ಗುವಾಹಟಿ, ನ. 14: ಅಸ್ಸಾಂನ ಗುವಾಹಟಿಯಲ್ಲಿ 9ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ತಾಯಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ ಬಳಿಕ ಬಹುಮಹಡಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ನಗರದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಬಾಲಕ ಶುಕ್ರವಾರ ರಾತ್ರಿ ಬಮುನಿಮೈದಾಂ ಪ್ರದೇಶದ ತನ್ನ ಮನೆಯಲ್ಲಿ ತಾಯಿಯ ಮೇಲೆ ಹರಿತವಾದ ಆಯುಧದಿಂದ ದಾಳಿ ನಡೆಸಿದ್ದಾನೆ. ಇದರಿಂದ ಮಹಿಳೆಯ ಕುತ್ತಿಗೆಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯ ಬಳಿಕ ಮನೆಯಿಂದ ಹೊರಬಂದ ಬಾಲಕ, ಶಾಲೆಯ ವಾಟ್ಸಾಪ್ ಸಂದೇಶ ಗುಂಪಿನಲ್ಲಿ ಘಟನೆಯ ಕುರಿತು ಮಾಹಿತಿ ಹಂಚಿಕೊಂಡಿದ್ದಾನೆ. ತನ್ನ ಮನೆಯ ವಿಳಾಸ ಪತ್ತೆಹಚ್ಚಿ ಗಾಯಗೊಂಡಿರುವ ತಾಯಿಯನ್ನು ರಕ್ಷಿಸುವಂತೆ ಸಹಪಾಠಿಗಳಲ್ಲಿ ಮನವಿ ಮಾಡಿದ್ದಾನೆ.
ನಂತರ ನಗರದ ಎಬಿಸಿ ಪ್ರದೇಶಕ್ಕೆ ತೆರಳಿದ ಬಾಲಕ, ಅಲ್ಲಿನ ಬಹುಮಹಡಿ ಕಟ್ಟಡವೊಂದರ ಮೇಲ್ಛಾವಣಿಯಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾನೆ. ಗಾಯಗೊಂಡ ಮಹಿಳೆಯನ್ನು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.