ಪುಣೆ, ಆಗಸ್ಟ್ 31: ದಿಲ್ಲಿ ಪೊಲೀಸರ ಕಾರ್ಯವೈಖರಿಯನ್ನು ಟೀಕಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪೊಲೀಸರು ನಿಜವಾದ ಅಪರಾಧಗಳು ನಡೆಯುವ ಸಂದರ್ಭದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಚಿಕ್ಕ ಮಕ್ಕಳ ಮೇಲೆ ಹಲ್ಲೆ ನಡೆಸುವ ಸಂದರ್ಭಗಳಲ್ಲಿ ಮಾತ್ರ ಪೊಲೀಸರು ಸಕ್ರಿಯರಾಗುತ್ತಾರೆ ಎಂದು ಆರೋಪಿಸಿದ್ದಾರೆ.
ಸ್ಲೀಪರ್ ಬಸ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬ ಸುದ್ದಿ ಹೊರಬಂದ ಬೆನ್ನಲ್ಲೇ ಅವರು ದಿಲ್ಲಿ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉತ್ತರ ಪ್ರದೇಶದ ಮೈನ್‌ಪುರಿ ಮತ್ತು ದಿಲ್ಲಿಯ ಕಾಶ್ಮೀರಿ ಗೇಟ್ ನಡುವೆ ಸ್ಲೀಪರ್ ಬಸ್ ಸಂಚರಿಸುತ್ತಿದ್ದ ವೇಳೆ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೊವೊಂದನ್ನು ‘ಎಕ್ಸ್’ನಲ್ಲಿ ಮರುಹಂಚಿಕೊಂಡಿರುವ ಅಭಿಜೀತ್ ದೀಪ್ಕೆ, ದಿಲ್ಲಿ ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ನಿಜವಾದ ಅಪರಾಧ ನಡೆಯುತ್ತಿರುವಾಗ ದಿಲ್ಲಿ ಪೊಲೀಸರು ಕಣ್ಮರೆಯಾಗುತ್ತಾರೆ. ಚಿಕ್ಕ ಮಕ್ಕಳ ಮೇಲೆ ಬರ್ಬರವಾಗಿ ಹಲ್ಲೆ ನಡೆಸಬೇಕಾದಾಗ ಮಾತ್ರ ಅವರು ಹಾಜರಾಗುತ್ತಾರೆ’ ಎಂದು ಅವರು ಟೀಕಿಸಿದ್ದಾರೆ.
ಸ್ಲೀಪರ್ ಬಸ್‌ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದಿರುವ ಅತ್ಯಾಚಾರದ ಆರೋಪವು ಪ್ರಯಾಣಿಕರ ಸುರಕ್ಷತೆ ಹಾಗೂ ಪೊಲೀಸ್ ಮೇಲ್ವಿಚಾರಣೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬಸ್ ದೀರ್ಘ ದೂರ ಸಂಚರಿಸುವಾಗಲೂ ಪೊಲೀಸ್ ತಪಾಸಣೆ ಹಾಗೂ ಸುರಕ್ಷತಾ ವ್ಯವಸ್ಥೆಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂಬ ಚರ್ಚೆಯೂ ಆರಂಭವಾಗಿದೆ.
ದಿಲ್ಲಿ ಪೊಲೀಸರ ವಿರುದ್ಧ ದೀಪ್ಕೆ ಮಾಡಿರುವ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಇಂತಹ ಗಂಭೀರ ಅಪರಾಧಗಳನ್ನು ತಡೆಯಲು ಪೊಲೀಸರು ಹೆಚ್ಚು ಪರಿಣಾಮಕಾರಿ ಮೇಲ್ವಿಚಾರಣೆ ಹಾಗೂ ತ್ವರಿತ ಪ್ರತಿಕ್ರಿಯೆ ವ್ಯವಸ್ಥೆ ರೂಪಿಸಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ.