ಸಂಕೇಶ್ವರ, ನ. 18: ಮಕ್ಕಳಿಗೂ ಎಲ್ಲರಂತೆ ಸಮಾನತೆಯ ಹಕ್ಕಿದ್ದು, ಅವರ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ನ್ಯಾಯಾಧೀಶ ಮಧು ಟಿ. ಹೇಳಿದರು.
ಇಲ್ಲಿನ ಪಿ.ಎಂ.ಶ್ರೀ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಶಿಕ್ಷಣ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಮಕ್ಕಳ ಕಾನೂನುಗಳ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
6ರಿಂದ 14 ವರ್ಷದ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಪಡೆಯುವ ಹಕ್ಕಿದೆ. ಮಕ್ಕಳನ್ನು ದುಡಿಮೆಗೆ ಬಳಸಿಕೊಳ್ಳುವುದು, ಯಾವುದೇ ರೀತಿಯ ಶೋಷಣೆಗೆ ಒಳಪಡಿಸುವುದು ಹಾಗೂ ಬಾಲ್ಯವಿವಾಹ ಮಾಡುವುದು ಕಾನೂನುಬಾಹಿರವಾಗಿದೆ ಎಂದು ತಿಳಿಸಿದರು.
ನ್ಯಾಯವಾದಿ ಡಿ.ಪಿ. ಕದಂ ಮಾತನಾಡಿ, ಮಕ್ಕಳು ಉತ್ತಮ ಶಿಕ್ಷಣ ಪಡೆದು ಜ್ಞಾನವಂತರಾಗಿ ಬೆಳೆಯಬೇಕು ಎಂದರು.
ಮುಖ್ಯಾಧ್ಯಾಪಕ ಎ.ಎ. ತಳವಾರ ಅಧ್ಯಕ್ಷತೆ ವಹಿಸಿದ್ದರು. ಎ.ಬಿ. ಕಲಪತ್ರಿ, ಎಲ್.ಬಿ. ಬಿಸ್ಕೋಪ, ಬಿ.ಬಿ. ಪಾರ್ಥನಹಳ್ಳಿ, ಸುರೇಶ ಮದೇಪಗೋಳ, ಎಸ್.ಎಚ್. ಭಗವಾನ, ಜಿ.ಪಿ. ಮುಧೋಳ ಉಪಸ್ಥಿತರಿದ್ದರು.