ಕೋಲಾರ : ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ತಂದೆಯೇ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೋಡಗುರ್ಕಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಪ್ರಿಯತಮೆಯ ಸಾವಿನ ಸುದ್ದಿ ತಿಳಿದು ಆಘಾತಕ್ಕೆ ಒಳಗಾದ ಯುವಕ ತಾನೂ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೋಡಗುರ್ಕಿ ಗ್ರಾಮದ 23 ವರುಷದ ಪರಿಶಿಷ್ಟ ಜಾತಿಯ ಗಂಗಾಧರ ಮತ್ತು 20 ವರುಷದ ಗೊಲ್ಲ ಸಮುದಾಯದ ಕೀರ್ತಿ ಒಂದು ವರುಷದಿಂದ ಪ್ರೀತಿಸುತ್ತಿದ್ದರು. ಇದು ಗೊತ್ತಾಗಿ ಕೀರ್ತಿಯ ತಂದೆ ಕೃಷ್ಣಮೂರ್ತಿ ಮಂಗಳವಾರ ಬೆಳಿಗ್ಗೆ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಈ ವಿಷಯ ತಿಳಿದ ಯುವಕ ಆಘಾತಗೊಂಡು ಮೈಸೂರು-ಚೆನ್ನೈ ಎಕ್ಸ್ಪ್ರೆಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೆಜಿಎಫ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ಓದುತ್ತಿದ್ದ ಕೀರ್ತಿ ಮತ್ತು ಗಂಗಾಧರನ ಮನೆಗಳು ಒಂದೇ ಕಡೆ ಇವೆ. ದ್ವಿತೀಯ ಪಿಯುಸಿ ಅನುತ್ತೀರ್ಣನಾಗಿದ್ದ ಗಂಗಾಧರ ಗಾರೆ ಕೆಲಸ ಮಾಡುತ್ತಿದ್ದ. ತಮ್ಮಿಬ್ಬರ ಪ್ರೀತಿಯ ವಿಷಯವನ್ನು ಗಂಗಾಧರನು ಕೀರ್ತಿಯ ತಂದೆ ಕೃಷ್ಣಮೂರ್ತಿಗೆ ತಿಳಿಸಿ ಮದುವೆ ಮಾಡಿಕೊಡಲು ಕೇಳಿದ್ದ. ಆದರೆ ಜಾತಿಯ ಕಾರಣದಿಂದ ಕೀರ್ತಿಯ ಮನೆಯವರು ಮದುವೆಗೆ ಒಪ್ಪಿರಲಿಲ್ಲ ಮತ್ತು ಗಂಗಾಧರನನ್ನು ಮರೆತುಬಿಡು ಎಂದು ಕೀರ್ತಿಯ ಪೋಷಕರು ಆಕೆಗೆ ಹಲವು ಬಾರಿ ಹೇಳಿದ್ದರು.
ಆದರೆ ಈ ಪ್ರೇಮಿಗಳಿಬ್ಬರು ತಮ್ಮ ಪ್ರೀತಿಯನ್ನು ಮುಂದುವರೆಸಿದ್ದಾರೆ. ಈ ವಿಚಾರವಾಗಿ ಮಂಗಳವಾರ ಬೆಳಿಗ್ಗೆ ಕೀರ್ತಿ ಹಾಗೂ ಆಕೆಯ ತಂದೆ ಕೃಷ್ಣಮೂರ್ತಿ ನಡುವೆ ವಾಗ್ವಾದ ಬೆಳೆದು, ಕೋಪಗೊಂಡ 42 ವರುಷದ ಕೃಷ್ಣಮೂರ್ತಿಯು ಮಗಳ ಹತ್ತು ಹಿಸುಕಿ ಸಾಯಿಸಿದ್ದಾನೆ. ತಾನು ಗಾಢವಾಗಿ ಪ್ರೀತಿಸುತ್ತಿದ್ದ ಕೀರ್ತಿ ಸತ್ತಿರುವುದನ್ನು ಕಂಡ ಗಂಗಾಧರ ಅದೇ ಗ್ರಾಮದ ಬಳಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಬಗ್ಗೆ ಕೋಲಾರ ಎಸ್ಪಿ ಧರಣಿದೇವಿ ಮಾಲಗತ್ತಿ ಮಾಹಿತಿ ನೀಡಿದ್ದು, ”ಪ್ರೀತಿಸಿದ ಯುವಕನನ್ನೇ ಮದುವೆಯಾಗುವುದಾಗಿ ಕೀರ್ತಿ ಹಟ ಹಿಡಿದಿದ್ದಳು. ಈ ಸಂಬಂಧ ಯುವತಿಯ ಮನೆಯಲ್ಲಿ ಸೋಮವಾರ ರಾತ್ರಿ ಜಗಳ ನಡೆದಿತ್ತು. ಮಂಗಳವಾರ ಬೆಳಿಗ್ಗೆ ಕೃಷ್ಣಮೂರ್ತಿ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಇದು ಗೊತ್ತಾಗಿ ಯುವಕ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಕೃಷ್ಣಮೂರ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.