LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Crime News

ಡಿಟರ್ಜೆಂಟ್ ಸೇರಿಸಿ ಕೃತಕ ರಾಸಾಯನಿಕಯುಕ್ತ ಹಾಲು ತಯಾರಿಸುವ ರಾಕ್ಷಸರ ಜಾಲ ಪತ್ತೆ!

ಮುಂಬೈ, ಜು. 14: ಶುದ್ಧ ಹಾಲಿಗೆ ಡಿಟರ್ಜೆಂಟ್ ಪೌಡರ್, ಪಾಮ್ ಆಯಿಲ್ ಹಾಗೂ ಕಳಪೆ ಗುಣಮಟ್ಟದ ರಾಸಾಯನಿಕ ಪುಡಿಯನ್ನು ಸೇರಿಸಿ ಕೃತಕ ಹಾಲು ತಯಾರಿಸಿ ಮಾರಾಟ ಮಾಡುತ್ತಿದ್ದ ರಾಕ್ಷಸರ ಬೃಹತ್ ಜಾಲವೊಂದು ಮಹಾರಾಷ್ಟ್ರದ ಧಾರಾಶಿವ ಜಿಲ್ಲೆಯ ಭೂಮ್ ತಾಲೂಕಿನಲ್ಲಿ ಬಯಲಾಗಿದೆ. ಪೊಲೀಸ್ ಹಾಗೂ ಆಹಾರ ಮತ್ತು ಔಷಧ ಆಡಳಿತ ಇಲಾಖೆ (ಎಫ್‌ಡಿಎ) ನಡೆಸಿದ ಜಂಟಿ ತನಿಖೆಯಲ್ಲಿ ಈ ಅಕ್ರಮ ಬೆಳಕಿಗೆ ಬಂದಿದ್ದು, ಕಳೆದ ಆರು ತಿಂಗಳಲ್ಲಿ ಸುಮಾರು 23 ಲಕ್ಷ ಲೀಟರ್‌ಗೂ ಅಧಿಕ ಕೃತಕ ಹಾಲು ತಯಾರಿಸಿ ವಿವಿಧ ಭಾಗಗಳಿಗೆ ಸರಬರಾಜು ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ವಿರುದ್ಧ ವಿವಿಧ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದರೂ, ಎಂಟು ದಿನಗಳು ಕಳೆದರೂ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕಾಗಿ ವಿಶೇಷ ತನಿಖಾ ತಂಡ ರಚಿಸಲಾಗಿದ್ದು, ವಿವಿಧ ಕಡೆಗಳಲ್ಲಿ ಶೋಧ ಕಾರ್ಯ ಮುಂದುವರಿದಿದೆ.

2.3 ಕೋಟಿಗೂ ಅಧಿಕ ಲೀಟರ್ ಕಲಬೆರಕೆ ಹಾಲು

ದಾಳಿಯ ವೇಳೆ ವಶಪಡಿಸಿಕೊಂಡ ಮಾರಾಟದ ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳು, ಕಳೆದ ಆರು ತಿಂಗಳಲ್ಲಿ ಸುಮಾರು 2,30,470 ಕಿಲೋಗ್ರಾಂ ಕಳಪೆ ಗುಣಮಟ್ಟದ ಹಾಲಿನ ಪುಡಿ ಬಳಸಿರುವುದು ಪತ್ತೆಯಾಗಿದೆ. ಈ ಪ್ರಮಾಣದ ಹಾಲಿನ ಪುಡಿಯಿಂದ ಸುಮಾರು 23,04,070 ಲೀಟರ್ ಕೃತಕ ಹಾಲು ತಯಾರಿಸಲಾಗಿದ್ದು, ಅದರ ಅಂದಾಜು ಮೌಲ್ಯ ₹9.21 ಕೋಟಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಪ್ರತಿ 100 ಲೀಟರ್ ಶುದ್ಧ ಹಾಲಿಗೆ 10 ಲೀಟರ್ ಕೃತಕ ಹಾಲು ಮಿಶ್ರಣ ಮಾಡುತ್ತಿದ್ದರು. ಅಂದರೆ ಒಟ್ಟು ಹಾಲಿನಲ್ಲಿ ಶೇಕಡಾ 10ರಷ್ಟು ಕಲಬೆರಕೆ ಮಾಡಲಾಗುತ್ತಿತ್ತು. ಇದೇ ಪ್ರಮಾಣವನ್ನು ಆಧಾರವಾಗಿ ತೆಗೆದುಕೊಂಡು ನೋಡಿದರೆ, ಭೂಮ್ ಪ್ರದೇಶದ ಹಾಲು ಸಂಗ್ರಹಣಾ ಕೇಂದ್ರಗಳಿಂದ ಮಹಾರಾಷ್ಟ್ರದ ವಿವಿಧ ಭಾಗಗಳಿಗೆ ಸುಮಾರು 2.3 ಕೋಟಿಗೂ ಅಧಿಕ ಲೀಟರ್ ಕಲಬೆರಕೆ ಹಾಲು ಪೂರೈಕೆಯಾಗಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಕೃತಕ ಹಾಲು ಅಸಲಿ ಹಾಲಿನಂತೆ ಕಾಣಲು ಹಾಗೂ ಕೊಬ್ಬಿನಾಂಶದ ಮಟ್ಟವನ್ನು ಕಾಯ್ದುಕೊಳ್ಳಲು ಆರೋಪಿಗಳು ಡಿಟರ್ಜೆಂಟ್ ಪೌಡರ್, ಪಾಮ್ ಆಯಿಲ್ ಹಾಗೂ ಅತ್ಯಂತ ಕಳಪೆ ಗುಣಮಟ್ಟದ ರಾಸಾಯನಿಕ ಪುಡಿಯನ್ನು ಬಳಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ದಾಳಿಯ ವೇಳೆ 61 ಚೀಲ ಕಲಬೆರಕೆ ಹಾಲಿನ ಪುಡಿ ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಬಾಲಾಸಾಹೇಬ್ ಗೋಡ್ಗೆ ಎಂಬಾತ ಭೂಮ್ ಪ್ರದೇಶದ ಹಲವು ಡೈರಿ ಘಟಕಗಳಿಗೆ ಈ ಪುಡಿಯನ್ನು ಪೂರೈಸುತ್ತಿದ್ದ ಎಂಬುದು ಗೊತ್ತಾಗಿದೆ. ಈ ಅಕ್ರಮದಲ್ಲಿ ಹಲವು ಹಾಲು ಸಂಗ್ರಹಣಾ ಕೇಂದ್ರಗಳೂ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಕೃತಕ ಹಾಲು ಖರೀದಿಸಿ ವಿತರಿಸಿದವರನ್ನು ಗುರುತಿಸುವ ಕಾರ್ಯ ಮುಂದುವರಿದಿದೆ. ದನಗಳ ಮೇವು ಮಾರಾಟ ಮಾಡುವ ನೆಪದಲ್ಲಿ ಈ ದಂಧೆ ನಡೆಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಭೂಮ್ ತಾಲೂಕು ಪ್ರತಿದಿನ ಲಕ್ಷಾಂತರ ಲೀಟರ್ ಹಾಲನ್ನು ಹೊರರಾಜ್ಯಗಳಿಗೆ ಹಾಗೂ ವಿವಿಧ ಪ್ರದೇಶಗಳಿಗೆ ಪೂರೈಸುವ ಪ್ರಮುಖ ಕೇಂದ್ರವಾಗಿದ್ದು, ಸುಮಾರು 70ರಿಂದ 80 ಟನ್ ಖೋವಾ ಉತ್ಪಾದನೆಯೂ ಇಲ್ಲಿ ನಡೆಯುತ್ತದೆ. ಹೀಗಾಗಿ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ.

ಆರೋಗ್ಯಕ್ಕೆ ಗಂಭೀರ ಅಪಾಯ

ಡಿಟರ್ಜೆಂಟ್, ಪಾಮ್ ಆಯಿಲ್ ಹಾಗೂ ರಾಸಾಯನಿಕ ಮಿಶ್ರಿತ ಹಾಲನ್ನು ನಿರಂತರವಾಗಿ ಸೇವಿಸುವುದರಿಂದ ಯಕೃತ್, ಮೂತ್ರಪಿಂಡ ಮತ್ತು ಜೀರ್ಣಾಂಗ ವ್ಯವಸ್ಥೆಗೆ ತೀವ್ರ ಹಾನಿಯಾಗಬಹುದು ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ. ವಿಶೇಷವಾಗಿ ಮಕ್ಕಳು, ಗರ್ಭಿಣಿಯರು ಹಾಗೂ ವೃದ್ಧರ ಆರೋಗ್ಯಕ್ಕೆ ಇದು ಜೀವಕ್ಕೆ ಅಪಾಯ ಉಂಟುಮಾಡುವ ಸಾಧ್ಯತೆಯಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಇಂತಹ ಕಲಬೆರಕೆ ಅಪರಾಧಗಳಿಗೆ ₹10 ಲಕ್ಷದವರೆಗೆ ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸುವ ಅವಕಾಶವಿದೆ. ಹೀಗಾಗಿ ಜಾಲದ ಹಿಂದೆ ಇರುವ ಎಲ್ಲ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವ ಕಾರ್ಯವನ್ನು ತನಿಖಾ ಸಂಸ್ಥೆಗಳು ತೀವ್ರಗೊಳಿಸಿವೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಮಿತ ಶಾ ಭೇಟಿ : ಬೆಳಗಾವಿ ವಿಮಾನ ನಿಲ್ದಾಣದ ಸುತ್ತ 2 ಕಿ.ಮೀ. ‘ರೆಡ್ ಝೋನ್–ನೋ ಫ್ಲೈ ಝೋನ್’ಗಣೇಶ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲುತೂರಾಟ ಆರೋಪಯುಪಿಐ ಶುಲ್ಕಕ್ಕೆ ಅಖಿಲೇಶ ಯಾದವ ಆಕ್ರೋಶದೇಶದ ಇಂಧನ ಭದ್ರತೆ ಕಾಪಾಡಲು ಬದ್ಧಈಶ್ವರಪ್ಪ, ಯತ್ನಾಳ ಅವರನ್ನು ಬಿಜೆಪಿಗೆ ಮರಳಿ ಕರೆತರಬೇಕು: ನಿರಾಣಿ₹50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರಜಾಗತಿಕ ಚಿಪ್ ಉತ್ಪಾದನೆಯ ವಿಶ್ವಾಸಾರ್ಹ ಕೇಂದ್ರವಾಗುತ್ತಿದೆ ಭಾರತ: ಮೋದಿಬರಪೀಡಿತ ಪಟ್ಟಿಗೆ ಮತ್ತೂ 23 ತಾಲೂಕು; ಒಟ್ಟು 124ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರುಗನ್ ತೋರಿಸಿ ಬೆದರಿಸಿ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಮಾಜಿ ಶಾಸಕ ಸೇರಿ ಇಬ್ಬರ ವಿರುದ್ಧ ಪ್ರಕರಣ