LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ಪ್ರತಿಭಟನೆಗೆ ಅನುಮತಿ ನಿರಾಕರಣೆ; ಹೈಕೋರ್ಟ ಮೆಟ್ಟಿಲೇರಿದ ಯೂತ್ ಕಾಂಗ್ರೆಸ್

ಹೊಸದಿಲ್ಲಿ, ಅ. 3 : ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ ಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನಿರಾಕರಿಸಿರುವ ದೆಹಲಿ ಪೊಲೀಸರ ಕ್ರಮವನ್ನು ಪ್ರಶ್ನಿಸಿ ಇಂಡಿಯನ್ ಯೂತ್ ಕಾಂಗ್ರೆಸ್ (ಐವೈಸಿ) ದೆಹಲಿ ಹೈಕೋರ್ಟ ಮೆಟ್ಟಿಲೇರಿದೆ.

ಐವೈಸಿ ರಾಷ್ಟ್ರೀಯ ಅಧ್ಯಕ್ಷ ಉದಯ ಭಾನು ಚಿಬ್ ಅರ್ಜಿ ಸಲ್ಲಿಸಿದ್ದು, ಪ್ರತಿಭಟನೆಗೆ ಅನುಮತಿ ಕೋರಿದ್ದ ಮನವಿಯನ್ನು ತಿರಸ್ಕರಿಸಿ ಅಕ್ಟೋಬರ್ 1ರಂದು ದೆಹಲಿ ಪೊಲೀಸರು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿದ್ದಾರೆ. ಅರ್ಜಿಯ ವಿಚಾರಣೆ ಮುಂದಿನ ವಾರ ನಡೆಯುವ ಸಾಧ್ಯತೆಯಿದೆ.

ಶಾಂತಿಯುತ ಸಭೆಯನ್ನು ನಿಯಂತ್ರಿಸುವ ಪೊಲೀಸರ ಅಧಿಕಾರವನ್ನು, ಪ್ರತಿಯೊಂದು ಪ್ರಕರಣದ ಪರಿಸ್ಥಿತಿಯನ್ನು ಪ್ರತ್ಯೇಕವಾಗಿ ಹಾಗೂ ಸಮಂಜಸ ಪ್ರಮಾಣದಲ್ಲಿ ಪರಿಶೀಲಿಸದೆ ಸಂಪೂರ್ಣವಾಗಿ ನಿಷೇಧಿಸುವ ಅಧಿಕಾರವನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಸುಮಾರು 100ರಿಂದ 150 ಮಂದಿ ಭಾಗವಹಿಸುವ ಶಾಂತಿಯುತ ಪ್ರತಿಭಟನೆ ನಡೆಸಲು ಐವೈಸಿ ಸೆಪ್ಟೆಂಬರ್ 25ರಂದು ದೆಹಲಿ ಪೊಲೀಸರಿಗೆ ಅರ್ಜಿ ಸಲ್ಲಿಸಿತ್ತು. ಭದ್ರತೆ, ಸಂಚಾರ ನಿರ್ವಹಣೆ, ಶಿಸ್ತು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ಎಲ್ಲ ಕಾನೂನುಬದ್ಧ ಷರತ್ತುಗಳನ್ನು ಪಾಲಿಸುವುದಾಗಿಯೂ ಸಂಘಟನೆ ಭರವಸೆ ನೀಡಿತ್ತು.

ಆದರೆ, ಅನುಮತಿಗಾಗಿ ಪದೇಪದೇ ವಿಚಾರಿಸಿದರೂ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದ ಮೊದಲ ದಿನವಾದ ಅಕ್ಟೋಬರ್ 1ರಂದೇ ಮನವಿ ತಿರಸ್ಕರಿಸಿರುವುದನ್ನು ತಿಳಿಸಲಾಯಿತು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ದೆಹಲಿ ಪೊಲೀಸರ ಕ್ರಮವು ಸಂವಿಧಾನದ ವಿಧಿ 14, 19(1)(ಎ) ಮತ್ತು 19(1)(ಬಿ) ಅಡಿಯಲ್ಲಿ ದೊರೆತಿರುವ ಸಮಾನತೆ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಶಾಂತಿಯುತವಾಗಿ ಸಭೆ ಸೇರುವ ಹಕ್ಕಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಎತ್ತುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಪ್ರತಿಭಟನೆ ಮತ್ತು ಸಾರ್ವಜನಿಕ ಸಭೆಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪೊಲೀಸರು ‘ಯಾಂತ್ರಿಕವಾಗಿ’ ಅನ್ವಯಿಸಿದ್ದಾರೆ ಎಂದೂ ಆಕ್ಷೇಪಿಸಲಾಗಿದೆ.

ಶಾಂತಿಯುತವಾಗಿ ಸಭೆ ಸೇರುವ ಹಕ್ಕನ್ನು ರಕ್ಷಿಸುವುದರ ಜೊತೆಗೆ, ಅದರ ಮೇಲೆ ವಿಧಿಸುವ ನಿರ್ಬಂಧಗಳು ಸಮಂಜಸ ಮತ್ತು ಪ್ರಮಾಣಬದ್ಧವಾಗಿರಬೇಕು ಎಂಬ ಸುಪ್ರೀಂ ಕೋರ್ಟಿನ ಹಿಂದಿನ ತೀರ್ಪುಗಳನ್ನೂ ಅರ್ಜಿಯಲ್ಲಿ ಆಧಾರವಾಗಿ ಉಲ್ಲೇಖಿಸಲಾಗಿದೆ. ವಕೀಲ ರೂಪೇಶ್ ಸಿಂಗ್ ಭದೌರಿಯಾ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ.

ಈ ಕಾನೂನು ಹೋರಾಟದ ನಡುವೆಯೇ ಎಸ್‌ಐಆರ್‌ನಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಹಾಗೂ ಗ್ಯಾನೇಶ ಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗಳು ಮುಂದುವರಿದಿವೆ. ದೆಹಲಿ ಪೊಲೀಸರು ಅನುಮತಿ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವ ಕ್ರಮವೂ ನಡೆದಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST