ಫ್ಲೋರಿಡಾ (ಅಮೇರಿಕಾ), ೧೧-
ಕೋವಿಡ್ – ಎಮ್ ಆರ್ ಎನ್ ಎ ಲಸಿಕೆಯ ಬಳಕೆಯಿಂದ ಹೃದಯ ಸಂಬಂಧ ಕಾಯಿಲೆಗಳ ಅಪಾಯ ಹೆಚ್ಚುತ್ತದೆ ಎಂದು ಅಮೇರಿಕದ ವೈದ್ಯರು ಹೇಳಿದ್ದಾರೆ. ವಿಶೇಷವಾಗಿ 18 ರಿಂದ 39 ವರ್ಷದ ಪುರುಷರಲ್ಲಿ ಈ ಅಪಾಯವು ಹೆಚ್ಚಾಗಿರುತ್ತದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿರುವವರು ಈ ಲಸಿಕೆಯನ್ನು ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಫ್ಲೋರಿಡಾದ ಶಸ್ತ್ರಚಿಕಿತ್ಸಕ ಜನರಲ್ ಡಾ. ಜೋಸೆಫ್ ಎ. ಲಡಾಪೋ ಅವರು, ಸಾರ್ವಜನಿಕರಿಗೆ ತಿಳಿದಿರಬೇಕಾದ ಕೋವಿಡ್ – ಎಮ್ ಆರ್ ಎನ್ ಎ ಲಸಿಕೆಗಳ ವಿಶ್ಲೇಷಣೆಯನ್ನು ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ.
ಈ ವಿಶ್ಲೇಷಣೆಯಲ್ಲಿ 18-39 ಪುರುಷರಲ್ಲಿ ಹೃದ್ರೋಗದ ಕಾರಣದಿಂದ ಸಾವಿನ ಅಪಾಯ ಹೆಚ್ಚುತ್ತಿರುವ ಬಗ್ಗೆ ಹೇಳಲಾಗಿದೆ.
ಈ ವಿಶ್ಲೇಷಣೆಯನ್ನು ಫ್ಲೋರಿಡಾ ಆರೋಗ್ಯ ಇಲಾಖೆಯು ಸೆಲ್ಫ್ ಕಂಟ್ರೋಲ್ ಕೇಸ್ ಸಿರೀಸ್ ಮೂಲಕ ಮಾಡಲಾಗಿದೆ. ಇದು ಮೂಲತಃ ಲಸಿಕೆ ಸುರಕ್ಷತೆಯನ್ನು ಮೌಲ್ಯಮಾಪನ ಮಾಡಲು ಅಭಿವೃದ್ಧಿಪಡಿಸಿದ ತಂತ್ರವಾಗಿದೆ.
ಕೋವಿಡ್ – ಎಮ್ ಆರ್ ಎನ್ ಎ ವ್ಯಾಕ್ಸಿನೇಷನ್ ನಂತರ 28 ದಿನಗಳಲ್ಲಿ 18-39 ವರ್ಷ ವಯಸ್ಸಿನ ಪುರುಷರಲ್ಲಿ ಹೃದ್ರೋಗ ಕಾರಣದಿಂದ ಸಂಭವಿಸುವ ಸಾವಿನ ಪ್ರಮಾಣದಲ್ಲಿ 84% ಹೆಚ್ಚಳ ಕಂಡು ಬಂದಿದೆ ಎಂದು ಹೇಳಲಾಗಿದೆ.
ಮಯೋಕಾರ್ಡಿಟಿಸ್ ಮತ್ತು ಪೆರಿಕಾರ್ಡಿಟಿಸ್ನಂತಹ ಹೃದಯದ ಕಾಯಿಲೆಗಳನ್ನು ಹೊಂದಿರುವ ರೋಗಿಗಳು ಈ ಲಸಿಕೆಯನ್ನು ತೆಗೆದುಕೊಳ್ಳುವಾಗ ಹೆಚ್ಚು ಜಾಗರೂಕರಾಗಿರಬೇಕು. ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಹೇಳಲಾಗಿದೆ.
ಈ ಲಸಿಕೆಗೆ ಸಂಬಂಧಿಸಿದಂತೆ ಸಂಶೋಧನೆಯಲ್ಲಿ ಕಂಡುಬಂದಿರುವ ಅಪಾಯವು ಬೇರೆ ಯಾವುದೇ ಲಸಿಕೆಯಲ್ಲಿ ಕಂಡುಬಂದಿಲ್ಲ.
ಲಸಿಕೆ ಸೇರಿದಂತೆ ಯಾವುದೇ ಔಷಧದ ಸುರಕ್ಷತೆ ಮತ್ತು ಪರಿಣಾಮದ ಬಗೆಗಿನ ಅಧ್ಯಯನವು ಸಾರ್ವಜನಿಕ ಆರೋಗ್ಯದ ಪ್ರಮುಖ ಅಂಶವಾಗಿದೆ ಎಂದು ಸರ್ಜನ್ ಜನರಲ್ ಡಾ ಜೋಸೆಫ್ ಲಡಾಪೋ ತಿಳಿಸಿದ್ದಾರೆ. ಇದೀಗ ಈ ಲಸಿಕೆಯಲ್ಲಿ ಸುರಕ್ಷತೆಗೆ ಸ್ವಲ್ಪ ಗಮನ ನೀಡಲಾಗಿದೆ ಎಂದು ಹೇಳಲಾಗಿದೆ.