ಬೆಂಗಳೂರು, ನ. 19: ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ರೀತಿಯಲ್ಲಿ ಪುಸ್ತಕ ಪ್ರಕಟಿಸಿ, ವಿಡಿಯೊಗಳ ಮೂಲಕ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿರುವ ಲಿಂಗಾಯತ ಸಮುದಾಯದ ಮುಖಂಡರು, ಅಮೆರಿಕ ಮೂಲದ ಲೇಖಕ ರವಿ ಹಂಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ನಗರದ ಬಸವ ಸಮಿತಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವರಾದ ಎಂ.ಬಿ. ಪಾಟೀಲ, ಡಾ. ಶರಣಪ್ರಕಾಶ ಪಾಟೀಲ, ಶಾಸಕ ಬಿ.ಆರ್. ಪಾಟೀಲ, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹಾಗೂ ಲಂಡನ್ ಮಾಜಿ ಮೇಯರ್ ಡಾ. ಧೀರಜ್ ಪಾಟೀಲ ಅವರು ರವಿ ಹಂಜ್ ಅವರ ಬರಹಗಳನ್ನು ಖಂಡಿಸಿದರು.
12ನೇ ಶತಮಾನದಲ್ಲಿ ಸಮಾನತೆಯ ಸಂದೇಶ ಸಾರಿದ ಬಸವಣ್ಣನವರನ್ನು ಕೊಲೆಗಡುಕ, ದರೋಡೆಕೋರ ಹಾಗೂ ಲೂಟಿಕೋರ ಎಂಬಂತೆ ಬಿಂಬಿಸಲಾಗಿದೆ. ಇಂತಹ ಬರಹಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನೂ ಪತ್ತೆಹಚ್ಚಲಾಗುವುದು ಎಂದು ಮುಖಂಡರು ಹೇಳಿದರು.
ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಬಸವಣ್ಣನವರ ವಿಚಾರಧಾರೆ ಮತ್ತು ವಚನಗಳ ಮೇಲೆ ನಡೆಯುವ ದಾಳಿಯನ್ನು ಸಹಿಸುವುದಿಲ್ಲ. ನಾವು ಶಾಂತಿಪ್ರಿಯರಾದರೂ ಇಂತಹ ಅವಹೇಳನದ ವಿರುದ್ಧ ಕಾನೂನುಬದ್ಧ ಹೋರಾಟ ನಡೆಸುತ್ತೇವೆ ಎಂದರು.
ಬಸವಣ್ಣನವರ ಸಮಾನತೆಯ ತತ್ವಗಳು ಜಗತ್ತಿನಾದ್ಯಂತ ಪ್ರಭಾವ ಬೀರಿವೆ. ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನಗಳನ್ನು ಖಂಡಿಸಿ ಹೋರಾಟ ನಡೆಸಲಾಗುವುದು ಎಂದು ಶಾಸಕ ಬಿ.ಆರ್. ಪಾಟೀಲ ತಿಳಿಸಿದರು.
ಲಂಡನ್‌ನ ಸಂಸತ್ ಆವರಣದಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪಿಸುವಾಗ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ಅವರ ವಿಚಾರಧಾರೆಗೆ ವಿಶ್ವಮಟ್ಟದಲ್ಲಿ ಗೌರವವಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮಹಾಪುರುಷರನ್ನು ಅವಹೇಳನ ಮಾಡುವುದು ಸರಿಯಲ್ಲ. ಈ ಕುರಿತು ಪೊಲೀಸರಿಗೆ ದೂರು ಸಲ್ಲಿಸಲಾಗುವುದು ಎಂದು ಡಾ. ಧೀರಜ್ ಪಾಟೀಲ ಹೇಳಿದರು.