ಬೆಂಗಳೂರು, ಜೂನ್ 13 : ರೈತರ ಜಮೀನಿನ ಮೇಲೆ ಬುಲ್ಡೋಜರ್ ಓಡಿಸಿ ರಿಯಲ್ ಎಸ್ಟೇಟ್ ಸಾಮ್ರಾಜ್ಯ ಕಟ್ಟಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಸುಮಾರು 470 ದಿನಗಳಿಂದ ರೈತರು ನಡೆಸುತ್ತಿರುವ ಹೋರಾಟ, ಕಣ್ಣೀರು ಹಾಗೂ ಆಕ್ರೋಶವನ್ನು ಲೆಕ್ಕಿಸದೆ ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ 499 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಂತಿಮ ಅಧಿಸೂಚನೆ ಹೊರಡಿಸಿರುವುದು ಸರ್ಕಾರದ ನಿಜವಾದ ಮುಖವನ್ನು ಬಯಲು ಮಾಡಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದ ರೈತರನ್ನು ದುರ್ಬಲರೆಂದು ಭಾವಿಸಿದ್ದರೆ ಅದು ಸರ್ಕಾರದ ದೊಡ್ಡ ತಪ್ಪು. ಇನ್ನೂ ಒಂದೂವರೆ ವರ್ಷದಲ್ಲಿ ಜನವಿರೋಧಿ ಸರ್ಕಾರ ಇತಿಹಾಸದ ಪುಟ ಸೇರಲಿದೆ. 2028ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಈ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಪಡಿಸಲಾಗುವುದು. ರೈತರಿಗೆ ನೀಡಿರುವ ಭರವಸೆಯನ್ನು ನಾವು ಉಳಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ರೈತರ ತೀವ್ರ ವಿರೋಧದ ನಡುವೆಯೂ ಭೂಸ್ವಾಧೀನಕ್ಕೆ ಸರ್ಕಾರ ಆತುರ ತೋರುತ್ತಿರುವುದರ ಹಿಂದೆ ಏನು ಕಾರಣ ಎಂಬ ಪ್ರಶ್ನೆ ಎತ್ತಿರುವ ಅವರು, ಬಿಲ್ಡರ್‌ಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಇದಕ್ಕೆ ಕಾರಣವಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಕಸ ವಿಲೇವಾರಿ ಗುತ್ತಿಗೆ ಸೇರಿದಂತೆ ವಿವಿಧ ವಿಚಾರಗಳಲ್ಲಿ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ. ಈಗ ರೈತರ ಜಮೀನಿನ ಮೇಲೂ ಕಣ್ಣಿಟ್ಟಿರುವ ಸರ್ಕಾರ ಅಭಿವೃದ್ಧಿಯ ಹೆಸರಿನಲ್ಲಿ ರೈತರ ಬದುಕಿಗೆ ಹೊಡೆತ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
499 ಎಕರೆ ಜಮೀನಿನ ವಿಚಾರ ಕೇವಲ ಭೂಮಿಯ ಹೋರಾಟವಲ್ಲ, ರೈತರ ಹಕ್ಕು, ಗೌರವ ಹಾಗೂ ಬದುಕಿನ ಪ್ರಶ್ನೆಯಾಗಿದೆ. ಸರ್ಕಾರ ಕೂಡಲೇ ಭೂಸ್ವಾಧೀನ ಪ್ರಕ್ರಿಯೆಯನ್ನು ಹಿಂಪಡೆಯಬೇಕು. ಇಲ್ಲವಾದರೆ ರೈತರ ಆಕ್ರೋಶದ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.