ಬೆಂಗಳೂರು, ೧೭- ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗತೊಡಗಿದ್ದು, ಪಿನ್ ನಂಬರ್ ಪಡೆಯುವ ಮೂಲಕ ಮತ್ತು ಕ್ಯೂಆರ್ ಕೋಡ್ ಕಳುಹಿಸುವ ಮೂಲಕ ಹಣ ಲಪಟಾಯಿಸುತ್ತಿದ್ದಾರೆ. ಇದೀಗ ಇಂಥವುದೇ ಮತ್ತೊಂದು ವಂಚನೆ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರ ನಿವಾಸಿ ಸ್ಮೃತಿ ಎಂಬವರು ಇತ್ತೀಚೆಗೆ ಆನ್ಲೈನ್ ಮೂಲಕ ಸಿಹಿ ತಿನಿಸು ತರಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಅವರು ಆನ್ಲೈನ್ ನಲ್ಲಿ ಕಾಂತಿ ಸ್ವೀಟ್ಸ್ ಮಳಿಗೆಯಿಂದ ರೂ.250 ಮೊತ್ತದ ಸಿಹಿತಿನಿಸು ಬುಕ್ ಮಾಡಿದ್ದರು ಎನ್ನಲಾಗಿದೆ.
ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಕರೆ ಮಾಡಿದವನೊಬ್ಬ ಸಿಹಿ ತಿನಿಸು ಆರ್ಡರ್ ಮಾಡುವ ಮೊದಲು ನೋಂದಣಿ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾನೆ. ಅಷ್ಟೇ ಅಲ್ಲ, ಕ್ಯೂಆರ್ ಕೋಡ್ ಒಂದನ್ನು ಕಳುಹಿಸಿದ್ದಾನೆ. ಇದನ್ನು ನಂಬಿದ ಸ್ಮೃತಿಯವರು ಸ್ಕ್ಯಾನ್ ಮಾಡಿದ ಕೂಡಲೇ ಅವರ ಖಾತೆಯಿಂದ 28,000 ರೂಪಾಯಿ ಕಡಿತವಾಗಿದೆ.
ತಾವು ವಂಚನೆಗೊಳಗಾಗಿರುವುದನ್ನು ಅರಿತ ಸ್ಮೃತಿ ಅವರು ಇದೀಗ ಈಶಾನ್ಯ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.