ಜಲಂಧರ, ೨೩- ಪಂಜಾಬಿನ ಜಲಂಧರ್ ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಕೂಲಿ ಕಾರ್ಮಿಕ ವ್ಯಕ್ತಿಯೊಬ್ಬನನ್ನು ಕಾರಿನಲ್ಲಿ ಅಪಹರಿಸಿದ ನಾಲ್ವರು ಯುವತಿಯರು ಆತನ ಮೇಲೆ ನಿರ್ಜನ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಆದರೆ ಅಚ್ಚರಿಯ ಸಂಗತಿ ಎಂದರೆ ಈತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ, ಬದಲಾಗಿ ಖಾಸಗಿ ಮಾಧ್ಯಮ ಒಂದರ ಮುಂದೆ ಈ ವೃತ್ತಾಂತ ಹೇಳಿಕೊಂಡಿದ್ದಾನೆ.
ಈ ವ್ಯಕ್ತಿಯ ಪ್ರಕಾರ ಸೋಮವಾರದಂದು ಕಪೂರ್ತಲಾ ರಸ್ತೆಯಲ್ಲಿ ಮನೆಗೆ ತೆರಳುತ್ತಿದ್ದಾಗ ಬಿಳಿ ಕಾರಿನಲ್ಲಿ ಬಂದ ನಾಲ್ವರು ಯುವತಿಯರು ವಿಳಾಸ ಕೇಳುವ ನೆಪದಲ್ಲಿ ಆತನನ್ನು ನಿಲ್ಲಿಸಿದ್ದಾರೆ. ಅವರು ನೀಡಿದ ಚೀಟಿಯನ್ನು ನೋಡುವಾಗ ಆತನ ಮುಖಕ್ಕೆ ಕೆಮಿಕಲ್ಸ್ ಸ್ಪ್ರೇ ಮಾಡಿದ್ದು, ಆತ ಪ್ರಜ್ಞೆ ತಪ್ಪಿದ್ದಾನೆ. ಈತನಿಗೆ ಮರಳಿ ಪ್ರಜ್ಞೆ ಬಂದಾಗ ಕೈಗಳನ್ನು ಹಿಂದಕ್ಕೆ ಕಟ್ಟಿಹಾಕಿ ಕಣ್ಣಿಗೆ ಪಟ್ಟಿ ಕಟ್ಟಿರುವುದು ಗೊತ್ತಾಗಿದೆ.
ಬಳಿಕ ಕಾರಿನಲ್ಲಿ ಆತನನ್ನು ನಿರ್ಜನ ಕಾಡು ಪ್ರದೇಶಕ್ಕೆ ಕರೆದೊಯ್ದ ಯುವತಿಯರು ಡ್ರಗ್ಸ್ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿದರು ಎಂದು ದೂರಿದ್ದಾನೆ. ಅವರೆಲ್ಲರೂ ಪ್ರತಿಷ್ಠಿತ ಕುಟುಂಬಗಳಿಂದ ಬಂದವರಂತೆ ಕಾಣುತ್ತಿದ್ದರು. ತಮ್ಮ ತಮ್ಮಲ್ಲಿ ಇಂಗ್ಲೀಷಿನಲ್ಲಿ ಮಾತನಾಡುತ್ತಿದ್ದರಲ್ಲದೇ ನನ್ನ ಬಳಿ ಮಾತನಾಡುವಾಗ ಪಂಜಾಬಿಯಲ್ಲಿ ಮಾತನಾಡಿದರು ಎಂದು ಹೇಳಿದ್ದಾನೆ.
ಅವರೆಲ್ಲರೂ ಮದ್ಯ ಜೊತೆಗೆ ಡ್ರಗ್ಸ್ ಸಹ ಸೇವಿಸಿದರು. ನನಗೂ ಸಹ ಮದ್ಯ ಸೇವಿಸಲು ಒತ್ತಾಯಿಸಿದರು ಎಂದು ಹೇಳಿರುವ ವ್ಯಕ್ತಿಯು ಅತ್ಯಾಚಾರದ ಬಳಿಕ ನನ್ನನ್ನು ರಸ್ತೆಯಲ್ಲಿ ಬಿಟ್ಟು ಹೋದರು ಎಂದು ತಿಳಿಸಿದ್ದಾನೆ.
ಈ ವಿಚಾರ ನನ್ನ ಪತ್ನಿಯ ಬಳಿ ಹೇಳಿದಾಗ ಆಕೆ ದೂರು ನೀಡುವುದು ಬೇಡ ಎಂದು ಹೇಳಿದ ಕಾರಣ ಪೊಲೀಸರ ಬಳಿ ಹೋಗಿಲ್ಲ ಎಂದು ಹೇಳಿದ್ದಾನೆ. ಈ ವಿಚಾರ ಮಾಧ್ಯಮದಲ್ಲಿ ಬರುತ್ತಿದ್ದಂತೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.