ಬೆಳಗಾವಿ, ನ. 19: ಬೆಳಗಾವಿಯಲ್ಲಿ ಒಂದು ಕಾಲದಲ್ಲಿ ಕನ್ನಡದ ವಾತಾವರಣ ಉಸಿರುಗಟ್ಟಿಸುವಂತಿತ್ತು. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಎಲ್ಲ ಭಾಷಿಕರೂ ಕನ್ನಡವನ್ನು ಪ್ರೀತಿಸುವ ಸನ್ನಿವೇಶ ನಿರ್ಮಾಣವಾಗಿದೆ. ಇಲ್ಲಿನ ರಾಜ್ಯೋತ್ಸವ ಆಚರಣೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಬೆಳಗಾವಿ ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತ ನಾರಾಯಣ ಬರಮನಿ ಹೇಳಿದರು.
ನಗರದ ನೆಹರು ನಗರ ಕನ್ನಡ ಭವನದಲ್ಲಿ ಗುರುವಾರ ಜೆಜಿಐ ಸಂಸ್ಥೆಯ ಜೈನ ಪದವಿಪೂರ್ವ ಮಹಾವಿದ್ಯಾಲಯದ ಕನ್ನಡ ಬಳಗ ಆಯೋಜಿಸಿದ್ದ ಕನ್ನಡೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಕಾಲೇಜು ದಿನಗಳಲ್ಲಿ ಬೆಳಗಾವಿಯಲ್ಲಿ ಕನ್ನಡದ ವಾತಾವರಣ ಉಸಿರುಗಟ್ಟಿಸುವಂತಿತ್ತು. ಆದರೆ ಇಂದು ಕನ್ನಡಮಯ ವಾತಾವರಣ ನಿರ್ಮಾಣವಾಗಿದ್ದು, ಎಲ್ಲ ಭಾಷಿಕರೂ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇದಕ್ಕೆ ಕನ್ನಡಪರ ಸಂಘಟನೆಗಳ ಹೋರಾಟ, ಕ್ರಿಯಾಶೀಲತೆ, ಸರಕಾರದ ಪ್ರೋತ್ಸಾಹ ಹಾಗೂ ರಚನಾತ್ಮಕ ಕಾರ್ಯಕ್ರಮಗಳು ಕಾರಣವಾಗಿವೆ ಎಂದರು.
ಕನ್ನಡದ ಉತ್ಸಾಹ ವರ್ಷವಿಡೀ ಉಳಿಯಲು ಸೃಜನಶೀಲ ಚಟುವಟಿಕೆಗಳು ನಿರಂತರ ನಡೆಯಬೇಕು. ವಿದ್ಯಾರ್ಥಿಗಳು, ಯುವಕರು ಹಾಗೂ ಪ್ರಜ್ಞಾವಂತರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಯಾವುದೇ ಭಾಷೆ ಅಥವಾ ಸಂಸ್ಕೃತಿಯನ್ನು ದ್ವೇಷಿಸದೆ, ಅನ್ಯ ಭಾಷೆಗಳನ್ನು ಕಲಿಯುವ ಆಸಕ್ತಿಯೊಂದಿಗೆ ಕನ್ನಡದ ಮೇಲಿನ ಪ್ರೀತಿ, ಅಭಿಮಾನವನ್ನು ಸದಾ ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಾಚಾರ್ಯ ವಿಶ್ವನಾಥ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಉಪನ್ಯಾಸಕ ಡಾ. ಕೆ.ಎನ್. ದೊಡ್ಡಮನಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಚಿನ್ಮಯ ಕೇಳಕರ ಹಾಗೂ ಸ್ಪೂರ್ತಿ ಕುಂಬಾರ ನಿರೂಪಿಸಿದರು. ಸಮಿಧಾ ಪೈ ವಂದಿಸಿದರು.
ನಂತರ ಪ್ರಶಸ್ತಿ ಪ್ರದಾನ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.