ಹುಬ್ಬಳ್ಳಿ: ಕಳೆದೆರಡು ವರ್ಷಗಳಿಂದ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಹೋರಾಟ ನಡೆಯುತ್ತಿದೆಯಾದರೂ ಇನ್ನೊಂದೆಡೆ ಆ ಸಮುದಾಯವನ್ನು 2ಎ ಮೀಸಲಾತಿಗೆ ನೀಡಬಾರದು ಎಂಬ ಒತ್ತಡವೂ ಸರ್ಕಾರದ ಮೇಲಿದೆ.
ಇದೀಗ ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟಕ್ಕೆ ಸೆಡ್ಡು ಹೊಡೆದಿರುವ ಹಲವು ಸ್ವಾಮೀಜಿಗಳು ಚಿಂತನ ಮಂಥನ ನಡೆಸಲು ಮುಂದಾಗಿದ್ದಾರೆ.
ಹುಬ್ಬಳ್ಳಿ ನಗರದ ಅಕ್ಕನ ಬಳಗದಲ್ಲಿ ನಡೆಯುವ ರಾಜ್ಯ ಮಟ್ಟದ ಹೋರಾಟ ಜಾಗೃತಿ ಕಾರ್ಯಕ್ರಮದಲ್ಲಿ ಹತ್ತಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗಿಯಾಗಲಿದ್ದು, ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟ, ಹಡಪದ, ಗಂಗಾಮತ, ವಿಶ್ವಕರ್ಮ, ಮಡಿವಾಳ, ಚಿತ್ರಗಾರ, ಎಸ್.ಎಸ್.ಕೆ, ಮರಾಠಾ, ಗಾಣಿಗ, ಸಮಾಜ, ರಜಕ, ಉಪ್ಪಾರ, ಸೂರ್ಯವಂಶ ಸಮಾಜದ ಮುಖಂಡರು ಕೂಡ ಭಾಗಿಯಾಗಲಿದ್ದಾರೆ.
ಪಂಚಮಸಾಲಿ ಸಮುದಾಯವು 2 ಎ ಮೀಸಲಾತಿ ಸಿಗದೇ ಹೋದರೆ ನವೆಂಬರ್ ಮೊದಲನೆಯ ವಾರದಲ್ಲಿ ವಿಧಾನಸಭೆ ಮುತ್ತಿಗೆ ಹಾಕಲಾಗುವುದು. ವಿಧಾನಸಭೆ ಚುನಾವಣೆಯಲ್ಲಿ ಸರ್ಕಾರಕ್ಕೆ ಸಮುದಾಯದ ಶಕ್ತಿ ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ನಡುವೆ ಯಾವುದೇ ಕಾರಣಕ್ಕೂ ಮುಂದುವರಿದ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬಾರದು ಎಂದು ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟ ಆಗ್ರಹಿಸುತ್ತಿದ್ದು ಮೀಸಲಾತಿ ನೀಡಿದರೆ ಯಾವ ರೀತಿ ಹೋರಾಟ ಮಾಡಬೇಕೆಂದು ಇಂದು ನಡೆಯುವ ಸಭೆಯಲ್ಲಿ ನಿರ್ಧಾರ ಮಾಡಲಾಗುತ್ತದೆ.