ಹೊಸದಿಲ್ಲಿ, ಅ. 9: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ ಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಅಕ್ಟೋಬರ್ 10ರಂದು ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಾದ್ಯಂತ ವ್ಯಾಪಕ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಮೆಟ್ರೊ, ರೈಲು, ರಸ್ತೆ ಸಂಚಾರ, ಹೋಟೆಲ್ ಬುಕ್ಕಿಂಗ್ ಸೇರಿದಂತೆ ಹಲವು ಚಟುವಟಿಕೆಗಳ ಮೇಲೆ ನಿರ್ಬಂಧ ವಿಧಿಸಲು ಕ್ರಮ ಕೈಗೊಳ್ಳಲಾಗಿದೆ.
ಅಕ್ಟೋಬರ್ 9ರ ರಾತ್ರಿ 9 ಗಂಟೆಯಿಂದ ಪರಿಸ್ಥಿತಿ ಸಹಜವಾಗುವವರೆಗೆ 57 ಮೆಟ್ರೊ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚುವಂತೆ ದೆಹಲಿ ಪೊಲೀಸರು ಸೂಚಿಸಿದ್ದರು. ರಾಜೀವ್ ಚೌಕ್, ಸೆಂಟ್ರಲ್ ಸೆಕ್ರೆಟರಿಯಟ್, ನವದೆಹಲಿ, ಕಾಶ್ಮೀರ್ ಗೇಟ್, ಮಂಡಿ ಹೌಸ್, ಐಟಿಒ, ಪಟೇಲ್ ಚೌಕ್, ಸುಪ್ರೀಂ ಕೋರ್ಟ, ಹೌಜ್ ಖಾಸ್, ಲಜಪತ್ ನಗರ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ಹಾಗೂ ಸರಾಯ್ ಕಾಲೇ ಖಾನ್–ನಿಜಾಮುದ್ದೀನ್ ನಿಲ್ದಾಣಗಳು ಪಟ್ಟಿಯಲ್ಲಿದ್ದವು. ಆದರೆ, ಸುಪ್ರೀಂ ಕೋರ್ಟ ಮಧ್ಯಪ್ರವೇಶಿಸಿ ನಿರ್ಬಂಧಗಳನ್ನು ಮರುಪರಿಶೀಲಿಸುವಂತೆ ಸೂಚಿಸಿದೆ.
ಅಕ್ಟೋಬರ್ 10ರಂದು ಬೆಳಿಗ್ಗೆ 4ರಿಂದ ಮಧ್ಯಾಹ್ನ 2ರವರೆಗೆ ನವದೆಹಲಿ ಮತ್ತು ಹಜರತ್ ನಿಜಾಮುದ್ದೀನ್ ನಿಲ್ದಾಣಗಳಿಗೆ ಆಗಮಿಸಬೇಕಿದ್ದ ಕೆಲವು ಮೇಲ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ. ನಿಲ್ದಾಣಗಳ ಸುತ್ತ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯನ್ನು ರೈಲ್ವೆ ಕಾರಣವಾಗಿ ನೀಡಿದೆ.
ಲ್ಯೂಟಿಯನ್ಸ್ ದೆಹಲಿ ಸೇರಿದಂತೆ ಸೂಕ್ಷ್ಮ ಪ್ರದೇಶಗಳಿಗೆ ವಾಹನಗಳ ಪ್ರವೇಶ ನಿಯಂತ್ರಿಸಲು ಓಲಾ, ಉಬರ್‌ನಂತಹ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳೊಂದಿಗೆ ಪೊಲೀಸರು ಸಮನ್ವಯ ನಡೆಸಿದ್ದಾರೆ. ಪಹಾಡ್‌ಗಂಜ್ ಸೇರಿದಂತೆ ಮಧ್ಯ ದೆಹಲಿಯ ಕೆಲವು ಪ್ರದೇಶಗಳಲ್ಲಿ ಹೋಟೆಲ್ ಹಾಗೂ ಅತಿಥಿಗೃಹಗಳಿಗೆ ಹೊಸ ಬುಕ್ಕಿಂಗ್‌ಗಳನ್ನು ನಿರ್ಬಂಧಿಸಲು ಸೂಚಿಸಲಾಗಿದೆ ಎಂದು ವರದಿಯಾಗಿದೆ.
37 ತಪಾಸಣೆ ಕೇಂದ್ರ, 15 ಬಂಧನ ಕೇಂದ್ರ: ನವದೆಹಲಿ ಜಿಲ್ಲೆಯಲ್ಲಿ 37 ತಪಾಸಣೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ವಿವಿಧ ಜಿಲ್ಲೆಗಳಲ್ಲಿ 15 ಬಂಧನ ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ. ಪ್ರಮುಖ ಪ್ರವೇಶ ಮಾರ್ಗಗಳಲ್ಲಿ ವಾಹನ ತಪಾಸಣೆ ಮತ್ತು ನಿಗಾ ಹೆಚ್ಚಿಸಲಾಗಿದೆ.
ಅರೆಸೇನಾ ಪಡೆಗಳೂ ಸೇರಿದಂತೆ 25 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಂತರ್ ಮಂತರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಅಡಿಯಲ್ಲಿ ನಿರ್ಬಂಧ ಜಾರಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕ ಶಾಂತಿ ಮತ್ತು ಸುರಕ್ಷತೆಯ ಕಾರಣ ನೀಡಿ ಪ್ರತಿಭಟನೆಗೆ ಅನುಮತಿ ನಿರಾಕರಿಸಲಾಗಿದೆ. ಅರ್ಜಿಯನ್ನು ತಡವಾಗಿ ಸಲ್ಲಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತೆ ನೂಪುರ್ ಪ್ರಸಾದ್ ತಿಳಿಸಿದ್ದಾರೆ.
2 ದಿನ ಮದ್ಯದಂಗಡಿಗಳು ಬಂದ್: ಅಕ್ಟೋಬರ್ 9 ಮತ್ತು 10ರಂದು ದೆಹಲಿಯಾದ್ಯಂತ ಚಿಲ್ಲರೆ ಮದ್ಯದಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ.
ಮಾಧ್ಯಮ ಪ್ರತಿನಿಧಿಗಳು ಸಂಸ್ಥೆಯ ಗುರುತಿನ ಚೀಟಿ ಅಥವಾ ಪಿಐಬಿ/ಡಿಐಪಿ ಮಾನ್ಯತಾ ಪತ್ರವನ್ನು ಸ್ಪಷ್ಟವಾಗಿ ಕಾಣುವಂತೆ ಧರಿಸಬೇಕು. ಪೊಲೀಸರ ಕಾರ್ಯಾಚರಣೆಗೆ ಅಡ್ಡಿಯಾಗದಂತೆ ಹಾಗೂ ಉದ್ವಿಗ್ನ ಸಂದರ್ಭಗಳಲ್ಲಿ ಸುರಕ್ಷಿತ ಅಂತರ ಕಾಯ್ದುಕೊಂಡು ವರದಿಗಾರಿಕೆ ನಡೆಸುವಂತೆ ಸೂಚಿಸಲಾಗಿದೆ.
ಈ ನಡುವೆ, ಮೆಟ್ರೊ ಮತ್ತು ರೈಲು ಸಂಚಾರಕ್ಕೆ ವ್ಯಾಪಕ ನಿರ್ಬಂಧ ವಿಧಿಸುವ ಪ್ರಸ್ತಾವವನ್ನು ಪ್ರಶ್ನಿಸಿರುವ ಸುಪ್ರೀಂ ಕೋರ್ಟ, ಸಾರ್ವಜನಿಕ ಸಾರಿಗೆ ಸೇವೆಗಳಿಗೆ ಅನಗತ್ಯ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳುವ ಅಗತ್ಯವನ್ನು ಒತ್ತಿಹೇಳಿದೆ.