ಭಾವನಾತ್ಮಕ ಸಂಗತಿ ಬಳಸಿ ವಿವಾದ ಹುಟ್ಟು ಹಾಕಿ ಅದರಿಂದ ಲಾಭ ಮಾಡಿಕೊಳ್ಳುವುದು ಒಂದು ಪಕ್ಷದ ಸಿದ್ಧ ತಂತ್ರ. ಆ ಪಕ್ಷದಲ್ಲಿ ಸಿದ್ಧಾಂತ ಎಂಬುದಿದೆಯಾದರೂ ಅದು ಕೇವಲ ಕಾಗದದ ಮೇಲಿನ ಬದನೆಕಾಯಿ. ಅಲ್ಲಿ ಇರುವುದು ವಿಚಿತ್ರ ಮನಃಸ್ಥಿತಿ. ಹೀಗಾಗಿ ಅಲ್ಲೊಬ್ಬ ಕೆಮ್ಮಿದರೆ ಸಾಕು, ಬಾಕಿ ಉಳಿದವರು ಅದೇ ರೀತಿ ಕೆಮ್ಮಲು ತೊಡಗುತ್ತಾರೆ. ನೀವು ಯು ಟ್ಯೂಬ್‍ನಲ್ಲಿ ಸಾರು ತಯಾರಿಕೆಯ ವಿಡಿಯೋ ನೋಡಲು ಆರಂಭಿಸಿದರೆ, ಅದರ ಕೆಳಗೆ ಅದೇ ರೀತಿಯ ಇನ್ನೂ ಹತ್ತಾರು ವಿಡಿಯೋಗಳು ಸಾಲಾಗಿ ಬಂದು ನಿಲ್ಲುವಂತೆ ಇವು. ಈಗ ಬಿಜೆಪಿ ಕೈ ಹಾಕಿರುವ ಹಾಲಿನ ಸಮಾಚಾರ ಕೂಡ ಇಂಥದ್ದೇ. ಇದು ಸದ್ಯಕ್ಕೆ ಇಷ್ಟಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.
ನಮ್ಮಲ್ಲಿ ಹಾಲಿಗೆ ಪವಿತ್ರ ಸ್ಥಾನ ಇದೆ. ಬಹುಪಾಲು ಮನೆಗಳಲ್ಲಿ ರವಿವಾರ ಸಂಜೆ ಹಿಂಡುವ ಹಾಲನ್ನು ಮರುದಿನ ಬೆಳಗಿನ ಪೂಜೆಯ ನೈವೇದ್ಯಕ್ಕೆ ಎಂದು ಎತ್ತಿಡುತ್ತಾರೆ. ಅದನ್ನು ಮೀಸಲು ಹಾಲು ಎಂದು ಕರೆಯುತ್ತಾರೆ. ಮರುದಿನದ ಪೂಜೆಯಲ್ಲದೇ ಬೇರೆ ಯಾವುದಕ್ಕೂ ಅದನ್ನು ಬಳಸುವುದಿಲ್ಲ. ನಮ್ಮಲ್ಲಿ ಹಾಲನ್ನು ತಿರುಗಿ ಮಾರಬೇಕು. ನೀವು ಇದ್ದಲ್ಲಿಗೆ ಬಂದು ಜನ ಕೊಳ್ಳುವುದಿಲ್ಲ. ಅದಕ್ಕೆಂದೇ ಗೌಳಿಗರ ಒಂದು ಸಮುದಾಯವೇ ನಿರ್ಮಾಣ ಆಯಿತು. ಇಂಥವರು ಸಾಮಾನ್ಯವಾಗಿ ಹಳ್ಳಿಗಳಲ್ಲಿ ನೆಲೆಸಿದವರು. ತಾವು ಸಂಗ್ರಹಿಸಿದ ಹಾಲನ್ನು ಹತ್ತಿರದ ನಗರಗಳಿಗೆ ಕೊಂಡೊಯ್ದು ಮಾರುವವರು. ಅದನ್ನು ಹೆಚ್ಚಾಗಿ ಮಾಸಿಕ ಲೆಕ್ಕದಲ್ಲಿಯೇ ವ್ಯವಹರಿಸುವರು. ಹೆಚ್ಚುವರಿ ಹಾಲು ಪಡೆದ ದಿನ ಅದನ್ನು ಗೋಡೆಯ ಮೇಲೆ ಒಂದು ಸಣ್ಣ ಗೆರೆ ಎಳೆಯುವುದರ ಮೂಲಕ ನೆನಪಲ್ಲಿ ಇಟ್ಟುಕೊಳ್ಳುವುದು ಪದ್ಧತಿ ಇತ್ತು. ಹಾಲು, ಮೊಸರು ಒಂದು ಸಮುದಾಯ ಅಥವಾ ಪ್ರದೇಶದ ಸಮೃದ್ಧಿಯ ಸಂಕೇತ.
