ಸೂರತ್, ಅ. 5 : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರವಿರುವ ₹500 ಮುಖಬೆಲೆಯ ನೋಟನ್ನು ಆಕ್ಷೇಪಾರ್ಹ ರೀತಿಯಲ್ಲಿ ಬಳಸಿದ ರೀಲ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ 47 ವರ್ಷದ ಕಂಟೆಂಟ್ ಕ್ರಿಯೇಟರ್ ಸಿಮ್ರಾನ್ ಪಟೇಲ ಎಂಬಾಕೆಯನ್ನು ಸೂರತ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಸೂರತ್‌ನ ಅದಾಜನ್ ಪ್ರದೇಶದ ನಿವಾಸಿಯಾಗಿರುವ ಸಿಮ್ರಾನ್, ಇನ್‌ಸ್ಟಾಗ್ರಾಮ್‌ನಲ್ಲಿ 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಗಾಂಧಿ ಜಯಂತಿಯ ಮುನ್ನಾದಿನವಾದ ಅಕ್ಟೋಬರ್ 1ರಂದು ಮಧ್ಯಾಹ್ನ 1ರಿಂದ ಸಂಜೆ 6 ಗಂಟೆಯ ನಡುವೆ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿವಾದಾತ್ಮಕ ವಿಡಿಯೋ ಪೋಸ್ಟ್ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ರೀಲ್‌ನಲ್ಲಿ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರವಿರುವ ₹500ರ ನೋಟನ್ನು ಆಕ್ಷೇಪಾರ್ಹ ರೀತಿಯಲ್ಲಿ ಬಳಸಿದ್ದು, ಅದರೊಂದಿಗೆ ಸೂಕ್ತವಲ್ಲದ ದೃಶ್ಯಗಳು ಮತ್ತು ಸನ್ನೆಗಳನ್ನು ಪ್ರದರ್ಶಿಸಲಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಪ್ರಕರಣದ ಕುರಿತು ಸೂರತ್ ಪೊಲೀಸರು ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿಯೂ ಮಾಹಿತಿ ಹಂಚಿಕೊಂಡಿದ್ದಾರೆ. ಮಹಿಳೆಯ ಬಂಧನಕ್ಕೂ ಮುನ್ನ ಮತ್ತು ನಂತರದ ದೃಶ್ಯಗಳನ್ನು ಒಳಗೊಂಡ ವಿಡಿಯೋವನ್ನೂ ಪೊಲೀಸರು ಪ್ರಕಟಿಸಿದ್ದು, ಮೊದಲ ದೃಶ್ಯದಲ್ಲಿ ಅವರು ನೋಟನ್ನು ಬಳಸುತ್ತಿರುವುದು ಹಾಗೂ ನಂತರದ ದೃಶ್ಯದಲ್ಲಿ ಅವರ ಕೈಗೆ ಕೋಳ ತೊಡಿಸಿರುವುದು ಕಾಣಿಸುತ್ತದೆ.
ಗಾಂಧಿ ಜಯಂತಿಯ ಸಂದರ್ಭದಲ್ಲಿಯೇ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರವಿರುವ ನೋಟನ್ನು ಈ ರೀತಿಯಾಗಿ ಬಳಸಿರುವುದಕ್ಕೆ ಆಕ್ಷೇಪಗಳು ವ್ಯಕ್ತವಾದ ಬೆನ್ನಲ್ಲೇ ಪೊಲೀಸರು ಕ್ರಮ ಕೈಗೊಂಡು ಸಿಮ್ರಾನ್ ಪಟೇಲಳನ್ನು ಬಂಧಿಸಿದ್ದಾರೆ.