LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ಗ್ಯಾನೇಶ ಕುಮಾರ ಏಕಪಕ್ಷೀಯ ನಿರ್ಧಾರ : ಕೇಂದ್ರ, ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್

ಹೊಸದಿಲ್ಲಿ, ಅ. 5 : ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ ಕುಮಾರ ಅವರು ಇತರ ಇಬ್ಬರು ಚುನಾವಣಾ ಆಯುಕ್ತರ ಒಪ್ಪಿಗೆಯಿಲ್ಲದೆ ಮಹತ್ವದ ನಿರ್ಧಾರಗಳನ್ನು ಏಕಪಕ್ಷೀಯವಾಗಿ ಕೈಗೊಂಡಿದ್ದಾರೆ ಎಂಬ ಆರೋಪದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ, ಕೇಂದ್ರ ಸರ್ಕಾರ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿ ಒಂದು ವಾರದೊಳಗೆ ವಿವರವಾದ ಪ್ರತಿಕ್ರಿಯೆ ಸಲ್ಲಿಸುವಂತೆ ಸೋಮವಾರ ಸೂಚಿಸಿದೆ. ಆದರೆ, ಗ್ಯಾನೇಶ ಕುಮಾರ ಅವರನ್ನು ತಕ್ಷಣ ಅಮಾನತುಗೊಳಿಸಬೇಕೆಂಬ ಮಧ್ಯಂತರ ಮನವಿಯನ್ನು ಈ ಹಂತದಲ್ಲಿ ನ್ಯಾಯಾಲಯ ಒಪ್ಪಲಿಲ್ಲ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠ ಪ್ರಕರಣದ ವಿಚಾರಣೆ ನಡೆಸಿತು. ಅರ್ಜಿದಾರ ರಾಕೇಶ್ ಕುಮಾರ ಸಿಂಗ್ ಪರ ಹಿರಿಯ ವಕೀಲ ವಿಕಾಸ್ ಸಿಂಗ್ ವಾದ ಮಂಡಿಸಿದರು.

ಚುನಾವಣಾ ಆಯೋಗವು ಸಂವಿಧಾನದ 324ನೇ ವಿಧಿಯಡಿ ಬಹುಸದಸ್ಯ ಸಂಸ್ಥೆಯಾಗಿದ್ದು, ಚುನಾವಣೆಯ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣದ ಅಧಿಕಾರ ಒಬ್ಬ ಮುಖ್ಯ ಚುನಾವಣಾ ಆಯುಕ್ತರಲ್ಲಿ ಕೇಂದ್ರೀಕೃತವಾಗಿಲ್ಲ. ಅದು ಸಂಪೂರ್ಣ ಆಯೋಗಕ್ಕೆ ಸೇರಿದೆ. ಹೀಗಾಗಿ ಆಯೋಗದ ನಿರ್ಧಾರಗಳನ್ನು ಸರ್ವಾನುಮತದಿಂದ ಅಥವಾ ಭಿನ್ನಾಭಿಪ್ರಾಯವಿದ್ದರೆ ಬಹುಮತದ ಆಧಾರದಲ್ಲಿ ಕೈಗೊಳ್ಳಬೇಕು ಎಂಬುದು ಅರ್ಜಿದಾರರ ಪ್ರಮುಖ ವಾದವಾಗಿದೆ.

ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ ಜೋಶಿ ಅವರ ಮುಂದೆ ಸಂಬಂಧಿಸಿದ ಕಡತಗಳನ್ನು ಮಂಡಿಸದೆ ಕೆಲವು ಪ್ರಮುಖ ನಿರ್ಧಾರಗಳನ್ನು ಸಿಇಸಿ ಕಚೇರಿಯಿಂದಲೇ ಕೈಗೊಂಡು ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ನೇರವಾಗಿ ರವಾನಿಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಈ ರೀತಿಯ ಕ್ರಮ ಚುನಾವಣಾ ಆಯೋಗದ ಬಹುಸದಸ್ಯ ಸ್ವರೂಪ ಮತ್ತು ಸಾಮೂಹಿಕ ನಿರ್ಧಾರ ಪ್ರಕ್ರಿಯೆಯನ್ನು ದುರ್ಬಲಗೊಳಿಸುತ್ತದೆ ಎಂಬುದು ಅರ್ಜಿದಾರರ ವಾದವಾಗಿದೆ.