ಇಂಥ ಹಾಲು ಮಾರಾಟ ಆಗದೇ ಉಳಿದಾಗ ಅದನ್ನು ಲಾಭದಾಯಕವಾಗಿ ಹೇಗೆ ಬಳಸುವುದು ಎಂಬ ಪ್ರಶ್ನೆ ಬಂದಾಗ, ಅದನ್ನು ಮೊಸರು ಮಾಡಿ, ಬೆಣ್ಣೆ ತೆಗೆದು ಮಾರುವುದು ಒಂದು ಕ್ರಮ. ಅದೇ ರೀತಿ ಸಿಹಿ ತಿಂಡಿಗಳನ್ನು ಮಾಡಿ ಮಾರುವುದು ಇನ್ನೊಂದು ಕ್ರಮ. ಬೆಳಗಾವಿ ಕುಂದಾ, ಧಾರವಾಡ ಪೇಡೆ ಹುಟ್ಟಿದ್ದು ಹಾಲು ಹೆಚ್ಚಳ ಆದದ್ದರ ಹೆಗ್ಗುರುತು. ಭಾರತದಲ್ಲಿ ಮೊದಲ ಬಾರಿಗೆ ಹಾಲು ಸಂಗ್ರಹಿಸಿ ಮಾರುವ ಸಹಕಾರ ವ್ಯವಸ್ಥೆ ಜಾರಿಗೆ ಬಂದಿದ್ದು ಅಲಹಾಬಾದನಲ್ಲಿ. ಅದು ಹಲವು ಗೌಳಿಗರು 1918ರಲ್ಲಿ ಕಟ್ರಾ ಎಂಬಲ್ಲಿ ಸಂಘಟಿಸಿದ ಮೊಟ್ಟ ಮೊದಲ ಸಹಕಾರ ಹಾಲು ಉತ್ಪಾದಕರ ಸಹಕಾರಿ ಸಂಘ. ಅದರ ನಂತರ ಲಖನೌದಲ್ಲಿ 1937ರಲ್ಲಿ ಮೊಟ್ಟ ಮೊದಲ ಮಿಲ್ಕ ಯುನಿಯನ್ ಅಸ್ತಿತ್ವಕ್ಕೆ ಬಂತು. ಆದರೆ ಹಾಲಿನ ಸಹಕಾರಿ ರಂಗದಲ್ಲಿ ಉತ್ಪಾದಿಸಿ ಮಾರುವ ಬೃಹತ್ ಸಂಘಟನೆ ಜನ್ಮ ತಾಳಿದ್ದು ಗುಜರಾತಿನ ಆನಂದ ಎಂಬಲ್ಲಿ. ಅದರ ರೂವಾರಿ ಜಾರ್ಜ ಕುರಿಯನ್. ಅವರಿಂದಾಗಿ ಭಾರತದಲ್ಲಿ ಶ್ವೇತ ಕ್ರಾಂತಿ ಆರಂಭ ಆಯಿತು. ವಿಶ್ವದ ಶೇಕಡಾ 33ರಷ್ಟು ಹಾಲನ್ನು ಭಾರತ ಉತ್ಪಾದಿಸುತ್ತದೆ. ಅದಕ್ಕೆಂದೇ ನಮ್ಮ ದೇಶವನ್ನು ವಿಶ್ವದ ಹಾಲಿನ ಡೈರಿ ಎನ್ನುತ್ತಾರೆ.
