ಹೊಸದಿಲ್ಲಿ, ಜುಲೈ 23: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗಳನ್ನು ಹತ್ತಿಕ್ಕಲು ಬಿಜೆಪಿ ಸಂಘಟಿತವಾಗಿ ಪ್ರಯತ್ನಿಸುತ್ತಿದ್ದು, ಪ್ರತಿಭಟನೆಗಳಿಗೆ ಅಡ್ಡಿಪಡಿಸಲು ‘ಗೂಂಡಾಗಳನ್ನು’ ಕಳುಹಿಸಲಾಗುತ್ತಿದೆ ಎಂದು ಸಿಜೆಪಿ ಮುಖಂಡ ಅಭಿಜೀತ ದೀಪ್ಕೆ ಆರೋಪಿಸಿದ್ದಾರೆ.
ಇದೇ ವೇಳೆ, ದಿಲ್ಲಿಯ ಜಂತರ್ ಮಂತರ್‌ನಲ್ಲಿ ಜುಲೈ 20ರಂದು ನಡೆದ ಸಿಜೆಪಿ ಪ್ರತಿಭಟನೆಗೆ ಬಾಂಗ್ಲಾದೇಶದ ಜಮಾಅತೆ ಇಸ್ಲಾಮಿ ಬೆಂಬಲ ವ್ಯಕ್ತಪಡಿಸಿದೆ ಎಂಬ ಪ್ರತಿಪಾದನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಕೆಲವು ರಾಷ್ಟ್ರೀಯ ಮಾಧ್ಯಮಗಳು ಹಾಗೂ ಬಿಜೆಪಿ ಬೆಂಬಲಿತ ಸಾಮಾಜಿಕ ಜಾಲತಾಣ ಖಾತೆಗಳು ಈ ಹೇಳಿಕೆಯನ್ನು ಪ್ರಸಾರ ಮಾಡಿದ್ದವು.
ರಿಪಬ್ಲಿಕ್, ನ್ಯೂಸ್18 ಹಾಗೂ ನ್ಯೂಸ್‌ಎಕ್ಸ್ ಸೇರಿದಂತೆ ಕೆಲವು ಮಾಧ್ಯಮಗಳು, ಜಮಾಅತೆ ಇಸ್ಲಾಮಿ ಹೆಸರಿನಲ್ಲಿ ಪ್ರಕಟಿಸಲಾಗಿದೆ ಎನ್ನಲಾದ ಪತ್ರವನ್ನು ಆಧರಿಸಿ ವರದಿಗಳನ್ನು ಪ್ರಸಾರ ಮಾಡಿದ್ದವು. ಈ ಪತ್ರವನ್ನು ಉಲ್ಲೇಖಿಸಿ, ಸಿಜೆಪಿ ಪ್ರತಿಭಟನೆಗೆ ಅಂತರರಾಷ್ಟ್ರೀಯ ಬೆಂಬಲವಿದೆ ಹಾಗೂ ಇದರ ಹಿಂದೆ ವಿದೇಶಿ ಜಾಲ ಕಾರ್ಯನಿರ್ವಹಿಸುತ್ತಿದೆ ಎಂಬ ಅನುಮಾನಗಳನ್ನು ವರದಿಗಳಲ್ಲಿ ವ್ಯಕ್ತಪಡಿಸಲಾಗಿತ್ತು. ಶಾಹೀನ್ ಬಾಗ್ ಮತ್ತು ಕೆಂಪುಕೋಟೆ ಪ್ರತಿಭಟನೆಗಳ ಮಾದರಿಯಲ್ಲೇ ಈ ಚಳವಳಿಯೂ ನಡೆಯುತ್ತಿದೆ ಎಂಬ ಪ್ರಶ್ನೆಗಳನ್ನೂ ಎತ್ತಲಾಗಿತ್ತು.
ಆದರೆ, ಪತ್ರದ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ಫ್ಯಾಕ್ಟ್‌ಚೆಕ್ ಸಂಸ್ಥೆ ಆಲ್ಟ್ ನ್ಯೂಸ್ ಹಲವು ವೈಪರೀತ್ಯಗಳನ್ನು ಪತ್ತೆಹಚ್ಚಿದೆ. ಪತ್ರದಲ್ಲಿ ‘ಬಾಂಗ್ಲಾದೇಶ’ ಎಂಬ ಪದವನ್ನು ಇಂಗ್ಲಿಷ್‌ನಲ್ಲಿ ತಪ್ಪಾಗಿ ಬರೆಯಲಾಗಿದೆ. ಲೆಟರ್‌ಹೆಡ್‌ನಲ್ಲಿರುವ ಲಾಂಛನವು ಜಮಾಅತೆ ಇಸ್ಲಾಮಿಯ ಅಧಿಕೃತ ಲಾಂಛನಕ್ಕೆ ಹೊಂದಿಕೆಯಾಗುವುದಿಲ್ಲ. ಅಲ್ಲದೆ, ಯಾವುದೇ ಅಧಿಕೃತ ಪತ್ರದಲ್ಲಿ ಇರಬೇಕಾದ ಉಲ್ಲೇಖ ಸಂಖ್ಯೆ, ನೋಂದಾಯಿತ ವಿಳಾಸ ಹಾಗೂ ಇತರ ದೃಢೀಕರಣ ವಿವರಗಳು ಈ ಪತ್ರದಲ್ಲಿ ಇಲ್ಲ ಎಂದು ತಿಳಿಸಿದೆ.
ಈ ಕುರಿತು ಬಾಂಗ್ಲಾದೇಶ ಜಮಾಅತೆ ಇಸ್ಲಾಮಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದು, ವೈರಲ್ ಆಗಿರುವ ಪತ್ರ ಸಂಪೂರ್ಣ ನಕಲಿಯಾಗಿದ್ದು, ದುರುದ್ದೇಶಪೂರಿತ ಅಪಪ್ರಚಾರಕ್ಕಾಗಿ ಸೃಷ್ಟಿಸಲಾಗಿದೆ ಎಂದು ಹೇಳಿದೆ. ತಮ್ಮ ಹೆಸರಿನಲ್ಲಿ ಸುಳ್ಳು ದಾಖಲೆಗಳನ್ನು ಹರಡುತ್ತಿರುವುದನ್ನು ಖಂಡಿಸಿರುವ ಸಂಘಟನೆ, ಇಂತಹ ತಪ್ಪು ಮಾಹಿತಿಯನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದೆ.
ಪತ್ರದ ಚಿತ್ರವನ್ನು ಸೈಟ್‌ಎಂಜಿನ್, ಹೈವ್ ಮಾಡರೇಶನ್ ಹಾಗೂ ಟ್ರೂತ್‌ಸ್ಕ್ಯಾನ್ ಸೇರಿದಂತೆ ವಿವಿಧ ಕೃತಕ ಬುದ್ಧಿಮತ್ತೆ (ಎಐ) ಪತ್ತೆಹಚ್ಚುವ ಸಾಧನಗಳ ಮೂಲಕ ಪರೀಕ್ಷಿಸಿದಾಗ, ಅದು ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಲ್ಪಟ್ಟಿರುವ ಸಾಧ್ಯತೆ ಹೆಚ್ಚಿದೆ ಎಂಬ ಸೂಚನೆಗಳು ದೊರೆತಿವೆ ಎಂದು ಫ್ಯಾಕ್ಟ್‌ಚೆಕ್ ವರದಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ, ಸಿಜೆಪಿ ನೇತೃತ್ವದ ವಿದ್ಯಾರ್ಥಿ ಪ್ರತಿಭಟನೆಗೆ ಬಾಂಗ್ಲಾದೇಶದ ಜಮಾಅತೆ ಇಸ್ಲಾಮಿ ಅಧಿಕೃತ ಬೆಂಬಲ ನೀಡಿದೆ ಎಂಬ ಪ್ರತಿಪಾದನೆಗೆ ಯಾವುದೇ ದೃಢವಾದ ಸಾಕ್ಷ್ಯ ಲಭ್ಯವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪತ್ರ ನಕಲಿಯಾಗಿದ್ದು, ಅದನ್ನು ಆಧರಿಸಿ ಪ್ರಸಾರವಾದ ಸುದ್ದಿಗಳು ಪರಿಶೀಲಿಸದ ಮಾಹಿತಿಯನ್ನು ಆಧರಿಸಿವೆ ಎಂದು ಫ್ಯಾಕ್ಟ್‌ಚೆಕ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.