ವಿಶೇಷವಾಗಿ ಬಿಹಾರ ಸೇರಿದಂತೆ ವಿವಿಧ ರಾಜ್ಯಗಳ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌), ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ ಮತ್ತು ಮಾದರಿ ನೀತಿ ಸಂಹಿತೆಯ ಜಾರಿಗೆ ಸಂಬಂಧಿಸಿದ ಕೆಲವು ನಿರ್ಧಾರಗಳನ್ನು ಇತರ ಇಬ್ಬರು ಆಯುಕ್ತರ ಅನುಮೋದನೆಯಿಲ್ಲದೆ ತೆಗೆದುಕೊಳ್ಳಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಮಾಧ್ಯಮ ವರದಿಗಳು ಹಾಗೂ ಆರ್‌ಟಿಐ ಮೂಲಕ ದೊರೆತ ಮಾಹಿತಿಯನ್ನು ಉಲ್ಲೇಖಿಸಿದ ವಿಕಾಸ್ ಸಿಂಗ್, ಕೆಲವು ಸಂದರ್ಭಗಳಲ್ಲಿ ಇಬ್ಬರು ಚುನಾವಣಾ ಆಯುಕ್ತರ ಮುಂದೆ ಕಡತಗಳನ್ನೇ ಮಂಡಿಸಲಾಗಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಆದರೆ ಪೀಠ, ಇತರ ಇಬ್ಬರು ಆಯುಕ್ತರು ತಮ್ಮನ್ನು ನಿರ್ಧಾರ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ ಎಂದು ಅಧಿಕೃತವಾಗಿ ಆಕ್ಷೇಪಿಸಿರುವ ನಿರ್ದಿಷ್ಟ ಪ್ರಕರಣಗಳಿವೆಯೇ ಎಂಬುದನ್ನು ಪ್ರಶ್ನಿಸಿತು.

ಇದಕ್ಕೆ ವಿಕಾಸ್ ಸಿಂಗ್, ಆಯೋಗದ ಆಂತರಿಕ ವ್ಯವಸ್ಥೆಯ ಕಾರಣದಿಂದ ಇಬ್ಬರು ಆಯುಕ್ತರು ಸಾರ್ವಜನಿಕವಾಗಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಸ್ಥಿತಿಯಲ್ಲಿ ಇರದೇ ಇರಬಹುದು. ಆದರೆ ಅದರಿಂದ ಕಾನೂನಿನಲ್ಲಿ ನಿಗದಿಪಡಿಸಿರುವ ಸಾಮೂಹಿಕ ನಿರ್ಧಾರ ಪ್ರಕ್ರಿಯೆಯನ್ನು ಬದಿಗೊತ್ತಲು ಅವಕಾಶವಿಲ್ಲ ಎಂದು ವಾದಿಸಿದರು.

ಈ ವೇಳೆ ಚುನಾವಣಾ ಆಯೋಗದ ನಿರ್ಧಾರಗಳು ಸರ್ವಾನುಮತದಿಂದ ಅಥವಾ ಬಹುಮತದ ಆಧಾರದಲ್ಲಿಯೇ ನಡೆಯಬೇಕು ಎಂದು ಸುಪ್ರೀಂ ಕೋರ್ಟ ಸ್ಪಷ್ಟಪಡಿಸಿತು. “ಕಡ್ಡಾಯ ಕಾನೂನು ಇದೆ. ಅದನ್ನು ಅವರು ಪಾಲಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ. ಯಾವುದೇ ಉಲ್ಲಂಘನೆ ನಡೆದಿದ್ದರೆ ಅದನ್ನು ನಾವು ರದ್ದುಗೊಳಿಸುತ್ತೇವೆ” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಹೇಳಿದರು.

ಸಿಇಸಿ ಅಮಾನತಿಗೆ ನಕಾರ

ಗ್ಯಾನೇಶ ಕುಮಾರ ಅವರನ್ನು ತಕ್ಷಣ ಅಮಾನತುಗೊಳಿಸಬೇಕೆಂಬ ಮನವಿಯನ್ನು ನ್ಯಾಯಾಲಯ ಈ ಹಂತದಲ್ಲಿ ತಿರಸ್ಕರಿಸಿತು. ಪ್ರತಿವಾದಿಗಳ ವಾದವನ್ನು ಆಲಿಸದೆ ಮಧ್ಯಂತರ ಆದೇಶ ನೀಡಲಾಗದು ಎಂದು ಪೀಠ ತಿಳಿಸಿತು.

ಸಿಇಸಿಯನ್ನು ಏಕಪಕ್ಷೀಯವಾಗಿ ಅಮಾನತುಗೊಳಿಸಿದರೆ ಚುನಾವಣಾ ಆಯೋಗದ ಕಾರ್ಯನಿರ್ವಹಣೆಯ ಮೇಲೆಯೇ ಪರಿಣಾಮ ಉಂಟಾಗಬಹುದು ಎಂದು ಅಭಿಪ್ರಾಯಪಟ್ಟ ಪೀಠ, “ಚುನಾವಣೆಗಳನ್ನು ಯಾರು ನಡೆಸುತ್ತಾರೆ?” ಎಂದು ಪ್ರಶ್ನಿಸಿತು. ಇದಕ್ಕೆ ವಿಕಾಸ್ ಸಿಂಗ್, ಉಳಿದ ಇಬ್ಬರು ಚುನಾವಣಾ ಆಯುಕ್ತರು ಆಯೋಗದ ಕಾರ್ಯಗಳನ್ನು ಮುಂದುವರಿಸಬಹುದು ಎಂದು ಉತ್ತರಿಸಿದರು.

10 ತಿಂಗಳಲ್ಲಿ 14 ಬಾರಿ ಆಕ್ಷೇಪ

ಪ್ರಕರಣಕ್ಕೆ ಮಹತ್ವ ನೀಡಿರುವ ಮತ್ತೊಂದು ಅಂಶವೆಂದರೆ ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳ ಕುರಿತು ಇತ್ತೀಚೆಗೆ ಬಹಿರಂಗಗೊಂಡಿರುವ ಮಾಹಿತಿ. ಇಂಡಿಯನ್ ಎಕ್ಸ್‌ಪ್ರೆಸ್ ತನಿಖಾ ವರದಿಯ ಪ್ರಕಾರ, ಕಳೆದ ಹತ್ತು ತಿಂಗಳಲ್ಲಿ ಎಸ್‌ಐಆರ್‌ಗೆ ಸಂಬಂಧಿಸಿದ ನಿರ್ಧಾರಗಳು ಮತ್ತು ಆದೇಶಗಳ ಕುರಿತು ಸಂಧು ಮತ್ತು ಜೋಶಿ ಕನಿಷ್ಠ 14 ಬಾರಿ ಆಕ್ಷೇಪ ಅಥವಾ ಪ್ರಶ್ನೆಗಳನ್ನು ದಾಖಲಿಸಿದ್ದರು. ಕೆಲವು ನಿರ್ಧಾರಗಳು ತಮ್ಮ ತಿಳಿವಳಿಕೆ ಅಥವಾ ಶಿಫಾರಸಿಲ್ಲದೆ ತೆಗೆದುಕೊಳ್ಳಲಾಗಿದೆ ಎಂಬ ಅಂಶಗಳನ್ನೂ ಅವರು ಪ್ರಸ್ತಾಪಿಸಿದ್ದರು ