ಬೀದರ್, ನ. 19: ವಿಶ್ವಗುರು ಬಸವಣ್ಣನವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಲೇಖಕ ರವಿ ಹಂಜ ಅವರನ್ನು ಕೂಡಲೇ ಬಂಧಿಸಬೇಕು ಹಾಗೂ ಅವರ ‘ಬಸವ ಮಂಟಪ’ ಕೃತಿಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ವಿವಿಧ ಬಸವಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ರವಿ ಹಂಜ ವಿರುದ್ಧ ಘೋಷಣೆ ಕೂಗಿ, ಅವರ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು ಬೆಂಕಿ ಹಚ್ಚಿದರು. ‘ಬಸವ ಮಂಟಪ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಮಾಜಿ ಪೊಲೀಸ್ ಅಧಿಕಾರಿ ಶಂಕರ ಬಿದರಿ ಅವರ ಭಾವಚಿತ್ರವನ್ನೂ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ನ್ಯೂ ಟೌನ್ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ ಪ್ರತಿಭಟನಾಕಾರರು, ರವಿ ಹಂಜ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದರು. ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ವಿವಿಧ ಮಠಗಳ ಸ್ವಾಮೀಜಿಗಳು ಹಾಗೂ ಮುಖಂಡರು, ಬಸವಣ್ಣನವರ ವ್ಯಕ್ತಿತ್ವ, ವಚನ ಸಾಹಿತ್ಯ, ಬಸವತತ್ವ, ಲಿಂಗಾಯತ ಧರ್ಮ ಹಾಗೂ ಶರಣರ ಕುರಿತು ರವಿ ಹಂಜ ಆಕ್ಷೇಪಾರ್ಹ ಬರಹಗಳನ್ನು ಪ್ರಕಟಿಸಿದ್ದಾರೆ ಎಂದು ಆರೋಪಿಸಿದರು.
ಸುಮಾರು 600 ಪುಟಗಳ ‘ಬಸವ ಮಂಟಪ’ ಕೃತಿಯಲ್ಲಿ ಬಸವಣ್ಣನವರ ಬಗ್ಗೆ ಅವಹೇಳನಕಾರಿ ವಿಷಯಗಳಿವೆ. ಮಾಧ್ಯಮ ಸಂದರ್ಶನಗಳಲ್ಲಿಯೂ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ. ಹೀಗಾಗಿ ಕೃತಿಯನ್ನು ನಿಷೇಧಿಸಿ, ಲೇಖಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಾಗತಿಕ ಲಿಂಗಾಯತ ಮಹಾಸಭೆಯ ರಾಜ್ಯ ಉಪಾಧ್ಯಕ್ಷ ಬಸವರಾಜ ಧನ್ನೂರ, ಚನ್ನಬಸವಾನಂದ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಅಲ್ಲಮಪ್ರಭು ನಾವದಗೇರೆ, ರಾಜೇಂದ್ರ ಜೊನ್ನಿಕೇರಿ, ಯೋಗೇಶ ಸಿರಿಗೆರೆ, ಕುಶಾಲರಾವ ಪಾಟೀಲ ಖಾಜಾಪುರ, ಹಾವಶೆಟ್ಟಿ ಪಾಟೀಲ, ಯೋಗೇಂದ್ರ ಯದಲಾಪುರೆ, ರವಿ ಪಾಪಡೆ, ಪ್ರವೀಣ ಎಕಲಾರೆ, ಸಿದ್ದು ಶೆಟಕಾರ, ವಿವೇಕಾನಂದ ಪಟ್ನೆ, ರಾಜಕುಮಾರ ಕಮಠಾಣೆ ಸೇರಿದಂತೆ ವಿವಿಧ ಬಸವಪರ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.