ಜಮ್ಮು, ಜುಲೈ 24: ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗಳ ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿದೆ ಎಂದು ಆರ್‌ಎಸ್‌ಎಸ್‌ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಇಂದ್ರೇಶ ಕುಮಾರ ಶುಕ್ರವಾರ ಆರೋಪಿಸಿದರು.
ಸೋನಮ್ ವಾಂಗ್ಚುಕ ತಮ್ಮ 26 ದಿನಗಳ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವಕರು ತಮ್ಮ ಚಳವಳಿಗಳ ಮೂಲಕ ದೇಶವಿರೋಧಿ ಶಕ್ತಿಗಳ ಕೈಗೊಂಬೆಯಾಗಬಾರದು ಎಂದು ಸಲಹೆ ನೀಡಿದರು.
ಸೋನಮ್ ವಾಂಗ್ಚುಕ ಮತ್ತು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಎರಡು ವಿಭಿನ್ನ ಸಂಘಟನೆಗಳಾಗಿದ್ದು, ಸಿಜೆಪಿ ವಿದೇಶಿ ಶಕ್ತಿಗಳ ಏಜೆನ್ಸಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಆರೋಪಿಸಿದರು.
ತಮ್ಮ ಹೋರಾಟವನ್ನು ವಿದೇಶಿ ಶಕ್ತಿಗಳು ದುರುಪಯೋಗಪಡಿಸಿಕೊಳ್ಳುತ್ತಿರುವುದನ್ನು ವಾಂಗ್ಚುಕ ಅರ್ಥಮಾಡಿಕೊಳ್ಳಬೇಕು. ಅವರ ಚಳವಳಿ ಭಾರತೀಯ ನೆಲೆಯಲ್ಲಿ ಮುಂದುವರಿಯಬೇಕು. ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವ ಯುವಕರು ದೇಶವಿರೋಧಿ ಶಕ್ತಿಗಳ ಕೈಗೊಂಬೆಯಾಗದಂತೆ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಹೇಳಿದರು.
ರಾಜಕೀಯ ಲಾಭಕ್ಕಾಗಿ ಕೆಲವು ಪಕ್ಷಗಳು ವಿದ್ಯಾರ್ಥಿಗಳ ಹೋರಾಟವನ್ನು ದಿಕ್ಕುತಪ್ಪಿಸುತ್ತಿವೆ. ಆರಂಭದಲ್ಲಿ ನೀಟ್ ಪರೀಕ್ಷೆಯ ಅಕ್ರಮವನ್ನು ಕೇಂದ್ರವಾಗಿಟ್ಟುಕೊಂಡಿದ್ದ ಪ್ರತಿಭಟನೆ ಬಳಿಕ ರಾಜಕೀಯ ಉದ್ದೇಶಗಳಿಗೆ ತಿರುಗಿದೆ ಎಂದು ಅವರು ಆರೋಪಿಸಿದರು.