LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ನಕಲಿ ಔಷಧ ದಂಧೆ ಬಯಲು; ಐದು ಕೋಟಿ ರೂ. ಮೌಲ್ಯದ ವಸ್ತುಗಳು ವಶ

ಬೆಂಗಳೂರು, ಆಗಸ್ಟ  ೧೯: ಕ್ಯಾನ್ಸರ್‌ ಚಿಕಿತ್ಸೆಗೆ ಬಳಸುವ ದುಬಾರಿ ಔಷಧಗಳನ್ನು ನಕಲಿ ಲೇಬಲ್‌ ಅಂಟಿಸಿ ಮರುಪ್ಯಾಕಿಂಗ್‌ ಮಾಡಿ ಕೋಟ್ಯಂತರ ರೂಪಾಯಿ ವಂಚನೆ ಮಾಡುತ್ತಿದ್ದ ಜಾಲವನ್ನು ತಾವರೆಕೆರೆ ಪೊಲೀಸರು ಹಾಗೂ ಔಷಧ ಆಡಳಿತ ವಿಭಾಗದ ಅಧಿಕಾರಿಗಳು ಜಂಟಿ ಕಾರ್ಯಾಚರಣೆಯಲ್ಲಿ ಬಯಲಿಗೆಳೆದಿದ್ದಾರೆ.

ಬೆಂಗಳೂರು ದಕ್ಷಿಣ ತಾಲೂಕಿನ ಸಿ.ಕೆ.ತಾಂಡ್ಯ ಸಮೀಪದ ಫಾರ್ಮ್‌ಹೌಸ್‌ವೊಂದರಲ್ಲಿ ಯಾವುದೇ ಪರವಾನಗಿ ಇಲ್ಲದೆ ನಡೆಯುತ್ತಿದ್ದ ನಕಲಿ ಔಷಧ ಮರುಪ್ಯಾಕಿಂಗ್‌ ಅಡ್ಡೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಸುಮಾರು ಐದು ಕೋಟಿ ರೂ. ಮೌಲ್ಯದ ಔಷಧಗಳು, ಪ್ಯಾಕಿಂಗ್‌ ಸಾಮಗ್ರಿಗಳು ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಕಡಿಮೆ ಬೆಲೆಯ ಔಷಧಕ್ಕೆ ದುಬಾರಿ ಕಂಪನಿಗಳ ಲೇಬಲ್‌

ಪ್ರಕರಣದ ಪ್ರಮುಖ ಆರೋಪಿ ಬೆಂಗಳೂರು ಮೂಲದ ಚೇತನ್‌ ಎಂದು ಗುರುತಿಸಲಾಗಿದೆ. ಸಿ.ಕೆ.ತಾಂಡ್ಯ ಸಮೀಪದ ಪ್ರಶಾಂತ ಎಂಬುವರಿಗೆ ಸೇರಿದ ಫಾರ್ಮ್‌ಹೌಸ್‌ ಅನ್ನು ಚೇತನ್‌ ಬಾಡಿಗೆಗೆ ಪಡೆದುಕೊಂಡಿದ್ದ ಎನ್ನಲಾಗಿದೆ. ಇಲ್ಲಿ ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಿಂದ ಕಡಿಮೆ ಬೆಲೆಯ ಔಷಧಗಳನ್ನು ತರಿಸಿಕೊಂಡು, ಪ್ರತಿಷ್ಠಿತ ಬಹುರಾಷ್ಟ್ರೀಯ ಔಷಧ ಕಂಪನಿಗಳ ಹೆಸರಿನ ಲೇಬಲ್‌ಗಳನ್ನು ಅಂಟಿಸಿ ಮರುಪ್ಯಾಕಿಂಗ್‌ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು ಆರು ನೂರು ರೂ. ಮೌಲ್ಯದ ಔಷಧವನ್ನು ಮರುಪ್ಯಾಕಿಂಗ್‌ ಮಾಡಿ, ಅದರ ಮೇಲೆ ಆರು ಸಾವಿರ ರೂ. ಮೌಲ್ಯದ ಔಷಧ ಎಂಬಂತೆ ಲೇಬಲ್‌ ಅಂಟಿಸಿ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ವಶಪಡಿಸಿಕೊಂಡ ಔಷಧಗಳಲ್ಲಿ ವಿವಿಧ ಬಗೆಯ ಔಷಧಗಳಿದ್ದರೂ, ಕ್ಯಾನ್ಸರ್‌ ಚಿಕಿತ್ಸೆಗೆ ಬಳಸುವ ಔಷಧಗಳೇ ಹೆಚ್ಚಿನ ಪ್ರಮಾಣದಲ್ಲಿದ್ದವು ಎಂದು ತಿಳಿದುಬಂದಿದೆ.

