ಬೆಳಗಾವಿ, ಸೆ. 13 : (ಸಮದರ್ಶಿ ಸುದ್ದಿ) - ಜನನ ಮತ್ತು ಮರಣ ಪ್ರಮಾಣಪತ್ರಕ್ಕಾಗಿ ಮಹಾನಗರ ಪಾಲಿಕೆ ಕಚೇರಿಗೆ ಪದೇ ಪದೇ ಅಲೆದಾಡುವ ಅಗತ್ಯ ಇನ್ನು ಕಡಿಮೆಯಾಗಲಿದೆ. ಸಾರ್ವಜನಿಕರ ಮನೆ ಬಾಗಿಲಿಗೇ ಅಂಚೆ ಮೂಲಕ ಪ್ರಮಾಣಪತ್ರ ತಲುಪಿಸುವ ನೂತನ ವ್ಯವಸ್ಥೆಗೆ ಬೆಳಗಾವಿ ಮಹಾನಗರ ಪಾಲಿಕೆ ಮತ್ತು ಅಂಚೆ ಇಲಾಖೆ ಒಡಂಬಡಿಕೆ ಮಾಡಿಕೊಂಡಿವೆ.
ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಹಾಗೂ ಅಂಚೆ ಇಲಾಖೆಯ ಬೆಳಗಾವಿ ವಿಭಾಗದ ಹಿರಿಯ ಅಧೀಕ್ಷಕಿ ಆರುಷಿ ಶರ್ಮಾ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು.
ಜನನ ಅಥವಾ ಮರಣ ಪ್ರಮಾಣಪತ್ರಕ್ಕಾಗಿ ಪಾಲಿಕೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಂಚೆ ಮೂಲಕ ಪ್ರಮಾಣಪತ್ರ ಪಡೆಯಲು ಇಚ್ಛಿಸುವವರು ತಮ್ಮ ವಿಳಾಸದೊಂದಿಗೆ ಒಪ್ಪಿಗೆ ಪತ್ರ ನೀಡಬೇಕು. ಬಳಿಕ ಪಾಲಿಕೆಯ ಜನನ ಮತ್ತು ಮರಣ ಪ್ರಮಾಣಪತ್ರ ವಿತರಣಾ ವಿಭಾಗವು ಪ್ರಮಾಣಪತ್ರವನ್ನು ಅಂಚೆ ಮೂಲಕ ಅರ್ಜಿದಾರರ ಮನೆಗೆ ಕಳುಹಿಸಲಿದೆ. ನಿಗದಿತ ಅಂಚೆ ಶುಲ್ಕ ಪಾವತಿಸಿ ಸಾರ್ವಜನಿಕರು ತಮ್ಮ ಮನೆ ಬಾಗಿಲಲ್ಲೇ ಪ್ರಮಾಣಪತ್ರ ಪಡೆಯಬಹುದು.
ಈ ವ್ಯವಸ್ಥೆಯಿಂದ ಸಾರ್ವಜನಿಕರ ಸಮಯ ಮತ್ತು ವೆಚ್ಚ ಉಳಿತಾಯವಾಗಲಿದ್ದು, ಪಾಲಿಕೆ ಕಚೇರಿಗೆ ಅನಗತ್ಯವಾಗಿ ಅಲೆದಾಡುವುದೂ ತಪ್ಪಲಿದೆ. ಸಾರ್ವಜನಿಕರು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಮನವಿ ಮಾಡಿದರು.
ಈ ಸಂದರ್ಭದಲ್ಲಿ ಆರುಷಿ ಶರ್ಮಾ, ಪಾಲಿಕೆಯ ಪರಿಸರ ವಿಭಾಗದ ಅಭಿಯಂತರ, ಜನನ ಮರಣ ನೋಂದಣಾಧಿಕಾರಿ ಅಶೋಕಕುಮಾರ ಸಜ್ಜನ್ ಹಾಗೂ ಅಂಚೆ ಇಲಾಖೆ ಅಧಿಕಾರಿಗಳಾದ ಮಾರುತಿ ದೊಡಮನಿ, ಅನಂತಶಯನ ಸೇರಿದಂತೆ ಇತರರು ಉಪಸ್ಥಿತರಿದ್ದರು.