ಹೊಸದಿಲ್ಲಿ, ನ. 16: ಗುಜರಾತ್‌ನಲ್ಲಿ 2002ರ ಕೋಮುಗಲಭೆಯ ಸಂದರ್ಭದಲ್ಲಿ ನಡೆದ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಹಾಗೂ ಅವರ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಇಬ್ಬರು ಅಪರಾಧಿಗಳ ಶಿಕ್ಷೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿರುವ ಸುಪ್ರೀಂ ಕೋರ್ಟ, ಅವರಿಗೆ ಜಾಮೀನು ಮಂಜೂರು ಮಾಡಿದೆ.
ಅಪರಾಧಿಗಳು ಈಗಾಗಲೇ 17 ವರ್ಷಗಳಿಗೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿರುವುದು ಹಾಗೂ ಅವರಲ್ಲಿ ಒಬ್ಬರು ತೀವ್ರ ಅಂಗವೈಕಲ್ಯ ಹೊಂದಿರುವುದನ್ನು ಪರಿಗಣಿಸಿ ನ್ಯಾಯಾಲಯ ಈ ಆದೇಶ ನೀಡಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ ಮತ್ತು ಪಿ.ಬಿ. ವರಾಳೆ ಅವರನ್ನೊಳಗೊಂಡ ಪೀಠವು ಅಕ್ಟೋಬರ್ 28ರಂದು ಈ ಆದೇಶ ಹೊರಡಿಸಿದೆ. ಪ್ರಕರಣದ ಅಪರಾಧಿಗಳಾದ ಬಿಪಿನ್‌ಚಂದ ಕನೈಯಾಲಾಲ್ ಜೋಶಿ ಮತ್ತು ಪ್ರದೀಪ ರಮಣಲಾಲ್ ಮೋಧಿಯಾ ಅವರಿಗೆ ವಿಚಾರಣಾ ನ್ಯಾಯಾಲಯ ವಿಧಿಸುವ ಷರತ್ತುಗಳಿಗೆ ಒಳಪಟ್ಟು ಜಾಮೀನು ನೀಡುವಂತೆ ಸೂಚಿಸಿದೆ.
2017ರ ಮೇ 4ರಂದು ಬಾಂಬೆ ಹೈಕೋರ್ಟ ತಮ್ಮ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿದ್ದನ್ನು ಪ್ರಶ್ನಿಸಿ ಇಬ್ಬರೂ ಸುಪ್ರೀಂ ಕೋರ್ಟಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಗಳ ವಿಚಾರಣೆ ಬಾಕಿ ಇರುವ ಅವಧಿಗೆ ಶಿಕ್ಷೆಯನ್ನು ಅಮಾನತುಗೊಳಿಸಲಾಗಿದೆ.
ವಿಚಾರಣೆ ವೇಳೆ ಅಪರಾಧಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ, ತಮ್ಮ ಕಕ್ಷಿದಾರರು 17 ವರ್ಷಗಳಿಗೂ ಹೆಚ್ಚು ಕಾಲ ಸೆರೆವಾಸ ಅನುಭವಿಸಿದ್ದಾರೆ. ಅವರಲ್ಲಿ ಒಬ್ಬರ ಹೆಸರು ಆರಂಭಿಕ ಪ್ರಥಮ ಮಾಹಿತಿ ವರದಿಯಲ್ಲಿ ಇರಲಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ರಾಜಾ ಠಾಕರೆ, ಅಪರಾಧದ ಗಂಭೀರತೆಯನ್ನು ಪರಿಗಣಿಸುವಂತೆ ಮನವಿ ಮಾಡಿದರು. ಆದರೆ ಸುದೀರ್ಘ ಜೈಲುವಾಸ, ಒಬ್ಬ ಅಪರಾಧಿಯ ಅಂಗವೈಕಲ್ಯ ಹಾಗೂ ಮೇಲ್ಮನವಿಯಲ್ಲಿ ಪರಿಶೀಲಿಸಬೇಕಾದ ಕಾನೂನಾತ್ಮಕ ಮತ್ತು ವಾಸ್ತವಿಕ ಅಂಶಗಳಿರುವುದನ್ನು ಗಮನಿಸಿದ ಪೀಠ ಜಾಮೀನು ಮಂಜೂರು ಮಾಡಿತು.
ಮೂರು ವರ್ಷದ ಮಗುವನ್ನು ನೆಲಕ್ಕೆ ಅಪ್ಪಳಿಸಿ ಹತ್ಯೆ
2002ರ ಮಾರ್ಚ್ 3ರಂದು ಗುಜರಾತ್‌ನಲ್ಲಿ ಕೋಮುಗಲಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಐದು ತಿಂಗಳ ಗರ್ಭಿಣಿಯಾಗಿದ್ದ 21 ವರ್ಷದ ಬಿಲ್ಕಿಸ್ ಬಾನು ಅವರ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಈ ವೇಳೆ ಅವರ ಮೂರು ವರ್ಷದ ಮಗಳು ಸಲೇಹಾಳನ್ನು ದುಷ್ಕರ್ಮಿಗಳು ನೆಲಕ್ಕೆ ಅಪ್ಪಳಿಸಿ ಕ್ರೂರವಾಗಿ ಹತ್ಯೆ ಮಾಡಿದ್ದರು. ಬಿಲ್ಕಿಸ್ ಬಾನು ಅವರ ಕುಟುಂಬದ ಒಟ್ಟು ಏಳು ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಈ ಭೀಕರ ದಾಳಿಯಲ್ಲಿ ಬಿಲ್ಕಿಸ್ ಬಾನು ಪ್ರಾಣಾಪಾಯದಿಂದ ಪಾರಾಗಿದ್ದರು.
ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದ ಈ ಪ್ರಕರಣದ ತನಿಖೆಯನ್ನು ನಂತರ ಸಿಬಿಐಗೆ ವಹಿಸಲಾಗಿತ್ತು. ಮಹಾರಾಷ್ಟ್ರದ ವಿಶೇಷ ನ್ಯಾಯಾಲಯವು 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 2017ರಲ್ಲಿ ಬಾಂಬೆ ಹೈಕೋರ್ಟ ಈ ತೀರ್ಪನ್ನು ಎತ್ತಿಹಿಡಿದಿತ್ತು.
2022ರಲ್ಲಿ ಗುಜರಾತ್ ಸರ್ಕಾರವು ಎಲ್ಲ 11 ಅಪರಾಧಿಗಳನ್ನು ಅವಧಿಗೆ ಮುನ್ನ ಬಿಡುಗಡೆ ಮಾಡಿದ್ದು ವ್ಯಾಪಕ ವಿವಾದಕ್ಕೆ ಕಾರಣವಾಗಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ, 2024ರ ಜನವರಿ 8ರಂದು ಗುಜರಾತ್ ಸರ್ಕಾರದ ಕ್ಷಮಾದಾನ ಆದೇಶವನ್ನು ರದ್ದುಪಡಿಸಿತ್ತು. ಅಪರಾಧಿಗಳು ಮತ್ತೆ ಜೈಲಿಗೆ ಮರಳುವಂತೆ ನಿರ್ದೇಶಿಸಿತ್ತು.
ಇದೀಗ 11 ಅಪರಾಧಿಗಳ ಪೈಕಿ ಇಬ್ಬರಿಗೆ ಮಾತ್ರ ಜಾಮೀನು ದೊರೆತಿದ್ದು, ಉಳಿದ ಒಂಬತ್ತು ಮಂದಿ ಜೈಲಿನಲ್ಲಿದ್ದಾರೆ ಎಂದು ವರದಿಯಾಗಿದೆ.