ಹೊಸದಿಲ್ಲಿ, ನ. 16: ದೇಶಾದ್ಯಂತ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುವ ನಿರ್ಧಾರವನ್ನು ಯಾರು ಕೈಗೊಂಡಿದ್ದಾರೆ? ಮೂವರು ಚುನಾವಣಾ ಆಯುಕ್ತರ ಸರ್ವಾನುಮತದ ಒಪ್ಪಿಗೆ ಪಡೆಯಲಾಗಿದೆಯೇ ಅಥವಾ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಏಕಪಕ್ಷೀಯವಾಗಿ ಆದೇಶ ಹೊರಡಿಸಿದ್ದಾರೆಯೇ? ಎಂಬುದೂ ಸೇರಿದಂತೆ ಚುನಾವಣಾ ಆಯೋಗದ ಕಾರ್ಯವೈಖರಿಗೆ ಸಂಬಂಧಿಸಿದ 48 ಪ್ರಶ್ನೆಗಳಿಗೆ ಉತ್ತರ ಪಡೆಯಲು ಅನುಮತಿ ನೀಡುವಂತೆ ಇಂಡಿಯಾ ಮೈತ್ರಿಕೂಟದ ನಾಯಕರು ಸುಪ್ರೀಂ ಕೋರ್ಟ ಮೊರೆ ಹೋಗಿದ್ದಾರೆ.
ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಕೈಗೊಂಡ ನಿರ್ಧಾರಗಳು, ಮತದಾರರ ಹೆಸರುಗಳ ಸಾಮೂಹಿಕ ಅಳಿಸುವಿಕೆ, ದತ್ತಾಂಶ ನಿರ್ವಹಣೆ ಹಾಗೂ ಚುನಾವಣಾ ಆಯೋಗದ ಆಂತರಿಕ ಆಡಳಿತಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ, ಚುನಾವಣಾ ಆಯುಕ್ತರಾದ ಡಾ. ಸುಖ್‌ಬೀರ್ ಸಿಂಗ್ ಸಂಧು, ಡಾ. ವಿವೇಕ್ ಜೋಶಿ ಹಾಗೂ ಉಪ ಚುನಾವಣಾ ಆಯುಕ್ತ ಭಾನು ಪ್ರಕಾಶ ಯೇತೂರು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಂದ ಲಿಖಿತ ಉತ್ತರ ಪಡೆಯಲು 48 ಪ್ರಶ್ನೆಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಸರ್ವಾನುಮತದ ನಿರ್ಧಾರವೇ ಅಥವಾ ಏಕಪಕ್ಷೀಯ ಆದೇಶವೇ?
ರಾಷ್ಟ್ರವ್ಯಾಪಿ ಎಸ್‌ಐಆರ್ ಜಾರಿಗೊಳಿಸುವ ನಿರ್ಧಾರವನ್ನು ಚುನಾವಣಾ ಆಯೋಗದ ಮೂವರು ಸದಸ್ಯರು ಸಾಮೂಹಿಕವಾಗಿ ಕೈಗೊಂಡಿದ್ದಾರೆಯೇ ಎಂಬುದು ಅರ್ಜಿದಾರರು ಎತ್ತಿರುವ ಪ್ರಮುಖ ಪ್ರಶ್ನೆಯಾಗಿದೆ. ಮುಖ್ಯ ಚುನಾವಣಾ ಆಯುಕ್ತರು ಇತರ ಇಬ್ಬರು ಆಯುಕ್ತರ ಅನುಮೋದನೆ ಅಥವಾ ಒಪ್ಪಿಗೆಯಿಲ್ಲದೆ ಆಯೋಗದ ಅಧಿಕಾರವನ್ನು ಬಳಸಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಒತ್ತಾಯಿಸಲಾಗಿದೆ.
