ಬೆಂಗಳೂರು: ಈ ಹಿಂದೆ ನಂದಿನ ಹಾಲು, ಮೊಸರಿನ ದರವನ್ನು ಪ್ರತಿ ಲೀಟರ್ ಗೆ 3 ರೂ ಹೆಚ್ಚಳ ಮಾಡುತ್ತಿರುವುದಾಗಿ ಕೆ ಎಂಎಫ್ ಘೋಷಣೆ ಮಾಡಿತ್ತು. ಆದರೆ ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಡೆ ನೀಡಿದ್ದರು. ಬಳಿಕ ಸಭೆ ನಡೆಸಿ ಯಾವುದೇ ತೊಂದರೆಯಾಗದಂತೆ ದರ ಹೆಚ್ಚಳಕ್ಕೆ ಸಭೆಯಲ್ಲಿ ಸಲಹೆ ಮಾಡಿದ್ದರು.
ಬೊಮ್ಮಾಯಿ ಸಲಹೆಯಂತೆ ಇಂದು ನಂದಿನ ಹಾಲು, ಮೊಸರಿನ ದರವನ್ನು ಪ್ರತಿ ಲೀಟರ್ ಗೆ 2 ರೂ ಹೆಚ್ಚಳ ಮಾಡಲಾಗಿದೆ. ಈ ಕುರಿತಂತೆ ಇಂದಿನ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ನಂದಿನ ಉತ್ಪನ್ನಗಳ ದರ ಹೆಚ್ಚಳ ಸಂಬಂಧ ಮಹತ್ವದ ಸಭೆಯನ್ನು ನಡೆಸಲಾಯಿತು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆ ಎಂ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು, ನಂದಿನಿ ಹಾಲು, ಮೊಸರಿನ ದರವನ್ನು ಪ್ರತಿ ಲೀಟರ್ ಗೆ 2 ರೂ ಹೆಚ್ಚಳ ಮಾಡಲಾಗಿದೆ ಎಂದರು.
ದರ ಹೆಚ್ಚಳದ ಸೌಲಭ್ಯವನ್ನು ರೈತರು ಪಡೆಯಲಿದ್ದಾರೆ ಎಂಬುದಾಗಿಯೂ ಅವರು ಹೇಳಿದರು.