LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ದೇಶದಲ್ಲಿ ಶುದ್ಧ ಪೆಟ್ರೋಲ್ ಮರುಪೂರೈಕೆ ಇಲ್ಲ; ಇ–20 ಮುಂದುವರಿಕೆ

ಹೊಸದಿಲ್ಲಿ, ಜುಲೈ 23: ದೇಶಾದ್ಯಂತ ಕೋಟ್ಯಾಂತರ ಪೆಟ್ರೋಲ್ ವಾಹನಗಳ ಮೈಲೇಜ್‌ ಕುಸಿದು ಇಂಜಿನ್‌ ತೊಂದರೆ ಕೊಡುತ್ತಿವೆ ಎಂದು ಜನರು ಆಕ್ರೋಷ ಹೊರಹಾಕುತ್ತಿದ್ದರೂ ಸಹ ಕೇಂದ್ರ ಸರ್ಕಾರ ಅದರತ್ತ ಗಮನ ಹರಿಸದೇ ದೇಶದಲ್ಲಿ ಬಳಕೆಯಲ್ಲಿರುವ ಇ–20 ಪೆಟ್ರೋಲ್ ಸುರಕ್ಷಿತ, ಪರಿಸರ ಸ್ನೇಹಿ ಹಾಗೂ ತಾಂತ್ರಿಕವಾಗಿ ಅತ್ಯಾಧುನಿಕ ಇಂಧನವಾಗಿದ್ದು, ಎಥನಾಲ್ ರಹಿತ ‘ಶುದ್ಧ ಪೆಟ್ರೋಲ್’ ಪೂರೈಕೆಯನ್ನು ಮರು ಆರಂಭಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದೆ. 

ಇದೇ ವೇಳೆ, ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣವನ್ನು ಶೇ.20ಕ್ಕಿಂತ ಹೆಚ್ಚಿಸುವ ಕುರಿತು ಸಹ ಸದ್ಯ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಪೆಟ್ರೋಲಿಯಂ ಮತ್ತು ಪ್ರಾಕೃತಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಹಳೆಯ ಇಂಧನ ವ್ಯವಸ್ಥೆಗೆ ಮರಳುವ ಬದಲು ಆಧುನಿಕ ಹಾಗೂ ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಸರ್ಕಾರದ ನೀತಿಯಾಗಿದೆ. ಭಾರತವು ನಿಗದಿತ ಗಡುವಿಗಿಂತ ಐದು ವರ್ಷ ಮುಂಚಿತವಾಗಿಯೇ ಶೇ.20 ಎಥನಾಲ್ ಮಿಶ್ರಣದ ಗುರಿ ಸಾಧಿಸಿದ್ದು, ಶೇ.85 ಎಥನಾಲ್ ಹೊಂದಿರುವ ಇ–85 ಇಂಧನವನ್ನು ‘ಫ್ಲೆಕ್ಸ್–ಫ್ಯುಯೆಲ್’ ವಾಹನಗಳಿಗೆ ಮಾತ್ರ ಪ್ರಮಾಣೀಕರಿಸಲಾಗಿದೆ. ಇದು ಸಾಮಾನ್ಯ ಪೆಟ್ರೋಲ್ ಪೂರೈಕೆಯ ಭಾಗವಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಇಂಜಿನ್ ಹಾನಿ ಕುರಿತು ಹರಿದಾಡುತ್ತಿರುವ ವದಂತಿಗಳಿಗೆ ಸ್ಪಷ್ಟನೆ

ಇ–20 ಪೆಟ್ರೋಲ್ ಬಳಕೆಯಿಂದ ವಾಹನಗಳ ಇಂಜಿನ್ ಹಾಳಾಗುತ್ತದೆ, ಇಂಧನ ಪಂಪ್‌ಗಳು ಹಾಳಾಗುತ್ತವೆ, ಮೈಲೇಜ್ ಕುಸಿಯುತ್ತದೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿನ ವದಂತಿಗಳನ್ನು ಸರ್ಕಾರ ತಳ್ಳಿಹಾಕಿದೆ. ನೀತಿ ಆಯೋಗ ಸೇರಿದಂತೆ ವಿವಿಧ ಸಂಸ್ಥೆಗಳು ನಡೆಸಿದ ಪ್ರಯೋಗಾಲಯ ಪರೀಕ್ಷೆಗಳು, ಕ್ಷೇತ್ರಮಟ್ಟದ ಅಧ್ಯಯನಗಳು ಹಾಗೂ ನೈಜ ಬಳಕೆಯ ಮಾಹಿತಿಯು ಇ–20 ಇಂಧನದಿಂದ ಇಂಜಿನ್‌ಗೆ ಯಾವುದೇ ಹಾನಿಯಾಗುವುದಿಲ್ಲ ಎಂಬುದನ್ನು ದೃಢಪಡಿಸಿವೆ ಎಂದು ಸಚಿವರು ತಿಳಿಸಿದ್ದಾರೆ.

ಪ್ರಮುಖ ವಾಹನ ತಯಾರಿಕಾ ಸಂಸ್ಥೆಗಳು, ವಾಹನ ಸಂಘಟನೆಗಳು ಅಥವಾ ಗ್ರಾಹಕ ಸಂಘಟನೆಗಳಿಂದ ಇ–20 ಪೆಟ್ರೋಲ್‌ನಿಂದ ಇಂಜಿನ್ ಹಾನಿ, ತುಕ್ಕು, ಇಂಧನ ಪಂಪ್ ದೋಷ, ನೀರಿನ ಮಾಲಿನ್ಯ ಅಥವಾ ಕಾರ್ಯಕ್ಷಮತೆ ಕುಸಿತಕ್ಕೆ ಸಂಬಂಧಿಸಿದ ಯಾವುದೇ ವ್ಯಾಪಕ ಅಥವಾ ದೃಢೀಕೃತ ದೂರುಗಳು ಸರ್ಕಾರಕ್ಕೆ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ. ಪ್ರಸ್ತುತ ದೇಶದಲ್ಲಿ 20 ಕೋಟಿಗೂ ಹೆಚ್ಚು ದ್ವಿಚಕ್ರ ವಾಹನಗಳು ಹಾಗೂ 3 ಕೋಟಿಗೂ ಹೆಚ್ಚು ಪೆಟ್ರೋಲ್ ಕಾರುಗಳು ಇ–20 ಪೆಟ್ರೋಲ್ ಬಳಸಿ ಯಾವುದೇ ತೊಂದರೆಯಿಲ್ಲದೆ ಸಂಚರಿಸುತ್ತಿವೆ ಎಂದು ವಿವರಿಸಿದ್ದಾರೆ.

ಮೈಲೇಜ್‌ನಲ್ಲಿ ಅಲ್ಪ ವ್ಯತ್ಯಾಸ

ಮೈಲೇಜ್ ಕುರಿತು ಪ್ರತಿಕ್ರಿಯಿಸಿದ ಸಚಿವರು, ಅದು ಚಾಲನಾ ಶೈಲಿ, ವಾಹನದ ನಿರ್ವಹಣೆ ಮತ್ತು ರಸ್ತೆ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ಹೇಳಿದರು. ಇ–10ಗೆ ಹೊಂದಿಕೊಂಡಿರುವ ಹಳೆಯ ವಾಹನಗಳಲ್ಲಿ ಇ–20 ಬಳಸಿದರೆ ಶೇ.3ರಿಂದ 5ರಷ್ಟು ಮೈಲೇಜ್ ಇಳಿಕೆಯಾಗುವ ಸಾಧ್ಯತೆ ಇದೆ. ಆದರೆ ಇ–20 ಇಂಧನದ ಹೆಚ್ಚಿನ ಆಕ್ಟೇನ್ ಮಟ್ಟದಿಂದ ವಾಹನದ ಕಾರ್ಯಕ್ಷಮತೆ, ಪಿಕ್‌ಅಪ್ ಹಾಗೂ ಚಾಲನಾ ಅನುಭವ ಉತ್ತಮವಾಗುತ್ತದೆ ಎಂದು ವಿವರಿಸಿದರು.

30 ಸಾವಿರಕ್ಕೂ ಹೆಚ್ಚು ಗುಣಮಟ್ಟ ಪರೀಕ್ಷೆ

ಇಂಧನದ ಗುಣಮಟ್ಟ ಕುರಿತು ವ್ಯಕ್ತವಾದ ಆತಂಕದ ಹಿನ್ನೆಲೆಯಲ್ಲಿ ಕಳೆದ 10ರಿಂದ 20 ದಿನಗಳ ಅವಧಿಯಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ದೇಶಾದ್ಯಂತ 30 ಸಾವಿರಕ್ಕೂ ಹೆಚ್ಚು ಇಂಧನ ಗುಣಮಟ್ಟ ಪರೀಕ್ಷೆಗಳನ್ನು ನಡೆಸಿವೆ. ಡಿಸ್ಟಿಲರಿ, ಡಿಪೋ ಮತ್ತು ಪೆಟ್ರೋಲ್ ಬಂಕ್‌ಗಳ ಹಂತದಲ್ಲೇ ಇಂಧನವನ್ನು ಪರೀಕ್ಷಿಸಲಾಗುತ್ತಿದ್ದು, ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾದ ಇಂಧನವೇ ಗ್ರಾಹಕರಿಗೆ ತಲುಪುವಂತೆ ಕ್ರಮ ಕೈಗೊಳ್ಳಲಾಗಿದೆ. ಇಂಧನ ಕಲಬೆರಕೆ ವಿರುದ್ಧ ಸೊನ್ನೆ ಸಹಿಷ್ಣುತೆ ನೀತಿ ಅನುಸರಿಸುವಂತೆ ರಾಜ್ಯ ಸರ್ಕಾರಗಳಿಗೂ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಆರ್ಥಿಕ ಮತ್ತು ಪರಿಸರ ಲಾಭ

ಎಥನಾಲ್ ಮಿಶ್ರಣ ಯೋಜನೆಯಿಂದ ದೇಶಕ್ಕೆ ಗಣನೀಯ ಆರ್ಥಿಕ ಮತ್ತು ಪರಿಸರ ಲಾಭ ದೊರೆತಿದೆ ಎಂದು ಸರ್ಕಾರ ತಿಳಿಸಿದೆ. ಕಚ್ಚಾ ತೈಲ ಆಮದು ಕಡಿಮೆಯಾಗಿರುವುದರಿಂದ ಸುಮಾರು ₹2 ಲಕ್ಷ ಕೋಟಿ ವಿದೇಶಿ ವಿನಿಮಯ ಉಳಿತಾಯವಾಗಿದೆ. ಇದರಿಂದ 952 ಲಕ್ಷ ಮೆಟ್ರಿಕ್ ಟನ್ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ ತಗ್ಗಿದ್ದು, ಎಥನಾಲ್ ಉತ್ಪಾದನೆಯ ಮೂಲಕ ರೈತರಿಗೆ ₹1.66 ಲಕ್ಷ ಕೋಟಿಗೂ ಹೆಚ್ಚು ಆದಾಯ ದೊರೆತಿದೆ ಎಂದು ಸಚಿವರು ಮಾಹಿತಿ ನೀಡಿದರು.

ದೂರುಗಳಿಗೆ ವ್ಯವಸ್ಥೆ

ಇಂಧನದ ಗುಣಮಟ್ಟ ಅಥವಾ ಪೂರೈಕೆಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಲು ಸಾರ್ವಜನಿಕ ವಲಯದ ತೈಲ ಕಂಪನಿಗಳು ಸಮರ್ಪಕ ಕುಂದುಕೊರತೆ ನಿವಾರಣಾ ವ್ಯವಸ್ಥೆ ಕಲ್ಪಿಸಿವೆ. ಪೆಟ್ರೋಲ್ ಬಂಕ್‌ಗಳ ದೂರು ಪುಸ್ತಕ, ಟೋಲ್‌ಫ್ರೀ ಸಂಖ್ಯೆಗಳು, ಮೊಬೈಲ್ ಅಪ್ಲಿಕೇಶನ್ ಹಾಗೂ ಅಧಿಕೃತ ಜಾಲತಾಣಗಳ ಮೂಲಕ ಗ್ರಾಹಕರು ದೂರು ಸಲ್ಲಿಸಬಹುದಾಗಿದೆ ಎಂದು ಸರ್ಕಾರ ತಿಳಿಸಿದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇಶದಲ್ಲಿ ಶುದ್ಧ ಪೆಟ್ರೋಲ್ ಮರುಪೂರೈಕೆ ಇಲ್ಲ; ಇ–20 ಮುಂದುವರಿಕೆನೀಟ್‌ ಅಕ್ರಮ ವಿರುದ್ಧ ಮಹಾರಾಷ್ಟ್ರ ಬಂದ್‌ಗೆ ವ್ಯಾಪಕ ಪ್ರತಿಕ್ರಿಯೆ; ಸಾವಿರಾರು ಕಾರ್ಯಕರ್ತರ ವಶ, ಹಲವು ಕಡೆ ಪ್ರತಿಭಟನೆಪ್ರಧಾನಿ ನಿವಾಸದ ಪ್ರತಿಭಟನೆ ಬದಲು ವಿದ್ಯಾರ್ಥಿಗಳ ಜೊತೆ ನಿಲ್ಲಬೇಕಿತ್ತು: ಕಾಂಗ್ರೆಸ್ ನಡೆ ಬಗ್ಗೆ ವಾಂಗಚುಕ್‌ ಪತ್ನಿ ಟೀಕೆಸಿಜೆಪಿ ಪ್ರತಿಭಟನೆಗೆ ಅಡ್ಡಿಪಡಿಸಲು ಬಿಜೆಪಿಯಿಂದ ‘ಗೂಂಡಾಗಳ’ ಬಳಕೆ: ಅಭಿಜೀತ ದೀಪ್ಕೆ ಆರೋಪನೀಟ್ ವಿವಾದಕ್ಕೆ ಉಭಯ ಸದನ ಕಲಾಪ ನಾಲ್ಕನೇ ದಿನವೂ ಮುಂದೂಡಿಕೆಮಳೆ ಹನಿಗಳೊಂದಿಗೆ ಅರಳಿದ ಅಳ್ನಾವರ: ಹಸಿರಿನ ಸೊಬಗು, ರೈತರ ಸಂಭ್ರಮಪ್ರಧಾನಿ ನಿವಾಸದ ಎದುರಿನ ಪ್ರತಿಭಟನೆ ಖಂಡಿಸಿ ಬಿಜೆಪಿಯಿಂದ ಮೆರವಣಿಗೆಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಬೆಳಗಾವಿಯ ಸ್ವಾತಿಕ್ ಪಾಟೀಲ ಆಯ್ಕೆನೀಟ್‌ ಅಕ್ರಮ ಖಂಡಿಸಿ ಬೆಳಗಾವಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ; ಪ್ರಧಾನ್‌ ರಾಜೀನಾಮೆಗೆ ಆಗ್ರಹವಿದ್ಯಾರ್ಥಿಗಳ ರಕ್ಷಣೆಗೆ ಪೊಲೀಸ್ ವ್ಯಾನ್‌ ತಡೆದ ಯುವತಿ; ರಿಯಾ ಅಹಿರ್‌ ಧೈರ್ಯಕ್ಕೆ ಮೆಚ್ಚುಗೆ