ಇಂಥ ಹಾಲಿನ ವಿಷಯದಲ್ಲಿಯೂ ಕೆಟ್ಟ ರಾಜಕೀಯ ಮಾಡಲು ಹೊರಟಿದ್ದಾರೆ. ಹಾಲಿನ ಸಹಕಾರಿ ಉತ್ಪಾದನೆ ಮತ್ತು ಮಾರಾಟ ಹಳೆ ಮೈಸೂರು ಭಾಗದಲ್ಲಿ ಯಶಸ್ವಿಯಾಗಿ ನಡೆದ ಹಾಗೆ ಉತ್ತರ ಕರ್ನಾಟಕದಲ್ಲಿ ಆಗಿಲ್ಲ. ಹಳೆ ಮೈಸೂರು ಭಾಗದಲ್ಲಿ ರೈತಾಪಿ ಜನ ಹೆಚ್ಚಾಗಿ ಒಕ್ಕಲಿಗರು. ಉತ್ತರ ಕರ್ನಾಟಕದಲ್ಲಿ ರೈತರಲ್ಲಿ ಬಹುಪಾಲು ಜನ ವೀರಶೈವರು ಅಥವಾ ಲಿಂಗಾಯತರು. ಇಲ್ಲೆಲ್ಲ ಹಾಲಿನ ಸಹಕಾರಿ ಸಂಘಗಳನ್ನು ಸ್ಥಾಪಿಸಿ, ರೈತರಿಗೆ ನೆರವಾಗುವ ನೆಪದಲ್ಲಿ ಅವರೆಲ್ಲರ ಮತ ಸೆಳೆಯುವ ಕೀಳು ಹುನ್ನಾರದಿಂದಲೇ ಗುಜರಾತಿನ ಅಮುಲ್ ಉತ್ಪನ್ನಗಳನ್ನು ರಾಜ್ಯದಲ್ಲಿ ಅಡಿ ಇಡುವಂತೆ ಮಾಡುವ ಮೊದಲ ಹೆಜ್ಜೆ ಇಟ್ಟಿದ್ದು ಮೊಟ್ಟಮೊದಲ ಬಾರಿಗೆ ಇಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗ ಅಂದರೆ 2008ರಲ್ಲಿ. ಈಗಂತೂ ಕೇಂದ್ರದಲ್ಲಿಯೂ ಅದೇ ಪಕ್ಷದ ಸರ್ಕಾರ ಇರುವುದರಿಂದ ಈ ಅವಕಾಶ ಬಳಸಿಕೊಂಡು ಉತ್ತರ ಕರ್ನಾಟಕ ಮತ್ತು ಅನಂತರ ಇಡೀ ಕರ್ನಾಟಕವನ್ನು ಹಾಲಿನ ನೆಪದಲ್ಲಿ ವ್ಯಾಪಿಸಿಕೊಳ್ಳುವ ದುರಾಲೋಚನೆ ದಟ್ಟವಾದಂತಿದೆ. ಕೇಂದ್ರ ಸಹಕಾರ ಸಚಿವರೂ ಆಗಿರುವ ಅಮಿತ ಶಾ ಅವರು ಮಂಡ್ಯ ಜಿಲ್ಲೆಯ ಗೆಜ್ಜಲಗೆರೆಯಲ್ಲಿ ಹಾಲು ಸಂಸ್ಕರಣಾ ಘಟಕ ಉದ್ಘಾಟನೆಗೆ ಹೋಗಿದ್ದಾಗ ಅವರು ಮೊಟ್ಟ ಮೊದಲ ಬಾರಿಗೆ ಗುಜರಾತಿನ ಅಮುಲ್ ನಲ್ಲಿ ಕರ್ನಾಟಕದ ಕೆಎಂಎಫ್ ವಿಲೀನದ ಅಂಶ ಪ್ರಸ್ತಾಪಿಸಿದರು. ಆಗ ಕೂಡಲೇ ಅವರು ವ್ಯಾಪಕ ವಿರೋಧ ಎದುರಿಸಿದರು. ಆದರೀಗ ಸದ್ದಿಲ್ಲದೇ ಅಮುಲ್ ತಾಜಾ ಹಾಲು ಮತ್ತು ಮೊಸರನ್ನು ಕರ್ನಾಟಕದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಮೂಲಕ ದೊಡ್ಡ ಸಂಘರ್ಷಕ್ಕೆ ನಾಂದಿ ಹಾಡಲಾಗಿದೆ.
