LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
National News

ಕ್ರೀಡಾಪಟುಗಳ ಅಭ್ಯಾಸಕ್ಕೆ ಬ್ರೇಕ್‌, ಸಿಎಂ ಹೆಲಿಕಾಪ್ಟರ್‌ಗೆ ಮೈದಾನ!

ನಾಲ್ಕು ದಿನ ಟ್ರ್ಯಾಕ್‌ ಬಂದ್‌; ಹರಿಯಾಣ ಸರ್ಕಾರದ ವಿಐಪಿ ಸಂಸ್ಕೃತಿಗೆ ವ್ಯಾಪಕ ಟೀಕೆ

ಗುರುಗ್ರಾಮ್‌, ಅ. 8: ದೇಶಕ್ಕೆ ಪದಕ ತಂದುಕೊಡುವ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಮೈದಾನವಿಲ್ಲ. ಆದರೆ, ಮುಖ್ಯಮಂತ್ರಿಯ ಹೆಲಿಕಾಪ್ಟರ್ ನಿಲ್ಲಿಸಲು ಅದೇ ಮೈದಾನದಲ್ಲಿ ಜಾಗವಿದೆ! ಹರಿಯಾಣದ ಗುರುಗ್ರಾಮ್‌ನ ತೌ ದೇವಿ ಲಾಲ್ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರ ಅಧಿಕೃತ ಹೆಲಿಕಾಪ್ಟರ್ ನಾಲ್ಕು ದಿನಗಳ ಕಾಲ ನಿಂತಿದ್ದರಿಂದ ರಾಜ್ಯಮಟ್ಟದ ಕ್ರೀಡಾಪಟುಗಳು ತರಬೇತಿಯಿಂದ ವಂಚಿತರಾಗಿರುವುದು ವಿಐಪಿ ಸಂಸ್ಕೃತಿಯ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಸಾಧನೆಗೆ ಹರಿಯಾಣದ ಕ್ರೀಡಾಪಟುಗಳು ಮಹತ್ವದ ಕೊಡುಗೆ ನೀಡಿದ್ದಾರೆ. ಆದರೆ, ಅದೇ ರಾಜ್ಯದಲ್ಲಿ ಕ್ರೀಡಾಪಟುಗಳ ಅಭ್ಯಾಸಕ್ಕಿಂತ ರಾಜಕಾರಣಿಗಳ ಅನುಕೂಲಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ.

ಸಿಂಗಾಪುರ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ ಸೈನಿ ಅವರನ್ನು ಚಂಡೀಗಢಕ್ಕೆ ಕರೆದೊಯ್ಯಬೇಕಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದಾಗಿ ಹಾರಾಟ ನಡೆಸಲು ಸಾಧ್ಯವಾಗದೆ ಕ್ರೀಡಾಂಗಣದಲ್ಲೇ ಉಳಿದಿತ್ತು. ಬುಧವಾರ ಹೆಲಿಕಾಪ್ಟರ್ ತೆರಳಿದ ಬಳಿಕವಷ್ಟೇ ಕ್ರೀಡಾಪಟುಗಳಿಗೆ ಅಥ್ಲೆಟಿಕ್ಸ್ ಟ್ರ್ಯಾಕ್ ಮತ್ತೆ ಲಭ್ಯವಾಯಿತು ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಹೆಲಿಕಾಪ್ಟರ್ ನಿಲುಗಡೆಯಿಂದ ಕ್ರೀಡಾಂಗಣದ ಒಳಗಿನ ಸಿಂಥೆಟಿಕ್ ಮೈದಾನ ಮತ್ತು ಓಟದ ಟ್ರ್ಯಾಕ್ ಅನ್ನು ಭದ್ರತೆಯ ಕಾರಣದಿಂದ ಸಂಪೂರ್ಣ ಮುಚ್ಚಲಾಗಿತ್ತು. ಬಾಸ್ಕೆಟ್‌ಬಾಲ್ ಮತ್ತು ವಾಲಿಬಾಲ್ ಅಂಕಣಗಳ ಬಳಕೆಗೆ ಅವಕಾಶವಿದ್ದರೂ ಅಥ್ಲೆಟಿಕ್ಸ್ ಕ್ರೀಡಾಪಟುಗಳು ಅಭ್ಯಾಸ ನಡೆಸಲು ಸಾಧ್ಯವಾಗಲಿಲ್ಲ.

ಇದು ಮೊದಲ ಘಟನೆಯಲ್ಲ. ಪ್ರತಿ ತಿಂಗಳು ಒಂದೆರಡು ದಿನಗಳ ಕಾಲ ಹೆಲಿಕಾಪ್ಟರ್ ನಿಲುಗಡೆಯಿಂದ ತರಬೇತಿಗೆ ಅಡ್ಡಿಯಾಗುತ್ತಿದೆ ಎಂದು ಕ್ರೀಡಾಪಟುಗಳು ದೂರಿದ್ದಾರೆ. 2020ರ ಮಾರ್ಚ್‌ನಲ್ಲಿಯೂ ಅಂದಿನ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಹೆಲಿಕಾಪ್ಟರ್ ಇಳಿಯಬೇಕಿದ್ದ ಕಾರಣ ಅಭ್ಯಾಸದ ನಡುವೆಯೇ ಕ್ರಿಕೆಟ್ ಮೈದಾನವನ್ನು ಖಾಲಿ ಮಾಡಿಸಲಾಗಿತ್ತು.

‘ಸ್ಪರ್ಧೆಗಳಿಗೆ ಸಿದ್ಧತೆ ನಡೆಸುತ್ತಿರುವ ಕ್ರೀಡಾಪಟುಗಳಿಗೆ ಒಂದೆರಡು ದಿನಗಳ ಅಭ್ಯಾಸ ತಪ್ಪಿದರೂ ದೊಡ್ಡ ನಷ್ಟವಾಗುತ್ತದೆ. ಪ್ರತಿದಿನ ನೂರಾರು ಕ್ರೀಡಾಪಟುಗಳು ಇಲ್ಲಿಗೆ ಬರುತ್ತಾರೆ. ಅನೇಕರಿಗೆ ಇದೊಂದೇ ಲಭ್ಯವಿರುವ ಟ್ರ್ಯಾಕ್. ವಿಐಪಿಗಳ ಅನುಕೂಲಕ್ಕಾಗಿ ನಮ್ಮ ಭವಿಷ್ಯಕ್ಕೆ ಏಕೆ ಅಡ್ಡಿಪಡಿಸಬೇಕು?’ ಎಂದು ಕ್ರೀಡಾಪಟುಗಳು ಪ್ರಶ್ನಿಸಿದ್ದಾರೆ.

ನಗರದ ವಿವಿಧ ಭಾಗಗಳಿಂದ ಮಕ್ಕಳನ್ನು ತರಬೇತಿಗಾಗಿ ಕರೆತರುವ ಪೋಷಕರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೂರದಿಂದ ಕ್ರೀಡಾಂಗಣಕ್ಕೆ ಬಂದ ಬಳಿಕ ಟ್ರ್ಯಾಕ್ ಮುಚ್ಚಿರುವ ವಿಷಯ ತಿಳಿಯುವುದು ನಿರಾಶಾದಾಯಕ ಎಂದು ಪೋಷಕರೊಬ್ಬರು ಹೇಳಿದ್ದಾರೆ.

ಕೆಂಪು ಮತ್ತು ಬಿಳಿ ಬಣ್ಣದ ‘ಏರ್‌ಬಸ್ ಎಚ್‌145 ಡಿ3’ ಹೆಲಿಕಾಪ್ಟರ್ ಅಥ್ಲೆಟಿಕ್ಸ್ ಟ್ರ್ಯಾಕ್ ಪಕ್ಕದಲ್ಲಿ ನಿಂತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಸರ್ಕಾರದ ಆದ್ಯತೆಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಕ್ರೀಡಾಂಗಣವೇ ಹೆಲಿಪ್ಯಾಡ್ ಆಗಬೇಕೇ?

ಗುರುಗ್ರಾಮ್‌ನಲ್ಲಿ ಸರ್ಕಾರಿ ಹೆಲಿಪ್ಯಾಡ್ ಇಲ್ಲದಿರುವುದರಿಂದ ಕ್ರೀಡಾಂಗಣವನ್ನು ಹೆಲಿಕಾಪ್ಟರ್ ನಿಲುಗಡೆಗೆ ಬಳಸಲಾಗುತ್ತಿದೆ. ದೆಹಲಿಯಲ್ಲಿ ನಿಲುಗಡೆಗೆ ಶುಲ್ಕ ಪಾವತಿಸಬೇಕಾಗುತ್ತದೆ ಎಂಬ ಕಾರಣವನ್ನೂ ಅಧಿಕಾರಿಗಳು ನೀಡಿದ್ದಾರೆ.

ಮುಖ್ಯಮಂತ್ರಿಯವರ ಭದ್ರತೆ ಮತ್ತು ಪ್ರಯಾಣದ ಅನುಕೂಲ ಮುಖ್ಯವಾದರೂ, ಅದಕ್ಕಾಗಿ ಕ್ರೀಡಾಪಟುಗಳ ತರಬೇತಿಯನ್ನು ಪದೇಪದೇ ಸ್ಥಗಿತಗೊಳಿಸುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಎದುರಾಗಿದೆ.

