ಬೆಂಗಳೂರು, ಜು. 14:
"ಬಿಜೆಪಿ ಹಾಗೂ ಸಂಘಪರಿವಾರದ ಸ್ವಾರ್ಥ ಸಾಧನೆಗಾಗಿ ಬಡವರ ಮನೆಯ ಮಕ್ಕಳ ಜೀವಗಳಷ್ಟೇ ಅಲ್ಲ, ಅವರ ಬದುಕುಗಳನ್ನೂ ಬಲಿಕೊಡಲಾಗಿದೆ" ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಈ ಕುರಿತು ಮಂಗಳವಾರ ಎಕ್ಸ್‌ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ಧರ್ಮ ರಕ್ಷಣೆಯ ಹೆಸರಿನಲ್ಲಿ ಯುವಕರನ್ನು ಪ್ರಚೋದಿಸಿ ಅವರ ಭವಿಷ್ಯವನ್ನು ಹಾಳು ಮಾಡಲಾಗಿದೆ ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
"ಧರ್ಮ ರಕ್ಷಣೆಯ ಹೆಸರಲ್ಲಿ ಪ್ರಾಣ ಕಳೆದುಕೊಂಡವರದ್ದು ಒಂದು ಕತೆಯಾದರೆ, ಬದುಕುಳಿದಿರುವ ಪ್ರತಿಯೊಬ್ಬರ ಬದುಕಿನ ಹಿಂದೆಯೂ ಕರುಣಾಜನಕ ಕಥೆಗಳಿವೆ. ವೇದಿಕೆ ಮೇಲೆ ಪ್ರಚೋದನಕಾರಿ ಭಾಷಣ ಮಾಡಿದವರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಆದರೆ ವೇದಿಕೆ ಕೆಳಗೆ ನಿಂತು ಶಿಳ್ಳೆ, ಚಪ್ಪಾಳೆ ಹಾಕಿ ಪ್ರಚೋದನೆಗೆ ಒಳಗಾದ ಬಡ ಕುಟುಂಬಗಳ ಯುವಕರು ಮಾತ್ರ ಸಂಕಷ್ಟದ ಬದುಕು ನಡೆಸುತ್ತಿದ್ದಾರೆ" ಎಂದು ಅವರು ಆರೋಪಿಸಿದ್ದಾರೆ.
ಬಡ ಹಾಗೂ ತಳ ಸಮುದಾಯಗಳ ಯುವಕರು ತಮ್ಮ ಜೀವನ ರೂಪಿಸಿಕೊಳ್ಳಬೇಕಾದ ವಯಸ್ಸಿನಲ್ಲಿ ಅವರನ್ನು ಪ್ರಚೋದನಕಾರಿ ಭಾಷಣಗಳ ಮೂಲಕ ದಿಕ್ಕು ತಪ್ಪಿಸಲಾಗಿದೆ. ತ್ರಿಶೂಲ ದೀಕ್ಷೆ ನೀಡಿ ಬೀದಿಗಿಳಿಸಿ ಅವರ ಬದುಕಿನೊಂದಿಗೆ ಚೆಲ್ಲಾಟವಾಡಲಾಗಿದೆ. ಈ ರೀತಿಯ ಪ್ರಚೋದನಕಾರಿ ಭಾಷಣ ಮಾಡಿದವರು ಒಂದು ದಿನವೂ ಆ ಯುವಕರ ಬದುಕಿನ ಬಗ್ಗೆ ಕನಿಕರ ವ್ಯಕ್ತಪಡಿಸಿಲ್ಲ, ಯಾವುದೇ ರೀತಿಯ ನೆರವನ್ನೂ ನೀಡಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
"ವೇದಿಕೆ ಮೇಲೆ ಪ್ರಚೋದನಕಾರಿ ಭಾಷಣ ಮಾಡಿದವರು ಒಂದು ದಿನವೂ ಬಂಧನಕ್ಕೊಳಗಾಗಿಲ್ಲ. ಅವರ ಮನೆಯ ಮಕ್ಕಳು ಧರ್ಮ ರಕ್ಷಣೆಯ ಹೆಸರಿನಲ್ಲಿ ಬೀದಿಗಿಳಿದಿಲ್ಲ. ಆದರೆ ಬಡವರ ಮಕ್ಕಳು ಪ್ರಕರಣಗಳನ್ನು ಎದುರಿಸಿ ನ್ಯಾಯಾಲಯಗಳಿಗೆ ಅಲೆಯುವ ಪರಿಸ್ಥಿತಿ ಎದುರಿಸಿದ್ದಾರೆ. ಅವರಿಗೆ ಕಾನೂನು ನೆರವೂ ಸಿಕ್ಕಿಲ್ಲ, ಆರ್ಥಿಕ ನೆರವೂ ದೊರೆತಿಲ್ಲ" ಎಂದು ಅವರು ಆರೋಪಿಸಿದ್ದಾರೆ.
"ಬಿಜೆಪಿ ಮತ್ತು ಆರ್‌ಎಸ್‌ಎಸ್ ನೀಡಿದ ಧರ್ಮ ರಕ್ಷಣೆಯ ಅಮಲಿಗೆ ಒಳಗಾದವರು ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ತಮ್ಮ ಬದುಕನ್ನು ಕಳೆದುಕೊಂಡಿದ್ದಕ್ಕೆ ಮರುಗುತ್ತಿದ್ದಾರೆ. ಪ್ರಾಣ ಕಳೆದುಕೊಂಡವರ ಕುಟುಂಬಗಳೂ ತಮ್ಮ ಮಕ್ಕಳನ್ನು ಕಳೆದುಕೊಂಡ ದುಃಖದಲ್ಲೇ ಬದುಕುತ್ತಿವೆ" ಎಂದು ಅವರು ತಿಳಿಸಿದ್ದಾರೆ.
"ಈ ಎಲ್ಲರ ನೋವಿನ ಅನುಭವಗಳು ಇಂದಿನ ತಳ ಸಮುದಾಯಗಳ ಯುವಜನತೆಗೆ ಎಚ್ಚರಿಕೆಯ ಸಂದೇಶವಾಗಬೇಕು. ತಮ್ಮ ಬದುಕಿನ ದಾರಿಯನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳಲು ಈ ಘಟನೆಗಳು ಪಾಠವಾಗಲಿ" ಎಂದು ಪ್ರಿಯಾಂಕ್ ಖರ್ಗೆ ತಮ್ಮ ಪೋಸ್ಟ್‌ನಲ್ಲಿ ಆಶಿಸಿದ್ದಾರೆ.