ಬೆಳಗಾವಿ, ನ. 18: ಕುಟುಂಬಸ್ಥರು ಅಥವಾ ಸಂಬಂಧಿಕರು ಇಲ್ಲದ ಇಬ್ಬರು ವ್ಯಕ್ತಿಗಳ ಅಂತ್ಯಸಂಸ್ಕಾರವನ್ನು ಮಾಜಿ ಮೇಯರ್ ವಿಜಯ ಮೋರೆ ನೇತೃತ್ವದ ತಂಡ ನಗರದ ಸದಾಶಿವನಗರ ರುದ್ರಭೂಮಿಯಲ್ಲಿ ಗೌರವಯುತವಾಗಿ ನೆರವೇರಿಸಿತು.
ಕೇಂದ್ರ ಬಸ್ ನಿಲ್ದಾಣದ ಸಮೀಪ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಅವರಿಗೆ ಸಂಬಂಧಿಕರು ಇಲ್ಲದ ಕಾರಣ ಮಾರುಕಟ್ಟೆ ಠಾಣೆಯ ಪೊಲೀಸರು ಅಂತ್ಯಸಂಸ್ಕಾರಕ್ಕಾಗಿ ವಿಜಯ ಮೋರೆ ಅವರನ್ನು ಸಂಪರ್ಕಿಸಿದ್ದರು.
ಅದೇ ರೀತಿ ಮಚ್ಚೆಯ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿದ್ದ ಮಹಿಳೆಯೊಬ್ಬರು ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರಕ್ಕೆ ನೆರವಾಗುವಂತೆ ಕೇಂದ್ರದ ಅಧಿಕಾರಿಗಳು ವಿಜಯ ಮೋರೆ ಹಾಗೂ ಅವಧೂತ ತುಡವೇಕರ ಅವರನ್ನು ಕೋರಿದ್ದರು.
ಕೂಡಲೇ ಸ್ಪಂದಿಸಿದ ತಂಡ ಇಬ್ಬರ ಅಂತಿಮ ವಿಧಿವಿಧಾನಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿ, ಮಾನವೀಯತೆ ಮೆರೆದಿತು. ಈ ಸಂದರ್ಭದಲ್ಲಿ ಅಲನ್ ವಿಜಯ ಮೋರೆ, ಅವಧೂತ ತುಡವೇಕರ, ಪದ್ಮಪ್ರಸಾದ ಹೂಲಿ, ಪ್ರಕಾಶ ಮುಚಂಡಿಕರ, ನಿಶಾರ ಶಂಶೇರ, ಸಂಜಯ ಮೇತ್ರಿ, ಸದಾಶಿವನಗರ ರುದ್ರಭೂಮಿ ಸಿಬ್ಬಂದಿ ಹಾಗೂ ಮಾರುಕಟ್ಟೆ ಪೊಲೀಸ್ ಠಾಣೆಯ ಸಿಬ್ಬಂದಿ ಸುಜಾತಾ ಉಪಸ್ಥಿತರಿದ್ದರು.
ಅಂತಿಮಯಾತ್ರೆಯಲ್ಲಿ ತಮ್ಮವರೆಂದು ಕರೆಯಲು ಯಾರೂ ಇಲ್ಲದ ಇಬ್ಬರಿಗೆ ಗೌರವಯುತ ವಿದಾಯ ನೀಡುವ ಮೂಲಕ ತಂಡ ಮಾನವೀಯತೆಯ ಸಂದೇಶ ಸಾರಿತು.