ಕ್ರೀಡಾಂಗಣವು ಕ್ರೀಡಾಪಟುಗಳ ಅಭ್ಯಾಸಕ್ಕಾಗಿ ನಿರ್ಮಿಸಿರುವ ಸಾರ್ವಜನಿಕ ಸೌಲಭ್ಯವೇ ಹೊರತು ರಾಜಕಾರಣಿಗಳ ಹೆಲಿಕಾಪ್ಟರ್ ನಿಲುಗಡೆಗಾಗಿ ಅಲ್ಲ ಎಂದು ತರಬೇತುದಾರರು ಆಕ್ಷೇಪಿಸಿದ್ದಾರೆ. ನಗರದ ಖಾಲಿ ಜಾಗಗಳಲ್ಲಿ ಪರ್ಯಾಯ ಹೆಲಿಪ್ಯಾಡ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.

2022ರಲ್ಲಿಯೇ ಹರಿಯಾಣ ಸರ್ಕಾರವು ಗುರುಗ್ರಾಮ್‌ನ ಗ್ಲೋಬಲ್ ಸಿಟಿಯಲ್ಲಿ ಸಮಗ್ರ ಹೆಲಿ ಹಬ್ ನಿರ್ಮಾಣಕ್ಕಾಗಿ 25 ಎಕರೆ ಭೂಮಿಯನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿತ್ತು. ಹೆಲಿಪೋರ್ಟ್, ಹ್ಯಾಂಗರ್, ದುರಸ್ತಿ ಕೇಂದ್ರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಹೊಂದುವ ಯೋಜನೆ ಇದಾಗಿತ್ತು. ಆದರೆ, ನಾಲ್ಕು ವರ್ಷ ಕಳೆದರೂ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ಎಚ್‌ಎಸ್‌ಐಐಡಿಸಿ ಭೂಮಿ ಹಸ್ತಾಂತರ ಪ್ರಕ್ರಿಯೆ ಆರಂಭಿಸಿದೆ ಎನ್ನಲಾಗಿದೆ.

ಮಿನಿ ಸೆಕ್ರೆಟರಿಯೇಟ್ ಮತ್ತು ಪಿಡಬ್ಲ್ಯೂಡಿ ಅತಿಥಿ ಗೃಹಕ್ಕೆ ಸಮೀಪವಿರುವುದರಿಂದ ಈ ಕ್ರೀಡಾಂಗಣವನ್ನು ಹೆಲಿಕಾಪ್ಟರ್ ನಿಲುಗಡೆಗೆ ಅನುಕೂಲಕರ ಸ್ಥಳವೆಂದು ಪರಿಗಣಿಸಲಾಗಿದೆ. ಆದರೆ, ಆಡಳಿತದ ಅನುಕೂಲಕ್ಕಾಗಿ ಕ್ರೀಡಾಪಟುಗಳ ಹಿತಾಸಕ್ತಿಯನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ತಾಂತ್ರಿಕ ದೋಷವೇ ಕಾರಣ: ಸರ್ಕಾರದ ಸ್ಪಷ್ಟನೆ

ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ರಾಜೀವ್ ಜೈಟ್ಲಿ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದು, ಹೆಲಿಕಾಪ್ಟರ್ ಅನ್ನು ಉದ್ದೇಶಪೂರ್ವಕವಾಗಿ ನಾಲ್ಕು ದಿನ ನಿಲ್ಲಿಸಿರಲಿಲ್ಲ. ತಾಂತ್ರಿಕ ದೋಷದಿಂದಾಗಿ ಹಾರಾಟ ನಡೆಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

‘ಸಾಮಾನ್ಯವಾಗಿ ಹೆಲಿಕಾಪ್ಟರ್ ಕ್ರೀಡಾಂಗಣದಲ್ಲಿ ಇಳಿದ ಅರ್ಧ ಗಂಟೆಯೊಳಗೆ ಹೊರಡುತ್ತದೆ. ಈ ಬಾರಿ ತಾಂತ್ರಿಕ ಸಮಸ್ಯೆಯಿಂದ ನಾಲ್ಕು ದಿನ ಉಳಿಯಬೇಕಾಯಿತು’ ಎಂದು ಅವರು ಹೇಳಿದ್ದಾರೆ.

ಅಕ್ಟೋಬರ್ 4ರಿಂದ 6ರವರೆಗೆ ಮುಖ್ಯಮಂತ್ರಿ ಸೈನಿ ಕೈಗೊಂಡಿದ್ದ ಸಿಂಗಾಪುರ ಪ್ರವಾಸದಲ್ಲಿ ಆರೋಗ್ಯ, ಜಲ ಮೂಲಸೌಕರ್ಯ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಿಗೆ ಸುಮಾರು ₹5,500 ಕೋಟಿ ಹೂಡಿಕೆ ಪ್ರಸ್ತಾವನೆಗಳು ಬಂದಿವೆ ಎಂದು ಸರ್ಕಾರ ತಿಳಿಸಿದೆ.

ಆದರೆ, ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಆಕರ್ಷಿಸುವುದಾಗಿ ಹೇಳಿಕೊಳ್ಳುವ ಸರ್ಕಾರಕ್ಕೆ ಕ್ರೀಡಾಪಟುಗಳ ಅಭ್ಯಾಸಕ್ಕೆ ಅಡ್ಡಿಯಾಗದಂತೆ ಪ್ರತ್ಯೇಕ ಹೆಲಿಪ್ಯಾಡ್ ನಿರ್ಮಿಸಲು ಸಾಧ್ಯವಾಗಿಲ್ಲವೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದಾಗ ಕ್ರೀಡಾಪಟುಗಳನ್ನು ಸನ್ಮಾನಿಸುವುದು, ಬಹುಮಾನ ಘೋಷಿಸುವುದು ಮಾತ್ರ ಕ್ರೀಡಾಭಿವೃದ್ಧಿಯಲ್ಲ. ಅವರು ಪ್ರತಿದಿನ ಅಭ್ಯಾಸ ನಡೆಸಲು ಅಗತ್ಯವಾದ ಸೌಲಭ್ಯಗಳನ್ನು ನಿರಂತರವಾಗಿ ಒದಗಿಸುವುದೂ ಸರ್ಕಾರದ ಜವಾಬ್ದಾರಿ. ಕ್ರೀಡಾಪಟುಗಳ ತರಬೇತಿಗಿಂತ ವಿಐಪಿ ಅನುಕೂಲಕ್ಕೆ ಆದ್ಯತೆ ನೀಡುವ ಪ್ರವೃತ್ತಿ ಬದಲಾಗಬೇಕೆಂಬ ಆಗ್ರಹ ಈ ಘಟನೆಯಿಂದ ಮತ್ತಷ್ಟು ಬಲಗೊಂಡಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯೋತ್ಸವಕ್ಕೆ ಮೇಯರ್, ಉಪಮೇಯರ್ ಆಹ್ವಾನಿಸದಂತೆ ಆಗ್ರಹಮತದಾರರು ಸತ್ತಿದ್ದಾರೆಂದು ಶಾಸಕರ ಲೆಟರ್‌ಹೆಡ್‌ನಲ್ಲಿ ಅರ್ಜಿ: ಯತ್ನಾಳ ಸೇರಿ ಮೂವರ ವಿರುದ್ಧ ಎಫ್‌ಐಆರ್ಸೆನ್ಸೆಕ್ಸ್ 1,045 ಅಂಕ, ನಿಫ್ಟಿ 371 ಅಂಕ ಕುಸಿತ; ಒಂದೇ ದಿನ ₹10 ಲಕ್ಷ ಕೋಟಿ ನಷ್ಟ!ಮತದಾನದ ಹಕ್ಕು ಉಳಿದರೆ ಮಾತ್ರ ದೇಶ ಉಳಿಯುತ್ತದೆ: ಅಭಿಜೀತ ದೀಪ್ಕೆಮತಗಳ ಕಳ್ಳತನಕ್ಕೆ ಮೂರು ಸಾಕ್ಷ್ಯಗಳಿವೆ, ಮೋದಿ, ಶಾ ಉತ್ತರಿಸಲಿ: ಧ್ರುವ ರಾಠಿಗ್ಯಾನೇಶ ಕುಮಾರ ಹೋದರೆ ಮತ್ತೊಬ್ಬ ಅಜ್ಞಾನೇಶ ಬರುತ್ತಾನೆ, ಎಸ್‌ಐಆರ್‌ ರದ್ದಾಗಲಿ: ಪ್ರಕಾಶ ರಾಜ್ಮೈಸೂರು ದಸರಾ ಮಾದರಿಯಲ್ಲಿ ಅತ್ಯಂತ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವಜೇನುನೊಣಗಳ ದಾಳಿಗೆ ಬೆಳಗುಂದಿ ರೈತ ಬಲಿಧಾರವಾಡ ಕರಿಯಮ್ಮ ದೇವಸ್ಥಾನದಲ್ಲಿ ಅ. ೧೧ರಿಂದ ನವರಾತ್ರಿ ಉತ್ಸವಸುಳ್ಳು ಆರೋಪಗಳ ವಿರುದ್ಧ ಕಾನೂನು ಸಮರ: ಸತೀಶ ಜಾರಕಿಹೊಳಿ