ಮೂವತ್ತಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ

ಫಾರ್ಮ್‌ಹೌಸ್‌ನಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿರುವುದನ್ನು ಸ್ಥಳೀಯ ಬೀಟ್‌ ಪೊಲೀಸರು ಗಮನಿಸಿದ್ದರು. ಈ ಕುರಿತು ಆರೋಗ್ಯ ಇಲಾಖೆ ಆಯುಕ್ತ ಶ್ರೀನಿವಾಸ್ ಹಾಗೂ ರಾಮನಗರ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಿವಾಸ್‌ ಗೌಡ ಅವರಿಗೆ ಮಾಹಿತಿ ನೀಡಲಾಗಿತ್ತು.

ಮಾಹಿತಿ ಆಧರಿಸಿ ಸುಮಾರು ಮೂವತ್ತು ಅಧಿಕಾರಿಗಳನ್ನು ಒಳಗೊಂಡ ತಂಡ ಫಾರ್ಮ್‌ಹೌಸ್‌ ಮೇಲೆ ದಾಳಿ ನಡೆಸಿದೆ. ಪರಿಶೀಲನೆ ವೇಳೆ ನಕಲಿ ಔಷಧ ಮರುಪ್ಯಾಕಿಂಗ್‌ಗೆ ಬಳಸುತ್ತಿದ್ದ ಸಾಮಗ್ರಿಗಳು ಹಾಗೂ ವಿವಿಧ ಔಷಧಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ.

ಒಬ್ಬ ಆರೋಪಿ ಬಂಧನ

ನಕಲಿ ಔಷಧ ಮರುಪ್ಯಾಕಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಚೇತನ್‌ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಈ ಜಾಲದ ಮೂಲಕ ನಕಲಿ ಔಷಧಗಳನ್ನು ಎಲ್ಲೆಲ್ಲಿ ಪೂರೈಕೆ ಮಾಡಲಾಗುತ್ತಿತ್ತು, ಯಾವ ಆಸ್ಪತ್ರೆಗಳು, ಔಷಧ ಅಂಗಡಿಗಳು ಅಥವಾ ಇತರ ಮಾರಾಟ ಜಾಲಗಳಿಗೆ ಔಷಧಗಳು ತಲುಪಿವೆ ಹಾಗೂ ಪ್ರಕರಣದಲ್ಲಿ ಇನ್ನೂ ಎಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

ಸಾರ್ವಜನಿಕರ ದೂರುಗಳಿಗೆ ಕ್ಯೂಆರ್‌ ಸಂಕೇತ ವ್ಯವಸ್ಥೆ

ಆರೋಗ್ಯ ಇಲಾಖೆ ವತಿಯಿಂದ ಆಸ್ಪತ್ರೆಗಳು, ಔಷಧ ಅಂಗಡಿಗಳು, ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳಲ್ಲಿ ಕಂಡುಬರುವ ಸಮಸ್ಯೆಗಳ ಕುರಿತು ಸಾರ್ವಜನಿಕರು ನೇರವಾಗಿ ದೂರು ದಾಖಲಿಸಲು ಕ್ಯೂಆರ್‌ ಸಂಕೇತ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.

ಕ್ಯೂಆರ್‌ ಸಂಕೇತವನ್ನು ಸ್ಕ್ಯಾನ್‌ ಮಾಡುವ ಮೂಲಕ ಸಾರ್ವಜನಿಕರು ಆಹಾರದ ಗುಣಮಟ್ಟ, ವೈದ್ಯಕೀಯ ಸೇವೆ, ಔಷಧ ಅಂಗಡಿಗಳಲ್ಲಿನ ಅಕ್ರಮಗಳು ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸಬಹುದಾಗಿದೆ. ವ್ಯವಸ್ಥೆ ಆರಂಭವಾದ ಮೊದಲ ೨೪ ಗಂಟೆಗಳಲ್ಲೇ ೫೦೪ ದೂರುಗಳು ದಾಖಲಾಗಿದ್ದವು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST