ಕೋಚ್ಚಿ: ಮಹಿಳೆಯರು ಮನೆಯಲ್ಲೇ ಇರಬೇಕು, ಸಾರ್ವಜನಿಕ ಕ್ಷೇತ್ರಕ್ಕೆ ಪ್ರವೇಶಿಸಬಾರದು ಎಂದು ಕೇರಳದ ಪ್ರಭಾವಿ ಮುಸ್ಲಿಂ ಧರ್ಮಗುರು ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಮಹಿಳೆಯರ ಸ್ಥಾನಮಾನವನ್ನು ಚಿನ್ನದ ಆಭರಣಕ್ಕೆ ಹೋಲಿಸಿರುವ ಅವರ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ.
ಆಗಸ್ಟ್ 31ರಂದು ಕೋಚ್ಚಿಯಲ್ಲಿ ನಡೆದ ‘ಹುಬ್ಬುಲ್ ರಸೂಲ್’ ಸಮ್ಮೇಳನದಲ್ಲಿ ಮಾತನಾಡಿದ ಅಬೂಬಕರ್ ಮುಸ್ಲಿಯಾರ್, ಮಹಿಳೆಯರ ಗೌರವ ಮತ್ತು ಭದ್ರತೆಯನ್ನು ಕಾಪಾಡುವ ಉದ್ದೇಶದಿಂದ ಇಸ್ಲಾಂನಲ್ಲಿ ಪರ್ದಾ ಪದ್ಧತಿಯನ್ನು ಸೂಚಿಸಲಾಗಿದೆ ಎಂದು ಪ್ರತಿಪಾದಿಸಿದರು.
“ಮಹಿಳೆಯರು ತಮ್ಮ ಮನೆಗಳಲ್ಲೇ ಇರಬೇಕು. ಅವರು ಸಾರ್ವಜನಿಕ ಕ್ಷೇತ್ರಕ್ಕೆ ಬರಬಾರದು. ಪವಿತ್ರ ಕುರಾನ್ ಕೂಡ ಇದನ್ನೇ ಹೇಳುತ್ತದೆ” ಎಂದು ಅವರು ಹೇಳಿದ್ದಾರೆ.
ಮಹಿಳೆಯರನ್ನು ಚಿನ್ನದ ಹಾರಕ್ಕೆ ಹೋಲಿಕೆ
ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವ ವೇಳೆ ಅಬೂಬಕರ್ ಮುಸ್ಲಿಯಾರ್ ಮಹಿಳೆಯರನ್ನು ಚಿನ್ನದ ಹಾರಕ್ಕೆ ಹೋಲಿಸಿದ್ದಾರೆ. ಚಿನ್ನದ ಹಾರವನ್ನು ಖರೀದಿಸಿದ ಬಳಿಕ ಸುರಕ್ಷಿತವಾಗಿ ಪೆಟ್ಟಿಗೆಯಲ್ಲಿಟ್ಟು ಬೀರುವಿನಲ್ಲಿ ಸಂರಕ್ಷಿಸಲಾಗುತ್ತದೆ. ಆದರೆ ರಸ್ತೆ ಬದಿಯಲ್ಲಿ ಇಡುವ ಕಲ್ಲಿನ ಒರಳು ಅಥವಾ ಗ್ರೈಂಡರ್‌ಗಳನ್ನು ಯಾರಾದರೂ ತುಳಿಯಬಹುದು ಅಥವಾ ಮುಟ್ಟಬಹುದು ಎಂದು ಅವರು ಉದಾಹರಣೆ ನೀಡಿದ್ದಾರೆ.
ಅದೇ ರೀತಿ ಮಹಿಳೆಯರು ತಮ್ಮ ಸೌಂದರ್ಯ ಮತ್ತು ಗೌರವವನ್ನು ಉಳಿಸಿಕೊಳ್ಳಬೇಕಾದರೆ ಅವರನ್ನು ಮನೆಯಲ್ಲೇ ಸುರಕ್ಷಿತವಾಗಿ ಇರಿಸಬೇಕು. ಮಹಿಳೆಯರನ್ನು ಸಾರ್ವಜನಿಕ ಕ್ಷೇತ್ರಕ್ಕೆ ಕರೆತರುವುದು ದೊಡ್ಡ ವಿನಾಶಕ್ಕೆ ಕಾರಣವಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಮಸ್ತ ಕೇರಳ ಜಮಿಯ್ಯತುಲ್ ಉಲಮಾ ಕಳೆದ 100 ವರ್ಷಗಳಿಂದ ಇದೇ ತತ್ವವನ್ನು ಬೋಧಿಸುತ್ತಿದ್ದು, ಇದರಿಂದ ಮಹಿಳೆಯರು ತಮ್ಮ ಗೌರವವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ ಎಂದೂ ಅವರು ಹೇಳಿದ್ದಾರೆ.
‘ಧರ್ಮದ ಬಗ್ಗೆ ಮಾತನಾಡುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ’
ಇದೇ ವೇಳೆ, ಇಸ್ಲಾಂ ಐತಿಹಾಸಿಕವಾಗಿ ಮಹಿಳೆಯರ ಸ್ಥಾನಮಾನವನ್ನು ಎತ್ತಿಹಿಡಿದಿದೆ ಎಂದು ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ. ಇಸ್ಲಾಂ ಪೂರ್ವದ ಅರೇಬಿಯಾದಲ್ಲಿ ಹೆಣ್ಣು ಮಕ್ಕಳ ಹತ್ಯೆಯಂತಹ ಕ್ರೂರ ಪದ್ಧತಿಗಳು ಇದ್ದವು. ಇಸ್ಲಾಂ ಅವುಗಳನ್ನು ನಿಷೇಧಿಸುವುದರ ಜೊತೆಗೆ ಮಹಿಳೆಯರಿಗೆ ಆಸ್ತಿ ಹಕ್ಕು ಹಾಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ನೀಡಿತು ಎಂದು ಅವರು ಪ್ರತಿಪಾದಿಸಿದ್ದಾರೆ.
ತಮ್ಮ ಹೇಳಿಕೆಗಳನ್ನು ಪ್ರಶ್ನಿಸುತ್ತಿರುವ ಸಂಘಟನೆಗಳ ವಿರುದ್ಧವೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧರ್ಮದ ಕುರಿತು ತಾವು ಕೂಲಂಕುಷವಾಗಿ ಅಧ್ಯಯನ ಮಾಡಿದ್ದು, ಸಮುದಾಯಕ್ಕೆ ಧರ್ಮದ ಬಗ್ಗೆ ಮಾರ್ಗದರ್ಶನ ನೀಡುವುದು ತಮ್ಮ ಕರ್ತವ್ಯವಾಗಿದೆ. ಈ ಕುರಿತು ತಾವು ಮಾತನಾಡುತ್ತೇವೆ ಹಾಗೂ ಮುಂದೆಯೂ ಮಾತನಾಡುತ್ತೇವೆ; ಯಾರಿಂದಲೂ ತಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಆದರೆ, ಮಹಿಳೆಯರನ್ನು ಮನೆಯಿಂದ ಹೊರಬರದಂತೆ ನಿರ್ಬಂಧಿಸುವುದು ಹಾಗೂ ಅವರನ್ನು ಆಭರಣದಂತಹ ವಸ್ತುಗಳಿಗೆ ಹೋಲಿಸುವುದು ಲಿಂಗ ಸಮಾನತೆ ಮತ್ತು ಮಾನವ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಪ್ರಗತಿಪರ ಚಿಂತಕರು ಹಾಗೂ ಹಕ್ಕುಗಳ ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.