ಗೋಕಾಕ, ಜುಲೈ ೨: ಗೋಕಾಕ-ಬೆಳಗಾವಿ ರಸ್ತೆಯ ಕಡಬಗಟ್ಟಿ ಗ್ರಾಮದ ಮೂಲಕ ರಸ್ತೆಯಲ್ಲಿ ಸಾಗುತ್ತಿದ್ದ ಕಾರೊಂದನ್ನು ತಪಾಸಣೆ ಮಾಡಿದಾಗ 100 ಮತ್ತು 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿದ್ದು, ಐವರನ್ನು ಬಂಧಿಸಲಾಗಿದೆ.
ಗಸ್ತು ಪೊಲೀಸರು ನಡೆಸಿದ ತಪಾಸಣೆ ವೇಳೆ ಪ್ರಕರಣ ಬೆಳಕಿಗೆ ಬಂದಿದ್ದು 100 ಹಾಗೂ 500 ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾದವು.
ಮೂಡಲಗಿ ತಾಲ್ಲೂಕಿನ ಅರಭಾವಿಯ ಅನ್ವರ ಮೊಹ್ಮದ ಸಲೀಮ ಯಾದವಾಡ, ಮಹಾಲಿಂಗಪೂರದ ಸದ್ದಾಮ ಮುಸಾ ಯಡಹಳ್ಳಿ, ರವಿ ಚನ್ನಪ್ಪ ಹ್ಯಾಗಡಿ, ದುಂಡಪ್ಪ ಮಹಾದೇವ ವನಶೆಣವಿ ಮತ್ತು ವಿಠ್ಠಲ ಹಣಮಂತ ಹೊಸಕೋಟಿ ಬಂಧಿತ ಆರೋಪಿಗಳಾಗಿದ್ದಾರೆ.
ಖೋಟಾ ನೋಟು ಪ್ರಿಂಟ್ ಮಾಡಿ ಚಲಾವಣೆ ಮಾಡುವ ಹಾಗೂ ಮನಿ ಡಬಲಿಂಗ್ ಮಾಡಿ ಜಿಲ್ಲೆಯ ಹಲವೆಡೆ ಅಸಲಿ ನೋಟು ಎಂದು ನಂಬಿಸಿ ಮೋಸ ಮಾಡಲಾಗಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ತಿಳಿಸಿದ್ದಾರೆ.
ಗೋಕಾಕ, ಹಿಡಕಲ್ ಡ್ಯಾಮ್, ಮುಧೋಳ, ಮಹಾಲಿಂಗಪುರ, ಬೆಳಗಾವಿ, ಧಾರವಾಡ ಮುಂತಾದ ನಗರಗಳಲ್ಲಿ ಒಂದು ಲಕ್ಷ ಅಸಲಿ ನೋಟುಗಳ ಬದಲಿಗೆ ನಾಲ್ಕು ಲಕ್ಷ ನೋಟು ನೀಡಿದ್ದಾಗಿ ಪೊಲೀಸರ ತನಿಖೆ ಸಮಯದಲ್ಲಿ ಆರೋಪಿಗಳು ಒಪ್ಪಿಕೊಂಡಿದ್ದಾರೆಂದು ತಿಳಿದು ಬಂದಿದೆ.
ಖೋಟಾ ನೋಟುಗಳನ್ನು ಪ್ರಿಂಟ್ ಮಾಡಲು ಉಪಯೋಗಿಸಿದ ಕಂಪ್ಯೂಟರ್, ಸಿಪಿಯು, ಪ್ರಿಂಟರ್, ಸ್ಕ್ರೀನಿಂಗ್ ಬೋರ್ಡ, ಪೇಂಟ್, ಶೈನಿಂಗ್, ಸ್ಟಿಕರ್, ಡಿಕೋಟಿಂಗ್ ಪೌಡರ್, ಪ್ರಿಂಟಿಂಗ್ ಪೇಪರ್, ಕಟರ್ ಬ್ಲೇಡ್ ಗಳು, ಆರು ಮೊಬೈಲ್, ಒಂದು ಬಿಳಿ ಬಣ್ಣದ ಕಾರು ಸೇರಿದಂತೆ 52,3900 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಗೋಕಾಕ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.