LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
State News

ಸಾಂವಿಧಾನಿಕ ಕರ್ತವ್ಯಗಳನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಿ: ರಾಜ್ಯಪಾಲರಿಗೆ ರಮೇಶ್ ಬಾಬು ಪತ್ರ

ಬೆಂಗಳೂರು, ಅ. 21 (ಸಮದರ್ಶಿ ಸುದ್ದಿ): ಪ್ರಜಾಪ್ರಭುತ್ವದ ಸಂಸ್ಥೆಗಳ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಬಲಪಡಿಸಲು ರಾಜ್ಯಪಾಲರು ಸಾಂವಿಧಾನಿಕ ಕರ್ತವ್ಯಗಳನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸುವುದು ಅತ್ಯಂತ ಅಗತ್ಯ ಎಂದು ಕೆಪಿಸಿಸಿ ಸಂವಹನ ಮತ್ತು ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ನೂತನ ರಾಜ್ಯಪಾಲರಾದ ಡಾ. ಸುಧಾ ಯಾದವ ಅವರಿಗೆ ಬಹಿರಂಗ ಪತ್ರ ಬರೆದಿರುವ ಅವರು, ರಾಜ್ಯಪಾಲರ ಅಧಿಕಾರಾವಧಿಯಲ್ಲಿ ಸಂವಿಧಾನದ ಆಶಯಗಳಿಗೆ ಹೆಚ್ಚಿನ ಆದ್ಯತೆ ದೊರೆಯಬೇಕು. ಒಕ್ಕೂಟ ವ್ಯವಸ್ಥೆ, ಜಾತ್ಯತೀತತೆ, ಸಾಮಾಜಿಕ ನ್ಯಾಯ ಹಾಗೂ ಪ್ರಜಾಸತ್ತಾತ್ಮಕ ಹೊಣೆಗಾರಿಕೆಯ ತತ್ವಗಳನ್ನು ಎತ್ತಿಹಿಡಿಯುವ ಮೂಲಕ ಸಾಂವಿಧಾನಿಕ ಸಂಸ್ಥೆಗಳ ಘನತೆ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.

ಲೋಕಭವನವು ಕೇವಲ ರಾಜ್ಯಪಾಲರ ಅಧಿಕೃತ ನಿವಾಸವಾಗಿ ಉಳಿಯದೆ, ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಸಾಂವಿಧಾನಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕು. ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ಮಹಿಳಾ ಸಂಘಟನೆಗಳು, ಸಮಾಜ ಸುಧಾರಕರು, ಬುದ್ಧಿಜೀವಿಗಳು ಹಾಗೂ ಅಂಚಿನಲ್ಲಿರುವ ಸಮುದಾಯಗಳ ಪ್ರತಿನಿಧಿಗಳಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದ ಎಲ್ಲ ಭಾಷೆಗಳು ಮತ್ತು ಸಮುದಾಯಗಳ ಸಂಪ್ರದಾಯಗಳಿಗೆ ಗೌರವ ನೀಡುವುದರೊಂದಿಗೆ ಕನ್ನಡ ಭಾಷೆ, ಸಾಹಿತ್ಯ, ಕಲೆ ಹಾಗೂ ಸಾಂಸ್ಕೃತಿಕ ಪರಂಪರೆಯ ಬೆಳವಣಿಗೆಗೂ ರಾಜ್ಯಪಾಲರು ಪ್ರೋತ್ಸಾಹ ನೀಡಬೇಕು. ಇಂತಹ ಕ್ರಮಗಳು ಕರ್ನಾಟಕದ ಸಾಮೂಹಿಕ ಅಸ್ಮಿತೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಬಲಪಡಿಸಲಿವೆ ಎಂದು ತಿಳಿಸಿದ್ದಾರೆ.

ಸಾಂವಿಧಾನಿಕ ಅರಿವು, ಗುಣಮಟ್ಟದ ಶಿಕ್ಷಣ, ವೈಜ್ಞಾನಿಕ ಮನೋಭಾವ, ಮಹಿಳಾ ಸಬಲೀಕರಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಲೋಕಭವನವು ಹೆಚ್ಚಿನ ಆದ್ಯತೆ ನೀಡಬೇಕು. ವಿಶೇಷವಾಗಿ ಯುವಜನರಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಉತ್ತೇಜಿಸಬೇಕು ಎಂದು ಸಲಹೆ ನೀಡಿದ್ದಾರೆ.

ಸರ್ಕಾರ ಮತ್ತು ಸಾಂವಿಧಾನಿಕ ಸಂಸ್ಥೆಗಳ ನಡುವೆ ಪರಸ್ಪರ ಗೌರವ ಹಾಗೂ ಸಹಕಾರದ ವಾತಾವರಣ ನಿರ್ಮಾಣವಾಗಬೇಕು. ವಿವಿಧ ಸಮುದಾಯಗಳ ನಡುವೆ ವಿಶ್ವಾಸ ಮತ್ತು ಸೌಹಾರ್ದತೆ ಬೆಳೆಸುವಲ್ಲಿ ರಾಜ್ಯಪಾಲರು ಪ್ರಮುಖ ಪಾತ್ರ ವಹಿಸಬೇಕು ಎಂದು ರಮೇಶ್ ಬಾಬು ಆಶಿಸಿದ್ದಾರೆ.

ಲೋಕಭವನವನ್ನು ಸಾಮಾನ್ಯ ಜನರಿಗೆ ಮತ್ತಷ್ಟು ಹತ್ತಿರವಾಗಿಸುವ ಮೂಲಕ ಸಾಂವಿಧಾನಿಕ ಮೌಲ್ಯಗಳು ಕೇವಲ ಘೋಷಣೆಗಳಾಗಿ ಉಳಿಯದೆ ಆಡಳಿತದ ಕಾರ್ಯವೈಖರಿಯಲ್ಲಿ ಪ್ರತಿಫಲಿಸುವಂತಾಗಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹುಲಿಕೇರಿ ಕೆರೆಯಲ್ಲಿ ಮುಳುಗಿ ಯುವಕನ ಸಾವುಚುನಾವಣಾ ಆಯುಕ್ತರಿಗೆ ಕಾನೂನು ರಕ್ಷಣೆ ರದ್ದುಪಡಿಸಿ, ಜ್ಞಾನೇಶ ಕುಮಾರ ವಜಾಗೊಳಿಸಿ: ಖರ್ಗೆ ಆಗ್ರಹಬುಲೆರೋ–ಟ್ರ್ಯಾಕ್ಟರ್ ಅಪಘಾತ: ಯುವಕ ಸಾವುಪೊಲೀಸರು ಎಲ್ಲರನ್ನೂ ಸಮಾನವಾಗಿ ಕಾಣಬೇಕು: ಡಿ.ಕೆ. ಶಿವಕುಮಾರಅಜರುದ್ದೀನ್ ಅವರ 28 ವರ್ಷಗಳ ದಾಖಲೆ ಮುರಿದ ಬವುಮಾಮೈಸೂರು ದಸರಾ ಜಂಬೂಸವಾರಿಗೆ ಚಾಲನೆ: ಚಾಮುಂಡೇಶ್ವರಿಗೆ ಡಿ.ಕೆ. ಶಿವಕುಮಾರ ಪುಷ್ಪಾರ್ಚನೆಎಪ್‌ಸ್ಟೀನ್ ಜೊತೆ ಹರ್ದೀಪ್ ಪುರಿ ಏಕಾಂಗಿ ಭೇಟಿ: ಫೋಟೊ ಬಿಡುಗಡೆ ಮಾಡಿ ಪ್ರತಿಪಕ್ಷಗಳ ಪ್ರಶ್ನೆಸಾಂವಿಧಾನಿಕ ಕರ್ತವ್ಯಗಳನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಿ: ರಾಜ್ಯಪಾಲರಿಗೆ ರಮೇಶ್ ಬಾಬು ಪತ್ರತೃಣಮೂಲ ತೊರೆದು ಎನ್‌ಡಿಎ ಬೆಂಬಲಿಸಿದ ಯೂಸುಫ ಪಠಾಣಗೆ ₹20.53 ಕೋಟಿ ಮೌಲ್ಯದ ಜಮೀನುಎಸ್‌ಐಆರ್‌ ಪ್ರಕ್ರಿಯೆಯಲ್ಲಿ 4 ನಿಯಮ ಸಡಿಲಿಸಿದ ಚುನಾವಣಾ ಆಯೋಗ