ಚುನಾವಣಾ ಆಯೋಗವು ತನ್ನ ಹಿಂದಿನ ಪ್ರಮಾಣಪತ್ರಗಳಲ್ಲಿ ಎಸ್‌ಐಆರ್ ಆದೇಶಗಳನ್ನು ಸರ್ವಾನುಮತದಿಂದ ಹೊರಡಿಸಲಾಗಿದೆ ಎಂದು ತಿಳಿಸಿದ್ದರೂ, ಅದಕ್ಕೆ ಸಂಬಂಧಿಸಿದ ಸಭೆಗಳ ನಡಾವಳಿ, ಅಧಿಕೃತ ಕಡತಗಳ ಸಂಖ್ಯೆ, ದಿನಾಂಕ ಹಾಗೂ ನಿರ್ಧಾರಗಳ ದಾಖಲೆಗಳನ್ನು ಬಹಿರಂಗಪಡಿಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
2025ರ ಆಗಸ್ಟ್‌ನಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ನೀಡಿದ್ದ ಉತ್ತರದಲ್ಲಿ ರಾಷ್ಟ್ರವ್ಯಾಪಿ ಎಸ್‌ಐಆರ್ ನಡೆಸುವ ನಿರ್ಧಾರ ಕೈಗೊಂಡಿಲ್ಲ ಎಂದು ಆಯೋಗ ತಿಳಿಸಿತ್ತು. ಹೀಗಿರುವಾಗ ನಂತರ ಈ ನಿರ್ಧಾರವನ್ನು ಯಾವಾಗ ಮತ್ತು ಯಾವ ಆಧಾರದಲ್ಲಿ ಕೈಗೊಳ್ಳಲಾಯಿತು ಎಂಬುದನ್ನು ವಿವರಿಸಬೇಕೆಂದು ಕೋರಲಾಗಿದೆ.
ಇತರ ಇಬ್ಬರು ಚುನಾವಣಾ ಆಯುಕ್ತರು ಮುಖ್ಯ ಚುನಾವಣಾ ಆಯುಕ್ತರ ನಿರ್ಧಾರಗಳಿಗೆ ಎಷ್ಟು ಬಾರಿ ಲಿಖಿತ ಆಕ್ಷೇಪಣೆ ಅಥವಾ ಭಿನ್ನಮತ ದಾಖಲಿಸಿದ್ದಾರೆ ಎಂಬ ಮಾಹಿತಿಯನ್ನೂ ಕೇಳಲಾಗಿದೆ.
ಮತದಾರರ ಹೆಸರು ಅಳಿಸುವಿಕೆ ಕುರಿತು ಪ್ರಶ್ನೆ
ಮತದಾರರ ನೋಂದಣಿಗೆ ಬಳಸುವ ನಮೂನೆ-6ರಲ್ಲಿ ಹೊಸ ಘೋಷಣೆ ಸೇರಿಸಲು ಯಾರು ಅನುಮೋದನೆ ನೀಡಿದರು? ಮತದಾರರ ಪಟ್ಟಿಯ ನಿರ್ವಹಣೆಗೆ ಬಳಸುವ ಇಆರ್‌ಒನೆಟ್ ಮತ್ತು ಇಸಿಐನೆಟ್ ವ್ಯವಸ್ಥೆಗಳನ್ನು ಕೇಂದ್ರೀಕರಿಸುವ ನಿರ್ಧಾರವನ್ನು ಯಾರು ಕೈಗೊಂಡರು? ಈ ತಂತ್ರಾಂಶಗಳ ವಿನ್ಯಾಸ, ನಿರ್ವಹಣೆ ಹಾಗೂ ನಿಯಂತ್ರಣ ಯಾರ ಕೈಯಲ್ಲಿದೆ ಎಂಬ ಪ್ರಶ್ನೆಗಳನ್ನು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.
ಮತದಾರರ ಪಟ್ಟಿಯಿಂದ ಎಷ್ಟು ಹೆಸರುಗಳನ್ನು ಅಳಿಸಲಾಗಿದೆ, ಯಾವ ಕಾರಣಗಳಿಗಾಗಿ ಅಳಿಸಲಾಗಿದೆ ಹಾಗೂ ಹೆಸರುಗಳನ್ನು ತೆಗೆದುಹಾಕುವ ಮೊದಲು ಯಾವ ಪರಿಶೀಲನಾ ವಿಧಾನ ಅನುಸರಿಸಲಾಗಿದೆ ಎಂಬುದರ ರಾಜ್ಯವಾರು ವಿವರಗಳನ್ನು ನೀಡುವಂತೆ ಕೋರಲಾಗಿದೆ.
