LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಕಾಂಗ್ರೆಸ್‌ಗೆ ಪಂಚವಿಜಯ, ಬಿಜೆಪಿಗೆ ಎರಡು, ಜೆಡಿಎಸ್‌ಗೆ ಆಘಾತ!

ಬೆಂಗಳೂರು, ಜೂನ್ 18: ಕರ್ನಾಟಕ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ಕಣಕ್ಕಿಳಿಸಿದ್ದ ಐವರು ಅಭ್ಯರ್ಥಿಗಳನ್ನೂ ಗೆಲ್ಲಿಸುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ ತನ್ನ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡರೆ, ಜೆಡಿಎಸ್‌ಗೆ ತೀವ್ರ ಹಿನ್ನಡೆಯಾಗಿ ಅದರ ಅಭ್ಯರ್ಥಿ ಗೋವಿಂದರಾಜು ಸೋಲನುಭವಿಸಿದ್ದಾರೆ.

ಫಲಿತಾಂಶ ಪ್ರಕಟವಾದ ಬಳಿಕ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದ್ದು, ಚುನಾವಣೆಗೆ ಮುನ್ನ ರೂಪಿಸಿದ್ದ ರಣತಂತ್ರ ಸಂಪೂರ್ಣ ಯಶಸ್ವಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಬಿ.ಕೆ.ಹರಿಪ್ರಸಾದ, ತಿಪ್ಪಣ್ಣಪ್ಪ ಕಮಕನೂರು, ಪಿ.ವಿ.ಮೋಹನ, ಬಿ.ಎಸ್.ಶಿವಣ್ಣ ಹಾಗೂ ವಿನಯ್ ಕಾರ್ತಿಕ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿಗಳಾದ ಆರ್.ರಘು ಕೌಟಿಲ್ಯ ಮತ್ತು ಲಿಂಗರಾಜ ಪಾಟೀಲ ಗೆಲುವು ಸಾಧಿಸಿದ್ದಾರೆ.

ಈ ಚುನಾವಣೆಯಲ್ಲಿ ಕಾಂಗ್ರೆಸ್ ಕೊನೆಯ ಕ್ಷಣದಲ್ಲಿ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ರಾಜಕೀಯ ವಲಯದ ಗಮನ ಸೆಳೆದಿತ್ತು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಲೆಕ್ಕಾಚಾರಕ್ಕೆ ಪ್ರತಿಯಾಗಿ ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಕಾಂಗ್ರೆಸ್, ಅಡ್ಡಮತದಾನ ತಡೆಯಲು ವಿಶೇಷ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಂಡಿತ್ತು.

ಪಕ್ಷದ ಎಲ್ಲ ಶಾಸಕರನ್ನು ರೆಸಾರ್ಟ್‌ಗೆ ಸ್ಥಳಾಂತರಿಸುವ ಮೂಲಕ ಮತದಾನಕ್ಕೂ ಮುನ್ನ ಕಟ್ಟುನಿಟ್ಟಿನ ನಿಗಾ ವಹಿಸಲಾಗಿತ್ತು. ಯಾವುದೇ ಶಾಸಕರು ಅಡ್ಡಮತದಾನ ಮಾಡದಂತೆ ನೋಡಿಕೊಳ್ಳಲು ಪಕ್ಷದ ನಾಯಕರು ನಿರಂತರ ಸಂಪರ್ಕದಲ್ಲಿದ್ದರು. ಈ ತಂತ್ರಗಳು ಫಲ ನೀಡಿದ್ದು, ಕಾಂಗ್ರೆಸ್ ಸ್ಪರ್ಧಿಸಿದ್ದ ಐವರು ಅಭ್ಯರ್ಥಿಗಳೂ ಗೆಲುವಿನ ನಗೆ ಬೀರಿದ್ದಾರೆ.

ಮತ ಎಣಿಕೆ ಬಳಿಕ ಅಭ್ಯರ್ಥಿಗಳು ಪಡೆದ ಮತಗಳ ವಿವರ ಬಹಿರಂಗಗೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕಾರ್ತಿಕ ಅತಿ ಹೆಚ್ಚು 32 ಮತಗಳನ್ನು ಪಡೆದಿದ್ದಾರೆ. ಬಿ.ಕೆ.ಹರಿಪ್ರಸಾದ ಮತ್ತು ಬಿ.ಎಸ್.ಶಿವಣ್ಣ ತಲಾ 30 ಮತಗಳನ್ನು ಗಳಿಸಿದ್ದರೆ, ತಿಪ್ಪಣ್ಣಪ್ಪ ಕಮಕನೂರು ಕೂಡ 30 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಪಿ.ವಿ.ಮೋಹನ 29 ಮತಗಳನ್ನು ಪಡೆದಿದ್ದಾರೆ.

