ಬಾಗಲಕೋಟ, ೨೬:: ಜಿಲ್ಲೆಯ ಬಾದಾಮಿ ಬನಶಂಕರಿ ಜಾತ್ರೆ ಮುಗಿಸಿಕೊಂಡು ತಮ್ಮೂರಿಗೆ ತೆರಳುತ್ತಿದ್ದ ನಾಲ್ವರು ಭೀಕರ ಅಪಘಾತದಲ್ಲಿ ಮಸಣ ಸೇರಿದ ದಾರುಣ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ ಕ್ರಾಸ್ ಬಳಿ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ವಿಜಯಪುರ ತಾಲೂಕಿನ ಹೊನಗನಳ್ಳಿ ಗ್ರಾಮ ಓರ್ವ ಮಹಿಳೆ ಹಾಗೂ ನಾಲ್ವರು ಯುವಕರು, ಗುರುವಾರ ಸಂಜೆ ಬನಶಂಕರಿ ಜಾತ್ರೆಗೆ ಬಂದಿದ್ದರು. ದೇವಿಯ ರಥೋತ್ಸವ ಹಾಗೂ ರಾತ್ರಿ ನಾಟಕ ನೋಡಿಕೊಂಡು, ಸಂಭ್ರಮದ ಜಾತ್ರೆ ಮಾಡಿದ್ದರು. ಗುರುವಾರ ಮಧ್ಯರಾತ್ರಿ ಬಾದಾಯಿಂದ ಹೊರಟಿದ್ದರು. ಶುಕ್ರವಾರ ಬೆಳಗಿನ ಜಾವ ಸುನಗಾ ಕ್ರಾಸ್ ಬಳಿ ಕಬ್ಬು ತುಂಬಿಕೊಂಡು ಹೊರಟಿದ್ದ ಟ್ರ್ಯಾಕ್ಟರ್ ಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕಬ್ಬಿನ ಟ್ರ್ಯಾಕ್ಟರ ಒಳಗೆ ಕಾರು ಸಿಲುಕಿದೆ. ಮೃತ ದೇಹಗಳನ್ನು ಹೊರ ತೆಗೆಯಲು ಜೆಸಿಬಿ ಯಂತ್ರ ಬಳಸಬೇಕಾಯಿತು.
ಮೃತರನ್ನು ವಿಜಯಪುರ ತಾಲೂಕಿನ ಹೊನಗನಹಳ್ಳಿ ಗ್ರಾಮದ ಕಾರು ಚಾಲಕ ಮಲ್ಲು ಪೂಜಾರಿ (24), ಕಲ್ಲಪ್ಪ ಕೌಟಗಿ, (34), ಕಾಮಾಕ್ಷಿ ಬಡಿಗೇರ (35), ತುಕಾರಾಮ ತಳೇವಾಡ (30) ಎಂದು ಗುರುತಿಸಲಾಗಿದೆ.
ಘಟನೆ ಬೆನ್ನಲ್ಲೆ ಸ್ಥಳಕ್ಕೆ ಬಾಗಲಕೋಟ ಎಸ್.ಪಿ. ಅಮರನಾಥ ರೆಡ್ಡಿ ಭೇಟಿ ನೀಡಿದ್ದು, ಜೆಸಿಬಿ ಮೂಲಕ ಕಬ್ಬು ತೆರವುಗೊಳಿಸಿ ಕಾರು ಹೊರ ತೆಗೆಯಲಾಯಿತು.
ಮೃತ ದೇಹಗಳನ್ನು ಬೀಳಗಿ ತಾಲೂಕಾಸ್ಪತ್ರೆಗೆ ಶವಪರೀಕ್ಷೆಗೆ ಕೊಂಡೊಯ್ಯಲಾಯಿತು. ಸ್ಥಳದಲ್ಲಿ ಮೃತರ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ಸುಮಾರು 200 ಮನೆಗಳನ್ನು ಹೊಂದಿರುವ ಹೊನಗನಹಳ್ಳಿಯಲ್ಲಿ ಒಂದೇ ಅಪಘಾತದಲ್ಲಿ ನಾಲ್ಕು ಕುಟುಂಬಗಳ ಸದಸ್ಯರು ಅಸುನೀಗಿದ್ದು ತೀವ್ರ ಆಘಾತಕ್ಕೆ ಕಾರಣವಾಗಿದೆ.