ಬೆಂಗಳೂರು, 2- ಜುಲೈ 1 ರಿಂದ ಪ್ರತಿಯೊಂದು ಕುಟುಂಬಕ್ಕೆ 200 ಯುನಿಟ್ ವರೆಗೆ ಉಚಿತ ವಿದ್ಯುತ್, ಜೂನ್ 11 ರಿಂದ ರಾಜ್ಯಾದ್ಯಂತ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಅಗಸ್ಟ 15 ರಿಂದ ರಾಜ್ಯದ ಮನೆಯೊಡತಿಯ ಖಾತೆಗೆ 2,000 ರೂ ಜಮಾ, ಜುಲೈ ಒಂದರಿಂದ ಬಿಪಿಎಲ್ ಕಾರ್ಡುದಾರರಿಗೆ ತಲಾ 10 ಕೆಜಿ ಅಕ್ಕಿ ಮತ್ತು 2022-23 ರಲ್ಲಿ ಪದವಿ ಪಡೆದವರಿಗೆ 24 ತಿಂಗಳುಗಳ ವರೆಗೆ ಪ್ರತಿ ತಿಂಗಳಿಗೆ 3000 ರೂ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಎಲ್ಲ ಐದು ಗ್ಯಾರಂಟಿಗಳ ಜಾರಿಗೆ ಸಚಿವ ಸಂಪುಟ ಇಂದು ಒಪ್ಪಿಗೆ ನೀಡಿದ್ದು ಬೆಳಿಗ್ಗೆಯಿಂದ ನಡೆದ ಸುದೀರ್ಘ ಸಚಿವ ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಕರ್ತರಿಗೆ ವಿವರಣೆ ನೀಡಿದರು. ಕಾಂಗ್ರೆಸ್ ಪಕ್ಷ ಚುನಾವಣೆಗೂ ಮೊದಲು ಜನತೆಗೆ ನೀಡಿದ್ದ ಎಲ್ಲಾ ಗ್ಯಾರೆಂಟಿ ಭರವಸೆಗಳನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಗೃಹ ಜ್ಯೋತಿ – ಮೊದಲ ಗ್ಯಾರಂಟಿ
ಮೊದಲ ಗ್ಯಾರಂಟಿಯಾಗಿ ಗೃಹ ಜ್ಯೋತಿ ಯೋಜನೆಯನ್ನು ಜುಲೈ 1 ರಿಂದ ಜಾರಿ ಮಾಡಲಾಗುವುದು. 200 ಯುನಿಟ್ ವರೆಗೆ ಉಚಿತ ವಿದ್ಯುತ್ ಎಲ್ಲರಿಗೂ ಕೊಡುತ್ತೇವೆ. ಇದನ್ನು ಜಾರಿ ಮಾಡಲು ತೀರ್ಮಾನಿಸಿದ್ದೇವೆ. 199 ಯುನಿಟ್ ವರೆಗೂ ಉಚಿತ ವಿದ್ಯುತ್ ಕೊಡುತ್ತೇವೆ. 12 ತಿಂಗಳ ಸರಾಸರಿ ನೋಡುತ್ತೇವೆ. ಅದರ ಮೇಲೆ 10% ಉಚಿತವಾಗಿ ಕೊಡುತ್ತೇವೆ. ಈ ವರ್ಷದ ಜುಲೈ 1 ರಿಂದ ಉಚಿತ ವಿದ್ಯುತ್ ಯೋಜನೆ ಜಾರಿಯಾಗುತ್ತದೆ. ಆದರೆ ಇದು ವರೆಗೂ ಉಳಿಸಿಕೊಂಡಿರುವ ಹಳೆಯ ಬಾಕಿಯನ್ನು ಜನರೇ ಕಟ್ಟಬೇಕು ಎಂದು ಅವರು ಹೇಳಿದರು.
ಗೃಹ ಲಕ್ಷ್ಮೀ – ಎರಡನೇ ಗ್ಯಾರಂಟಿ
ಗೃಹ ಲಕ್ಷ್ಮೀ ಯೋಜನೆ ಜಾರಿಗೊಳಿಸುತ್ತೇವೆ. ಅದಕ್ಕಾಗಿ ಅರ್ಜಿ ಆಧಾರ್ ಕಾರ್ಡ, ಬ್ಯಾಂಕ್ ವಿವರ ಕೊಡಬೇಕು. ಮನೆ ಯಜಮಾನಿಗೆ ಎಂದು ಹೇಳಿದ್ದೇವೆ. ಅವರ ಖಾತೆಗೆ ತಿಂಗಳಿಗೆ 2,000 ರೂ ಜಮಾ ಮಾಡುತ್ತೇವೆ. ಜೂನ್ 15 ರಿಂದ ಜುಲೈ 15ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಜುಲೈ 15 ರಿಂದ ಅಗಸ್ಟ 15 ರೊಳಗೆ ಪ್ರಕ್ರಿಯೆ ಮಾಡಿ ಅಗಸ್ಟ 15ನೇ ತಾರೀಖು ಎಲ್ಲ ಮನೆಯೊಡತಿಯರ ಖಾತೆಗೆ ಹಣ ಜಮಾ ಮಾಡುತ್ತೇವೆ. ಬಿಪಿಎಲ್ ಮತ್ತು ಎಪಿಎಲ್ ಕಾರ್ಡುದಾರರಿಬ್ಬರೂ ಅರ್ಜಿ ಹಾಕಬಹುದು. ಎಲ್ಲರಿಗೂ ಕೊಡುತ್ತೇವೆ. ಆದರೆ ಅರ್ಜಿ ಸಲ್ಲಿಸುವಾಗ ಮನೆಯಲ್ಲಿ ಯಾರು ಯಜಮಾನಿ ಎಂದು ಸ್ಪಷ್ಟಪಡಿಸಬೇಕು ಎಂದರು.
ಇದು ವರೆಗೂ ವಿಶೇಷ ಚೇತನರು, ಹಿರಿಯ ವಯಸ್ಸಿನವರು, ವಿಧವಾ ವೇತನ ಪಡೆಯುತ್ತಿರುವವರು ಸಹ ಈ ಗೃಹ ಲಕ್ಷ್ಮೀ ಯೋಜನೆಗೆ ಅರ್ಹರಾಗಿದ್ದಾರೆ. ಆ ಪಿಂಚಣಿ ಜೊತೆಗೆ ಈ 2,000 ರೂ ಸಹ ಕೊಡುತ್ತೇವೆ ಎಂದು ಸಿದ್ದರಾಮಯ್ಯ ವಿವರಿಸಿದರು.
10 ಕೆಜಿ ಅಕ್ಕಿ ಉಚಿತ –3ನೇ ಗ್ಯಾರಂಟಿ
ಜುಲೈ 1ನೇ ತಾರೀಖಿನಿಂದ ಎಲ್ಲಾ ಬಿಪಿಎಲ್ ಕಾರ್ಡುದಾರರಿಗೆ ಮತ್ತು ಅಂತ್ಯೋದಯ ಕಾರ್ಡು ಹೊಂದಿರುವವರಿಗೆ ತಲಾ 10 ಕೆಜಿ ಅಕ್ಕಿ ಕೊಡಲಾಗುವುದು. ಅಂತ್ಯೋದಯ ಕಾರ್ಡು ಹೊಂದಿರುವವರಿಗೆ ಸದ್ಯ 35 ಕೆಜಿ ಅಕ್ಕಿ ಕೊಡಲಾಗುತ್ತಿದೆ. ಮುಂದೆ ಅವರಿಗೂ ತಲಾ 10 ಕೆಜಿ ಕೊಡಲಾಗುವುದು. ಸದ್ಯಕ್ಕೆ ಸ್ಟಾಕ್ ಇಲ್ಲ. ಒಂದು ತಿಂಗಳಲ್ಲಿ ಹೇಗಾದರೂ ಮಾಡಿ ಕೊಂಡುಕೊಂಡು ಜುಲೈ 1 ರಿಂದ ತಲಾ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಶಕ್ತಿ – 4ನೇ ಗ್ಯಾರಂಟಿ
ಸಮಾಜದಲ್ಲಿ 50% ಮಹಿಳೆಯರು ಇದ್ದಾರೆ. ಎಲ್ಲಾ ಮಹಿಳೆಯರಿಗೆ ಅವರ ಆರ್ಥಿಕ ಸ್ಥಾನಮಾನ ಹೊರತು ಪಡಿಸಿ ಎಲ್ಲರಿಗೂ ಉಚಿತ ಬಸ್ ಪ್ರಯಾಣ ಘೋಷಿಸುತ್ತಿದ್ದೇವೆ. ಜೂನ್ 11 ರಂದು ಈ ಯೋಜನೆಗೆ ಬೆಂಗಳೂರಿನಲ್ಲಿ ಚಾಲನೆ ನೀಡುತ್ತೇವೆ ಎಂದು ಸಿದ್ದರಾಮಯ್ಯ ಘೋಷಿಸಿದರು.
