ರಾನ್ಸ್ 30 ಮಿಲಿಯನ್ ಡಾಲರ್ ಅಂದರೆ 248 ಕೋಟಿ ರೂ ಬಾಚಿಕೊಂಡಿದೆ.
ವಿಶ್ವಕಪ್ ಆತಿಥ್ಯವನ್ನು ಪುಟ್ಟ ರಾಷ್ಟ್ರ ಕತಾರ್ಗೇಕೆ ಕೊಟ್ಟೆವು ಎಂದು ಪಶ್ಚಾತ್ತಾಪ ಪಡುತ್ತಿದ್ದೇವೆ ಎಂದು ಟೂರ್ನಿ ಆರಂಭಕ್ಕೂ ಮುನ್ನ ಫಿಫಾ ಮಾಜಿ ಅಧ್ಯಕ್ಷ ಸೆಪ್ ಬ್ಲಾಟರ್ ಹೇಳಿದ್ದರು. ಟೂರ್ನಿ ಮುಗಇದ ನಂತರ ಹಾಲಿ ಅಧ್ಯಕ್ಷ ಗಿಯೋನಿ ಇನ್ಫಾಂಟಿನೋ ಇದು ಈ ವರೆಗಿನ ಶ್ರೇಷ್ಠ ವಿಶ್ವಕಪ್ ಎಂದಿದ್ದಾರೆ.
ಒಮ್ಮೆಲೇ ಲಕ್ಷಾಂತರ ಪ್ರವಾಸಿಗರು, ಅವರಿಗೆ ಒದಗಿಸಬೇಕಾದ ಮೂಲಸೌಕರ್ಯದ ಕೊರತೆ, ತಾಪಮಾನದ ಆತಂಕ, ವೈರಸ್ ಭೀತಿ, ಸಾಂಪ್ರದಾಯಿಕ ನೀತಿ ನಿಯಮಗಳ ಪಾಲನೆ ಹೀಗೆ ಹಲವು ಸವಾಲುಗಳನ್ನು ಎದುರಿಸಿ ಪುಟ್ಟರಾಷ್ಟ್ರ ಕತಾರ್ ರಾಷ್ಟ್ರ ಯಶಸ್ವಿಯಾಗಿ ಟೂರ್ನಿ ಆಯೋಜಿಸಿ ಜಗತ್ತನ್ನು ನೆಬ್ಬೆರಗಾಗಿಸಿದೆ.
ಕತಾರ್ ಅಂದಾಜು 10ರಿಂದ 12 ಲಕ್ಷ ವಿದೇಶಿ ಪ್ರವಾಸಿಗರನ್ನು ನಿರೀಕ್ಷೆ ಮಾಡಿತ್ತು. ಆದರೆ 10 ಲಕ್ಷಕ್ಕೂ ಅಧಿಕ ವಿದೇಶಿ ಪ್ರವಾಸಿಗರು ಕತಾರ್ಗೆ ಬಂದು ಹೋಗಿದ್ದಾರೆ. ಕ್ರೀಡಾಂಗಣಗಳಲ್ಲಿ ಪಂದ್ಯಗಳ ವೀಕ್ಷಣೆ ಜೊತೆಗೆ ದೋಹಾ ನಗರದ ಸುತ್ತ ಮುತ್ತ ಆಯೋಜಿಸಿದ್ದ ಅನೇಕ ಅದ್ಘುತ ‘ಫ್ಯಾನ್ ಫೆಸ್ಟಿವಲ್’ಗಳಲ್ಲಿ ಪಾಲ್ಗೊಂಡಿದ್ದಾರೆ. ಈ ವಿಶ್ವಕಪ್ನಲ್ಲಿ ಅಂದಾಜು 30 ಲಕ್ಷಕ್ಕೂ ಹೆಚ್ಚು ಟಿಕೆಟ್ ಮಾರಾಟವಾಗಿವೆ ಎಂದು ಹೇಳಲಾಗಿದೆ. ಫಿಫಾ ಪ್ರಕಾರ ಅತಿಹೆಚ್ಚು ಟಿಕೆಟ್ ಮಾರಾಟಕ್ಕೆ ಸಾಕ್ಷಿಯಾದ ವಿಶ್ವಕಪ್ಗಳಲ್ಲಿ ಇದೂ ಒಂದು. 2018ರಲ್ಲಿ ರಶಿಯಾದಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ 33 ಲಕ್ಷ ಟಿಕೆಟ್ಗಳು ಮಾರಾಟವಾಗಿದ್ದವು.