ಬೆಳಗಾವಿ : ನಿನ್ನೆ ತಡ ರಾತ್ರಿವರೆಗೂ ಬೆಳಗಾವಿಯಲ್ಲಿ ನಡೆದ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಯುವಕರು ಕುಣಿಯುವ ವಿಚಾರಕ್ಕೆ ಜಗಳವಾಗಿ ಮೂವರು ಯುವಕರಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ.
ಬೆಳಗಾವಿಯ ಚನ್ನಮ್ಮ ವೃತ್ತದ ಬಳಿ ಗಣಪತಿ ವಿಸರ್ಜನಾ ಮೆರವಣಿಯಲ್ಲಿ ಪಾಲ್ಗೊಂಡಿದ್ದ ಯುವಕರಲ್ಲಿ ಡಿಜೆಗೆ ಕುಣಿಯುವ ವೇಳೆ ಗಲಾಟೆ ನಡೆದಿದೆ. ಘಟನೆಯಲ್ಲಿ ದರ್ಶನ್ ಪಾಟೀಲ, ಸತೀಶ ಪೂಜಾರಿ, ಪ್ರವೀಣ ಗುಂಡ್ಯಾಗೋಳಗೆ ಗಾಯಗಳಾಗಿದ್ದು, ಮೂವರೂ ಯುವಕರ ಹೊಟ್ಟೆ ಹಾಗು ಎದೆ ಭಾಗಕ್ಕೆ ಚೂರಿ ಇರಿದು ಆರೋಪಿಗಳು ಪರಾರಿಯಾಗಿದ್ದಾರೆ. ತೀವ್ರ ಅಸ್ವಸ್ಥರಾಗಿದ್ದ ಮೂವರು ಯುವಕರನ್ನು ಬಿಮ್ಸ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೂಲಗಳ ಪ್ರಕಾರ ಗಾಯಗೊಂಡವರು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ವಿದ್ಯಾರ್ಥಿಗಳಾಗಿದ್ದಾರೆ. ಶಿವಬಸವ ನಗರದ ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆಯ ಮೆರವಣಿಗೆಯಲ್ಲಿ ಪಾಲ್ಗೊಂಡು ಬೆಳಗಿನ ಜಾವ ಸುಮಾರು 3.30 ಗಂಟೆಗೆ ಕ್ಲಬ್ ರಸ್ತೆಯ ಮೂಲಕ ಹಿಂತಿರುಗಿ ಹೋಗುವಾಗ ಕೆಲ ಯುವಕರು ಅವರ ಮೇಲೆ ಈ ಹಲ್ಲೆ ಮಾಡಿದ್ದಾರೆ. ಅವರು ಓಡಿ ಹೋಗುವಾಗ ಘಟನೆ ಕಂಡವರು ನೀಡಿದ ಮಾಹಿತಿ ಪ್ರಕಾರ ಪೊಲೀಸರು ವಿಶ್ವೇಶ್ವರಯ್ಯ ನಗರದಲ್ಲಿ ಅವರಲ್ಲಿ ಕೆಲವರನ್ನು ಹಿಡಿದಿದ್ದಾರೆ ಎನ್ನಲಾಗಿದೆ.
ಗಣೇಶ ಮೆರವಣಿಗೆಯ ಸಂದರ್ಭದಲ್ಲಿ ವೈಯುಕ್ತಿಕ ವಿಷಯದ ಕಾರಣ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಎಪಿಎಂಸಿ ಪೊಲೀಸರು ಇನ್ನೂ ಕೆಲವರ ಹುಡುಕಾಟದಲ್ಲಿದ್ದಾರೆ.
ಘಟನೆ ವೈಯಕ್ತಿಕವಾಗಿದ್ದು ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲಾಸ್ಪತ್ರೆಗೆ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿ, ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.