ನಮ್ಮ ರಾಜ್ಯದೊಳಗೆ, ಕರ್ನಾಟಕದವರಿಗೆ ಮಾತ್ರ ಉಚಿತ ಪ್ರಯಾಣ ಇರುತ್ತದೆ. ಎ.ಸಿ ಬಸ್ ಮತ್ತು ಸ್ಲೀಪರ್ ಬಸ್, ಲಕ್ಸುರಿ ಬಸ್ ಹೊರತುಪಡಿಸಿ ಉಳಿದ ಎಲ್ಲಾ ಬಸ್ಗಳಲ್ಲಿ ಉಚಿತ ಪ್ರಯಾಣವಿರುತ್ತದೆ. ಅಂದರೆ ಶೇ.90 ರಷ್ಟು ಬಸ್ಗಳಲ್ಲಿ ರಾಜ್ಯದ ಎಲ್ಲೆಡೆ ಉಚಿತ ಪ್ರಯಾಣ ಇರುತ್ತದೆ. ಇನ್ನು ಪುರುಷರಿಗೆ 50% ಆಸನ ಮೀಸಲು ಮಾಡಲಾಗುತ್ತದೆ.
ಯುವನಿಧಿ (ಯುವಜನರಿಗೆ 3000 ನಿರುದ್ಯೋಗ ಭತ್ಯೆ) – 5ನೇ ಗ್ಯಾರಂಟಿ
2022-23 ರಲ್ಲಿ ವ್ಯಾಸಂಗ ಮಾಡಿ ಪದವಿ ಪಡೆದವರಿಗೆ 24 ತಿಂಗಳುಗಳ ವರೆಗೆ ಪ್ರತಿ ತಿಂಗಳಿಗೆ 3000 ರೂ ನೀಡಲಾಗುವುದು. ಅರ್ಹರು ಅರ್ಜಿ ಸಲ್ಲಿಸಬೇಕು. ಎಲ್ಲಾ ಜಾತಿ ವರ್ಗದವರೂ, ಮಂಗಳಮುಖಿ ಸಮುದಾಯದವರು ಸಹ ಇದಕ್ಕೆ ಅರ್ಹರು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮೋದಿಯವರು ಪ್ರತಿಯೊಬ್ಬರಿಗೂ 15 ಲಕ್ಷ ರೂ ಕೊಡುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ, ರೈತರ ಆದಾಯ ಡಬಲ್ ಮಾಡುತ್ತೇವೆ, ಅಚ್ಛೇ ದಿನ್ ತರುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಅವುಗಳನ್ನು ಜಾರಿಗೆ ತಂದರೆ? ಎಂದರು. ನಾವು ಹಿಂದೆಯೂ ನುಡಿದಂತೆ ನಡೆದಿದ್ದೇವೆ, ಮುಂದಿಯೂ ನುಡಿದಂತೆ ನಡೆಯುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.