ಮತದಾರರ ನೋಂದಣಿ ಅಧಿಕಾರಿಗಳ ಅಧಿಕೃತ ಆದೇಶವಿಲ್ಲದೆ ಸಾಮೂಹಿಕವಾಗಿ ಹೆಸರುಗಳನ್ನು ಅಳಿಸಲಾಗಿದೆಯೇ? ಖಾಸಗಿ ಗುತ್ತಿಗೆದಾರರು ಅಥವಾ ತಂತ್ರಾಂಶ ನಿರ್ವಹಣಾ ಸಂಸ್ಥೆಗಳಿಗೆ ಮತದಾರರ ದತ್ತಾಂಶದಲ್ಲಿ ಬದಲಾವಣೆ ಮಾಡುವ ಅಧಿಕಾರ ನೀಡಲಾಗಿತ್ತೇ ಎಂಬುದನ್ನೂ ಸ್ಪಷ್ಟಪಡಿಸುವಂತೆ ಒತ್ತಾಯಿಸಲಾಗಿದೆ.
ಈ ಪ್ರಕ್ರಿಯೆಯಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳ ಪಾತ್ರವೇನು, ಹೆಸರು ಅಳಿಸುವ ಮೊದಲು ಸಂಬಂಧಿಸಿದ ಮತದಾರರಿಗೆ ನೋಟಿಸ್ ನೀಡಲಾಗಿತ್ತೇ ಹಾಗೂ ಆಕ್ಷೇಪಣೆ ಸಲ್ಲಿಸಲು ಎಷ್ಟು ಕಾಲಾವಕಾಶ ಕಲ್ಪಿಸಲಾಗಿತ್ತು ಎಂಬ ವಿವರಗಳನ್ನು ಕೇಳಲಾಗಿದೆ.
ಮತದಾರರ ಪಟ್ಟಿಯ ದತ್ತಾಂಶವನ್ನು ಯಾರು ಪ್ರವೇಶಿಸಿದ್ದಾರೆ, ಯಾವ ಬದಲಾವಣೆಗಳನ್ನು ಮಾಡಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಕೈಗೊಂಡಿರುವ ಲೆಕ್ಕಪರಿಶೋಧನಾ ಕ್ರಮಗಳ ಮಾಹಿತಿಯನ್ನೂ ಒದಗಿಸುವಂತೆ ಅರ್ಜಿದಾರರು ಕೋರಿದ್ದಾರೆ.
ಚುನಾವಣಾ ಆಯೋಗವು ಅಕ್ಟೋಬರ್ 26 ಮತ್ತು ನವೆಂಬರ್ 14ರಂದು ಸಲ್ಲಿಸಿರುವ ಪ್ರಮಾಣಪತ್ರಗಳಲ್ಲಿ ಪ್ರಮುಖ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿಲ್ಲ. ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ಅಧಿಕೃತ ದಾಖಲೆಗಳು ಆಯೋಗದ ಬಳಿಯೇ ಇರುವುದರಿಂದ ಅವುಗಳನ್ನು ನ್ಯಾಯಾಲಯದ ಪರಿಶೀಲನೆಗೆ ಒಳಪಡಿಸುವುದು ಅಗತ್ಯವೆಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.
ಚುನಾವಣಾ ಆಯೋಗದ ನಿರ್ಧಾರಗಳ ಕಾನೂನುಬದ್ಧತೆ, ಪಾರದರ್ಶಕತೆ ಹಾಗೂ ಮತದಾರರ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ವಾಸ್ತವಾಂಶಗಳನ್ನು ತಿಳಿದುಕೊಳ್ಳಲು ಈ 48 ಪ್ರಶ್ನೆಗಳಿಗೆ ಉತ್ತರ ಪಡೆಯುವುದು ಅತ್ಯಗತ್ಯ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಆದರೆ, ಈ ಆರೋಪಗಳು ಇನ್ನೂ ನ್ಯಾಯಾಂಗ ಪರಿಶೀಲನೆಯ ಹಂತದಲ್ಲಿದ್ದು, ಚುನಾವಣಾ ಆಯೋಗವು ಅಕ್ರಮ ಎಸಗಿರುವುದಾಗಿ ನ್ಯಾಯಾಲಯ ಯಾವುದೇ ಅಂತಿಮ ತೀರ್ಮಾನ ಪ್ರಕಟಿಸಿಲ್ಲ.