LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ಎಸ್‌ಐಆರ್‌ನಿಂದ ಪ್ರಜಾಪ್ರಭುತ್ವಕ್ಕೇ ಅಪಾಯ: ಮಾಜಿ ನ್ಯಾ. ನಾರಿಮನ್ ಗುಡುಗು

ಹೊಸದಿಲ್ಲಿ, ಅ. 5 : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಮತದಾರರನ್ನು ಪಟ್ಟಿಯಿಂದ ಹೊರಗಿಟ್ಟಿರುವುದನ್ನು ತೀವ್ರವಾಗಿ ಪ್ರಶ್ನಿಸಿರುವ ಸುಪ್ರೀಂ ಕೋರ್ಟನ ಮಾಜಿ ನ್ಯಾಯಮೂರ್ತಿ ರೋಹಿಂಟನ್ ಫಾಲಿ ನಾರಿಮನ್, ದೇಶದಲ್ಲಿ “ಮತದಾನದ ಹಕ್ಕು ಮತ್ತು ಪ್ರಜಾಪ್ರಭುತ್ವ ತೀವ್ರ ಅಪಾಯದಲ್ಲಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯಲ್ಲಿ ಕಾರ್ಯನಿರ್ವಹಿಸುವ ಚುನಾವಣಾ ಆಯೋಗ ಇರಲು ಸಾಧ್ಯವಿಲ್ಲ ಎಂದಿರುವ ಅವರು, ಸುಪ್ರೀಂ ಕೋರ್ಟ ತ್ವರಿತವಾಗಿ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.

ಗುಜರಾತ್‌ನ ರಾಜ್‌ಕೋಟ್‌ನ ರಾಜಕುಮಾರ ಕಾಲೇಜಿನಲ್ಲಿ ‘ಸಂವಿಧಾನ ಮತ್ತು ಸಾಮಾನ್ಯ ಮನುಷ್ಯ’ ವಿಷಯದ ಕುರಿತು ಸೆಪ್ಟೆಂಬರ್ 27ರಂದು ಉಪನ್ಯಾಸ ನೀಡಿದ ನಾರಿಮನ್, ಪಶ್ಚಿಮ ಬಂಗಾಳದಲ್ಲಿ ನಡೆದ ಎಸ್‌ಐಆರ್‌ ಪ್ರಕ್ರಿಯೆ, ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕಾತಿ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದರು.

ಪಶ್ಚಿಮ ಬಂಗಾಳದ ಎಸ್‌ಐಆರ್‌ ವೇಳೆ ಸುಮಾರು 90 ಲಕ್ಷ ಮತದಾರರನ್ನು ಮತದಾನದ ಹಕ್ಕಿನಿಂದ ಹೊರಗಿಡಲಾಗಿತ್ತು ಎಂದು ನಾರಿಮನ್ ಹೇಳಿದರು. ಇಷ್ಟೊಂದು ದೊಡ್ಡ ಸಂಖ್ಯೆಯ ಮತದಾರರ ಹೆಸರು ಹೊರಗುಳಿದಿದ್ದರೂ ಸುಪ್ರೀಂ ಕೋರ್ಟ ಎಸ್‌ಐಆರ್‌ ಪ್ರಕ್ರಿಯೆಗೆ ತಡೆ ನೀಡದಿರುವುದರ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಹೆಸರು ಕೈಬಿಡಲ್ಪಟ್ಟ ಸುಮಾರು 90 ಲಕ್ಷ ಜನರ ಪೈಕಿ 22 ಲಕ್ಷ ಮಂದಿ ಮೇಲ್ಮನವಿ ಸಲ್ಲಿಸಿದ್ದರು. ಆ ಪೈಕಿ ಆಗ ತೀರ್ಮಾನವಾಗಿದ್ದ ಸುಮಾರು 1.2 ಲಕ್ಷ ಪ್ರಕರಣಗಳಲ್ಲಿ ಕೇವಲ 8,649 ಮತದಾರರ ಹೆಸರು ತೆಗೆದುಹಾಕಿರುವುದನ್ನು ಎತ್ತಿಹಿಡಿಯಲಾಗಿದ್ದು, ಸುಮಾರು ಶೇ.93ರಷ್ಟು ಪ್ರಕರಣಗಳಲ್ಲಿ ಮತದಾರರ ಪರವಾಗಿ ತೀರ್ಪು ಬಂದಿದೆ ಎಂದು ವರದಿಯಾಗಿದೆ.

ಈ ಅಂಕಿಅಂಶಗಳನ್ನು ಉಲ್ಲೇಖಿಸಿದ ನಾರಿಮನ್, ಸಾಮಾನ್ಯ ನಾಗರಿಕರನ್ನು ಮತದಾರರ ಪಟ್ಟಿಯಿಂದ ಹೊರಗಿಟ್ಟ ಪ್ರಕ್ರಿಯೆಯನ್ನು “ಸಂಪೂರ್ಣ ಕಾನೂನುಬಾಹಿರ” ಎಂದು ಬಣ್ಣಿಸಿದರು. ಮೇಲ್ಮನವಿ ಸಲ್ಲಿಸದ ಉಳಿದ ಲಕ್ಷಾಂತರ ಜನರು ಬಡವರಾಗಿರಬಹುದು ಅಥವಾ ನ್ಯಾಯ ಪಡೆಯಲು ಅಗತ್ಯ ಸಂಪನ್ಮೂಲ ಮತ್ತು ಅವಕಾಶ ಹೊಂದಿರದೇ ಇರಬಹುದು ಎಂದೂ ಅವರು ಅಭಿಪ್ರಾಯಪಟ್ಟರು.

“ನಮ್ಮ ಸಂವಿಧಾನದಲ್ಲಿ ಸಾಮಾನ್ಯ ಮನುಷ್ಯನ ಹಕ್ಕು, ಪ್ರಜಾಪ್ರಭುತ್ವದ ಹೃದಯವಾಗಿರುವ ಮತದಾನದ ಹಕ್ಕು ಇಂದು ತೀವ್ರ ಅಪಾಯದಲ್ಲಿದೆ” ಎಂದು ನಾರಿಮನ್ ಎಚ್ಚರಿಸಿದರು. ಚುನಾವಣಾ ಆಯೋಗ ಈ ರೀತಿಯಲ್ಲಿ ಕಾರ್ಯನಿರ್ವಹಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದ ಅವರು, ತಾವು ಹಿಂದೆ ಸದಸ್ಯರಾಗಿದ್ದ ಸುಪ್ರೀಂ ಕೋರ್ಟ ಈ ವಿಷಯದಲ್ಲಿ ತ್ವರಿತವಾಗಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಸರಿಪಡಿಸಬೇಕು ಎಂದು ಆಶಿಸಿದರು.

ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯನ್ನೂ ನಾರಿಮನ್ ಪ್ರಶ್ನಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ 2023ರ ಕಾನೂನನ್ನು ಪ್ರಶ್ನಿಸಿರುವ ಪ್ರಕರಣವನ್ನು ಸುಪ್ರೀಂ ಕೋರ್ಟ ಆದಷ್ಟು ಬೇಗ ತೀರ್ಮಾನಿಸಬೇಕು ಎಂದು ಅವರು ಹೇಳಿದ್ದಾರೆ. ಚುನಾವಣಾ ಆಯೋಗದ ಸ್ವಾತಂತ್ರ್ಯ ಮತ್ತು ನಿಷ್ಪಕ್ಷಪಾತ ಕಾರ್ಯನಿರ್ವಹಣೆಗೆ ನೇಮಕಾತಿ ವ್ಯವಸ್ಥೆಯೂ ಮಹತ್ವದ್ದಾಗಿದೆ ಎಂಬುದು ಅವರ ಅಭಿಪ್ರಾಯವಾಗಿದೆ.

ಚುನಾವಣಾ ಆಯೋಗದೊಳಗಿನ ನಿರ್ಧಾರ ಪ್ರಕ್ರಿಯೆಗೆ ಸಂಬಂಧಿಸಿದ ಇತ್ತೀಚಿನ ವರದಿಗಳನ್ನೂ ನಾರಿಮನ್ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ ಕುಮಾರ ಕೈಗೊಂಡ ಕೆಲವು ನಿರ್ಧಾರಗಳ ಬಗ್ಗೆ ಇತರ ಇಬ್ಬರು ಚುನಾವಣಾ ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ವರದಿಗಳನ್ನು ಉಲ್ಲೇಖಿಸಿ, ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಡಿಲು ಬಡಿದು ಎರಡು ಹಸು ಸಾವುಐಎಚ್‌ಆರ್‌ಸಿ ಬೆಳಗಾವಿ ಜಿಲ್ಲಾ ಮಂಡಳಿ ಅಧ್ಯಕ್ಷರಾಗಿ ಅಬ್ದುಲ್ ಅಜೀಜ ಶೇಖ ನೇಮಕಚುಳಕಿಯಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ-ಖೋಖೋ ಕ್ರೀಡಾಕೂಟಕ್ಕೆ ಚಾಲನೆಮೊಬೈಲ್ ಟವರ್ ಆಮಿಷ, ಫೇಸ್‌ಬುಕ್ ಲಿಂಕ್: ಅಥಣಿಯ ಇಬ್ಬರು ರೈತರಿಗೆ ₹4.04 ಲಕ್ಷ ವಂಚನೆಅಥಣಿ ಲಾಡ್ಜನಲ್ಲಿ ವೇಶ್ಯಾವಾಟಿಕೆ ಆರೋಪ: ಮಹಿಳೆ ರಕ್ಷಣೆ, ಓರ್ವ ಬಂಧನಹಸುಗಳಿಗೆ ಮೇವು ಹಾಕುವ ವಿಚಾರಕ್ಕೆ ಜಗಳ: ಪತ್ನಿಯನ್ನು ಕುಡಗೋಲಿನಿಂದ ಕೊಚ್ಚಿ ಹತ್ಯೆಬಿಜೆಪಿ ಮುಖಂಡ ರವಿ ಪಾಟೀಲಗೆ ನಿರೀಕ್ಷಣಾ ಜಾಮೀನುಮೋದಿ-ಶಾ ಸೂಚನೆಯಂತೆ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ದ್ರೋಹ: ಕಾಂಗ್ರೆಸ್ಮಹಿಳಾ ಪತ್ರಕರ್ತೆಯರ ಪೊಲೀಸರ ಲೈಂಗಿಕ ಕಿರುಕುಳ ; ಎಫ್‌ಐಆರ್‌ಗೆ ಒತ್ತಾಯಿಸಿದವರು ವಶಕ್ಕೆಇದು ಗುಜರಾತ್, ಯುಪಿ ಅಲ್ಲ; ಕಾನೂನು ಮುರಿದರೆ ಪರಿಣಾಮ ಎದುರಿಸಿ: ಪ್ರಿಯಾಂಕ್ ಖರ್ಗೆ