ಬೆಂಗಳೂರು, ೩೦: ಹಳೆಯ ಬಟ್ಟೆ ಅಥವಾ ಕೊಳಕು ಬಟ್ಟೆ ಹಾಕಿಕೊಂಡು ಬರುವ ಬಡವರೊಂದಿಗೆ ಮಾನವೀಯತೆಯಿಂದ ನಡೆಸಿಕೊಂಡು ಬಡವ-ಶ್ರೀಮಂತ ಅನ್ನದೇ ಉತ್ತಮ ಆರೋಗ್ಯ ಸೇವೆ ನೀಡಬೇಕು ಎಂದು ವೈದ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುವಾರ ವಿಧಾನಸೌಧದ ಹೊರ ಮೆಟ್ಟಿಲುಗಳ ಮೇಲೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 262 ಆಧುನಿಕ ಜೀವರಕ್ಷಕ ಅಂಬ್ಯುಲೆನ್ಸಗಳ ಲೋಕಾರ್ಪಣೆ ಮಾಡಿ ಅವರು ಮಾತನಾಡಿ, ಚಿಕಿತ್ಸೆ ಸಿಗದೇ ಯಾರೂ ಪ್ರಾಣ ಕಳೆದುಕೊಳ್ಳುವಂತೆ ಆಗಬಾರದು ಎನ್ನುವ ಕಾರಣಕ್ಕೇ ತುರ್ತು 108 ಅಂಬ್ಯುಲೆನ್ಸ್ಗಳನ್ನು ಆರೋಗ್ಯ ಸೇವೆಗೆ ಒದಗಿಸಲಾಗಿದೆ. ರಾಜ್ಯದಲ್ಲಿ 840ಕ್ಕೂ ಹೆಚ್ಚು ಆಂಬ್ಯುಲೆನ್ಸ್ಗಳ ಅಗತ್ಯವಿದೆ. ಪ್ರತಿ ತಾಲ್ಲೂಕಿನಲ್ಲಿ 4 ಆಂಬ್ಯುಲೆನ್ಸ್ಗಳು ಕಾರ್ಯನಿರ್ವಹಿಸುತ್ತ ಪ್ರತಿ ದಿನ ನೂರಾರು ಮಂದಿಗೆ ತುರ್ತು ಆರೋಗ್ಯ ಸೇವೆ ಒದಗಿಸುತ್ತಿವೆ ಎಂದು ತಿಳಿಸಿದರು.
ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಆರ್ಐ ಸ್ಕ್ಯಾನಿಂಗ್ ಸೌಲಭ್ಯ ಇರಬೇಕು. ಖಾಸಗಿ ಡಯಾಗ್ನಸ್ಟಿಕ್ ಸೆಂಟರ್ಗಳಲ್ಲಿ ಸೇವಾವೆಚ್ಚ ದುಬಾರಿ ಆಗಿರುವುದರಿಂದ ಬಡವರಿಗೆ ಕಷ್ಟ ಆಗುತ್ತಿದೆ ಎಂದು ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಾವಿರಾರು ಮಂದಿ ಬೇಡಿಕೆ ಅರ್ಜಿ ಕೊಡುತ್ತಿದ್ದು ಪರಿಶೀಲಿಸುವುದಾಗಿ ಅವರು ಹೇಳಿದರು.
ರಾಜ್ಯದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ದವಾಗಿದ್ದು, ಜಯದೇವ ಆಸ್ಪತ್ರೆಯಲ್ಲಿರುವ ಮಾದರಿಯಲ್ಲಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಆರೋಗ್ಯ ಸೇವೆ ಸಿಗಬೇಕು ಎನ್ನುವುದು ನಮ್ಮ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಉತ್ತರ ಕರ್ನಾಟಕದ ಕಡೆ ಹೆಚ್ಚಿನ ಗಮನ ನೀಡುವಂತೆ ಆರೋಗ್ಯ ಸಚಿವ ದಿನೇಶ ಗುಂಡೂರಾವ ಅವರಿಗೆ ಈ ಸಂದರ್ಭದಲ್ಲಿ ಸಲಹೆಯನ್ನೂ ಮುಖ್ಯಮಂತ್ರಿ ನೀಡಿದರು.
ಜಯದೇವ ಆಸ್ಪತ್ರೆಯಿಂದ ಉತ್ತಮಸೇವೆ ಸಾಧ್ಯ ಆಗಿರುವಾಗ ಇತರ ಕಡೆಗಳಲ್ಲೂ ಅದೇ ಗುಣಮಟ್ಟದ ಸೇವೆ ಒದಗಿಸಲು ಸಾಧ್ಯವಿದೆ. ರಾಜ್ಯ ಸರ್ಕಾರ ಆ ದಿಕ್ಕಿನಲ್ಲಿ ಶ್ರಮಿಸುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.