ಅಮುಲ್ ಹಾಲಿನ ಬೆಲೆ ನಂದಿನ ಹಾಲಿನ ಬೆಲೆಗಿಂತ ಹೆಚ್ಚು ನಿಜ. ಆದರೆ ನಮ್ಮಲ್ಲಿನ ಮಧ್ಯಮ ವರ್ಗದ ಜನ ನಾಳೆ ಹೆಚ್ಚು ದರ ಇರುವ ಅಮುಲ್ ಹಾಲೇ ಉತ್ತಮ ಎಂಬ ಭ್ರಮೆಯಿಂದ ಅದನ್ನೇ ಕೊಂಡುಕೊಳ್ಳಲು ಆರಂಭಿಸಿದರೆ ಹೈನುಗಾರಿಕೆ ನೆಚ್ಚಿಕೊಂಡು ಬ್ಯಾಂಕಿನಿಂದ ಸಾಲ ಪಡೆದು ಹಸು, ಎಮ್ಮೆ ಸಾಕಿರುವ ನಮ್ಮ ಕರ್ನಾಟಕದ ರೈತರು, ಅದರಲ್ಲೂ ಮಹಿಳೆಯರ ಗತಿ ಏನು?
ಏನಾದರಾಗಲಿ, ತನ್ನ ಮೂಗು ಮೇಲೆಯೇ ಇರಬೇಕು ಎಂದು ಬಯಸುವ ರಾಜಕೀಯ ಪಕ್ಷ ಈಗಾಗಲೇ ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಈ ರೀತಿ ವ್ಯಾಪಿಸಿಕೊಂಡಿದೆ. ಉತ್ತರ ಪ್ರದೇಶದಲ್ಲಿಯೇ ಮೊದಲ ಹಾಲು ಮಾರಾಟ ಸಹಕಾರ ಸಂಘ ಸ್ಥಾಪನೆಯಾದರೂ ಸಹ ಅಲ್ಲಿ ಪ್ರಚಲಿತ ಇದ್ದ ಪರಾಗ್ ಎಂಬ ಹಾಲಿನ ಜಾಗದಲ್ಲಿ ಈಗ ಅಮುಲ್ ಆಕ್ರಮಿಸಿ ಕುಳಿತಿದೆ. ಪ್ರತಿ ಹಳ್ಳಿಯಲ್ಲೂ ಸಂಗ್ರಹ ಮತ್ತು ಸಂಸ್ಕರಣ ಕೇಂದ್ರಗಳನ್ನು ತೆರೆದುಕೊಂಡಿರುವ ಅಮುಲ್ ದೇಶದ ಇನ್ಯಾವುದೇ ಹಾಲಿಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದರೂ ಉಸಿರೆತ್ತದೇ ಅಲ್ಲಿನ ಜನ ಅನಿವಾರ್ಯವಾಗಿ ಅದನ್ನು ಕೊಳ್ಳುತ್ತಿದ್ದಾರೆ. ಆದರೆ ಬಹುಷ: ಬಿಜೆಪಿಯ ಹಾಲಿನ ಆಟ ಕರ್ನಾಟಕದಲ್ಲಿ ನಡೆಯುವುದಿಲ್ಲ ಎಂದು ಕಾಣುತ್ತದೆ. ಈಗಾಗಲೇ ನಾನಾ ರೀತಿಯಲ್ಲಿ ಜನರ ಕೆಂಗಣ್ಣಿಗೆ ಗುರಿ ಅಗಿರುವ ಇಲ್ಲಿನ ಬಿಜೆಪಿ ಸರ್ಕಾರ ಮತ್ತೊಂದು ತಪ್ಪು ಹೆಜ್ಜೆ ಇಟ್ಟು, ಜನರ ಕೋಪಕ್ಕೆ ಗುರಿ ಆಗಿ ವಿಧಾನಸಭೆ ಚುನಾವಣೆ ಎದುರಿಸಲು ಹೊರಟಿದೆ, ಎಂಥ ವಿಪರ್ಯಾಸ ಅಲ್ಲವೇ?
-ಎ.ಬಿ.ಧಾರವಾಡಕರ