ಬಿಜೆಪಿಯ ಆರ್.ರಘು ಕೌಟಿಲ್ಯ 29 ಮತಗಳನ್ನು ಪಡೆದು ಗೆದ್ದಿದ್ದು, ಲಿಂಗರಾಜ ಪಾಟೀಲ 27 ಮತಗಳೊಂದಿಗೆ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಕೇವಲ 14 ಮತಗಳನ್ನು ಪಡೆಯಲು ಸಾಧ್ಯವಾಗಿದ್ದು, ನಿರೀಕ್ಷಿತ ಬೆಂಬಲ ದೊರೆಯದೆ ಸೋಲು ಕಂಡಿದ್ದಾರೆ.

224 ಸದಸ್ಯ ಬಲದ ವಿಧಾನಸಭೆಯಲ್ಲಿ ಸದ್ಯ ಎರಡು ಸ್ಥಾನಗಳು ಖಾಲಿ ಇರುವುದರಿಂದ ಒಟ್ಟು ಶಾಸಕರ ಸಂಖ್ಯೆ 222ಕ್ಕೆ ಇಳಿದಿತ್ತು. ಶಾಸಕ ವಿನಯ್ ಕುಲಕರ್ಣಿ ಅನರ್ಹತೆ ಹಾಗೂ ಮಾಜಿ ಸಚಿವ ಡಿ.ಸುಧಾಕರ ಅವರ ನಿಧನದಿಂದ ಎರಡು ಸ್ಥಾನಗಳು ತೆರವಾಗಿವೆ. ಹೀಗಾಗಿ ಮತದಾನಕ್ಕೆ 222 ಶಾಸಕರು ಅರ್ಹರಾಗಿದ್ದರು.

ಒಬ್ಬ ಅಭ್ಯರ್ಥಿ ಗೆಲುವು ಸಾಧಿಸಲು ಮೊದಲ ಪ್ರಾಶಸ್ತ್ಯದ ಕನಿಷ್ಠ 28 ಮತಗಳ ಅಗತ್ಯವಿತ್ತು. ವಿಧಾನಸೌಧದಲ್ಲಿ ಬೆಳಿಗ್ಗೆ 9 ಗಂಟೆಗೆ ಆರಂಭವಾದ ಮತದಾನ ಸಂಜೆ 4 ಗಂಟೆಯವರೆಗೆ ನಡೆಯಿತು. ಎಲ್ಲ ಶಾಸಕರು ಮತದಾನದಲ್ಲಿ ಭಾಗವಹಿಸಿದ್ದು, ಸಂಜೆ 5 ಗಂಟೆಯ ನಂತರ ಮತ ಎಣಿಕೆ ಪ್ರಕ್ರಿಯೆ ಆರಂಭವಾಯಿತು.

ಮತ ಎಣಿಕೆ ವೇಳೆ ಒಂದು ಮತ ಅಸಿಂಧುಗೊಂಡಿರುವುದಾಗಿ ಚುನಾವಣಾಧಿಕಾರಿಗಳು ಘೋಷಿಸಿದರು. ಗುಪ್ತ ಮತದಾನ ನಡೆದ ಕಾರಣ ಆ ಮತ ಯಾವ ಪಕ್ಷದ ಶಾಸಕರು ಚಲಾಯಿಸಿದ್ದು ಎಂಬುದು ಬಹಿರಂಗಗೊಂಡಿಲ್ಲ. ಅಸಿಂಧು ಮತದ ಪರಿಣಾಮ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

ವಿಧಾನ ಪರಿಷತ್ ಚುನಾವಣೆಯ ಫಲಿತಾಂಶವು ವಿಧಾನಸಭೆಯಲ್ಲಿನ ಸಂಖ್ಯಾಬಲವನ್ನು ಮತ್ತೊಮ್ಮೆ ಪ್ರತಿಬಿಂಬಿಸಿದ್ದು, ಕಾಂಗ್ರೆಸ್ ತನ್ನ ಸಂಘಟನಾ ಶಕ್ತಿ ಮತ್ತು ಶಾಸಕರ ಮೇಲಿನ ಹಿಡಿತವನ್ನು ಪ್ರದರ್ಶಿಸಿದೆ. ಮತ್ತೊಂದೆಡೆ, ಮೈತ್ರಿ ಮಾಡಿಕೊಂಡಿದ್ದರೂ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಲು ವಿಫಲವಾಗಿರುವುದು ಪಕ್ಷಕ್ಕೆ ರಾಜಕೀಯವಾಗಿ ಹಿನ್ನಡೆಯಾಗಿ ಪರಿಣಮಿಸಿದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST