LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಎಸ್‌ಪಿ ಪಕ್ಷ ತೊರೆಯಲು 25-26 ಸಂಸದರು ಸಜ್ಜು -ಮೌರ್ಯ

ಲಕ್ನೊ, ಜೂನ್ 18: ಸಮಾಜವಾದಿ ಪಕ್ಷದಲ್ಲಿ ಭಾರೀ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆಯಿದ್ದು, ಪಕ್ಷದ 25 ರಿಂದ 26 ಸಂಸದರು ಹೊರಬರಲು ಸಿದ್ಧರಾಗಿದ್ದಾರೆ ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಹೇಳಿದ್ದಾರೆ. ಆದರೆ ವಿರೋಧ ಪಕ್ಷಗಳನ್ನು ಒಡೆಯುವ ಯಾವುದೇ ಪ್ರಯತ್ನವನ್ನು ಬಿಜೆಪಿ ಮಾಡುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಶವ ಪ್ರಸಾದ ಮೌರ್ಯ, ಸಮಾಜವಾದಿ ಪಕ್ಷದ ಆಂತರಿಕ ಪರಿಸ್ಥಿತಿಯನ್ನು ಉಲ್ಲೇಖಿಸಿ, ಪಕ್ಷದೊಳಗೆ ಅಸಮಾಧಾನ ತಾರಕಕ್ಕೇರಿದೆ ಎಂದು ಹೇಳಿದರು. ಹಲವು ಸಂಸದರು ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿದ್ದು, ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆ ಎಂದು ಅವರು ಪ್ರತಿಪಾದಿಸಿದರು.

"ಸಮಾಜವಾದಿ ಪಕ್ಷದ 25-26 ಸಂಸದರು ಪಕ್ಷ ತೊರೆಯಲು ಸಿದ್ಧರಾಗಿದ್ದಾರೆ. ಆದರೆ ಅವರನ್ನು ಬಿಜೆಪಿ ಸೆಳೆಯಲು ಅಥವಾ ಪಕ್ಷವನ್ನು ಒಡೆಯಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಅವರೇ ಪಕ್ಷದಿಂದ ಹೊರಬರಲಿದ್ದಾರೆ ಎಂಬುದು ನಮಗೆ ಗೊತ್ತಿದೆ" ಎಂದು ಅವರು ಹೇಳಿದರು.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ ವಿರುದ್ಧ ವಾಗ್ದಾಳಿ ನಡೆಸಿದ ಮೌರ್ಯ, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ರಾಜಕೀಯ ಪ್ರಭಾವ ಕ್ಷೀಣಿಸುತ್ತಿದ್ದು, ಮುಂದಿನ ದಿನಗಳಲ್ಲಿ ಪಕ್ಷ ಮತ್ತಷ್ಟು ದುರ್ಬಲವಾಗಲಿದೆ ಎಂದು ಹೇಳಿದರು.

"ಸಮಾಜವಾದಿ ಪಕ್ಷಕ್ಕೆ ಜನರ ಬೆಂಬಲ ನಿರಂತರವಾಗಿ ಕುಸಿಯುತ್ತಿದೆ. ಅಖಿಲೇಶ ಯಾದವ ಅವರ ನಾಯಕತ್ವದಲ್ಲಿ ಪಕ್ಷವು ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಆದ್ದರಿಂದ ಸಮಾಜವಾದಿ ಪಕ್ಷ ಮತ್ತೆ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ" ಎಂದು ಅವರು ಟೀಕಿಸಿದರು.

ಈ ಹೇಳಿಕೆ ಉತ್ತರ ಪ್ರದೇಶ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ಉತ್ತರ ಪ್ರದೇಶ ಸಚಿವ ಹಾಗೂ ಸುಹೇಲ ದೇವ್ ಭಾರತೀಯ ಸಮಾಜ್ ಪಾರ್ಟಿಯ ಮುಖ್ಯಸ್ಥ ಓಂ ಪ್ರಕಾಶ್ ರಾಜ್ ಭರ್ ಕೂಡ ಸಮಾಜವಾದಿ ಪಕ್ಷದಲ್ಲಿ ದೊಡ್ಡ ಮಟ್ಟದ ರಾಜಕೀಯ ಮರುಹೊಂದಾಣಿಕೆ ನಡೆಯಲಿದೆ ಎಂದು ಹೇಳಿಕೆ ನೀಡಿದ್ದರು.

ಸಮಾಜವಾದಿ ಪಕ್ಷದೊಳಗೆ ಅಸಮಾಧಾನ ಹೆಚ್ಚುತ್ತಿದ್ದು, ಹಲವು ಸಂಸದರು ಹಾಗೂ ನಾಯಕರು ಹೊಸ ರಾಜಕೀಯ ಆಯ್ಕೆಗಳತ್ತ ಮುಖ ಮಾಡುತ್ತಿದ್ದಾರೆ ಎಂದು ರಾಜ ಭರ್ ಹೇಳಿದ್ದರು. ಅವರ ಈ ಹೇಳಿಕೆಯ ಬೆನ್ನಲ್ಲೇ ಕೇಶವ್ ಪ್ರಸಾದ ಮೌರ್ಯ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.

ಗುರುವಾರ ಮತ್ತೊಮ್ಮೆ ಪ್ರತಿಕ್ರಿಯಿಸಿದ ಓಂ ಪ್ರಕಾಶ ರಾಜ ಭರ್, ಸಮಾಜವಾದಿ ಪಕ್ಷದಲ್ಲಿ ವಿಭಜನೆ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ. "ಅಖಿಲೇಶ ಯಾದವ ತಮ್ಮ ಸಂಸದರನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಆದರೆ ಪಕ್ಷದೊಳಗಿನ ಅಸಮಾಧಾನ ತೀವ್ರವಾಗಿದ್ದು, ಅದನ್ನು ನಿಯಂತ್ರಿಸುವುದು ಅವರಿಗೆ ಕಷ್ಟವಾಗುತ್ತಿದೆ" ಎಂದು ಅವರು ತಿಳಿಸಿದ್ದಾರೆ.

ಕೇಶವ ಪ್ರಸಾದ ಮೌರ್ಯ ಮತ್ತು ಓಂ ಪ್ರಕಾಶ ರಾಜ ಭರ್ ಅವರ ಹೇಳಿಕೆಗಳು ಉತ್ತರ ಪ್ರದೇಶ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಸಮಾಜವಾದಿ ಪಕ್ಷದ ಭವಿಷ್ಯದ ಕುರಿತು ಊಹಾಪೋಹಗಳಿಗೆ ಮತ್ತಷ್ಟು ಬಲ ನೀಡಿವೆ. ಆದರೆ ಈ ಆರೋಪಗಳಿಗೆ ಸಮಾಜವಾದಿ ಪಕ್ಷದ ನಾಯಕತ್ವದಿಂದ ಇನ್ನೂ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST