ಬೆಳಗಾವಿ, ನ. 18: ಸರಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸುವುದು ಇರುಳಲ್ಲಿ ಕಂಡ ಬಾವಿಗೆ ಹಗಲಿನಲ್ಲಿ ಬಿದ್ದಂತೆ. ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಕಲಿಯುವ ಮಕ್ಕಳ ನಡುವೆ ಭೇದಭಾವ ಸೃಷ್ಟಿಯಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಿ.ಎಸ್. ಚೌಗಲೆ ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ವಿಶೇಷ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾಷೆ ಸಮೃದ್ಧಗೊಳ್ಳಲು ಪರಸ್ಪರ ಕೊಡು–ಕೊಳ್ಳುವಿಕೆ ಅಗತ್ಯ. ಭಾಷೆ ಮತ್ತು ಬದುಕಿನಲ್ಲಿ ಬಹುತ್ವ ಸ್ವಾಭಾವಿಕವಾಗಿ ಮಿಳಿತಗೊಂಡಿದೆ. ಮರಾಠಿಯ ಸಂತ ಜ್ಞಾನೇಶ್ವರನಿಗೆ ಕನ್ನಡ ಗೊತ್ತಿದ್ದರೆ, ಬಸವಣ್ಣನಿಗೆ ಮರಾಠಿ ತಿಳಿದಿತ್ತು. ಅವರ ಓವಿ ಹಾಗೂ ವಚನಗಳ ಅಧ್ಯಯನದಿಂದ ಇದು ಸ್ಪಷ್ಟವಾಗುತ್ತದೆ. ಜಾನಪದ ರಂಗಭೂಮಿ ಭಾಷೆಯ ಮಡಿವಂತಿಕೆಯನ್ನು ಕಳಚಿ ಪರಸ್ಪರ ಸ್ವೀಕಾರದ ಮೂಲಕ ಕಲೆಯನ್ನು ಶ್ರೀಮಂತಗೊಳಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ, ವಿಶ್ವವಿದ್ಯಾಲಯದಲ್ಲಿ ನಾಟಕ ವಿಭಾಗ ಆರಂಭಿಸುವಂತೆ ಚೌಗಲೆ ಒತ್ತಾಯಿಸುತ್ತಿದ್ದು, ಶೀಘ್ರದಲ್ಲೇ ಅವರ ಬೇಡಿಕೆ ಈಡೇರಿಸಬೇಕಿದೆ ಎಂದರು.
ಪ್ರೊ. ಪ್ರಶಾಂತ ನಾಯಕ ಉಪನ್ಯಾಸ ನೀಡಿದರು. ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಚೌಗಲೆ ಅವರನ್ನು ಸನ್ಮಾನಿಸಲಾಯಿತು.
ಕುಲಸಚಿವ ಶ್ರವಣ ನಾಯಕ, ಪ್ರೊ. ಚಂದ್ರಿಕಾ ಕೆ.ಬಿ., ಹಣಕಾಸು ಅಧಿಕಾರಿ ಪ್ರೊ. ಬಿ.ಎಸ್. ನಾವಿ, ಗಜಾನನ ನಾಯಕ ಉಪಸ್ಥಿತರಿದ್ದರು. ಹನುಮಂತ ಪ್ರಾರ್ಥಿಸಿದರು. ಸಿದ್ದಲಿಂಗಪ್ಪ ವಂದಿಸಿದರು.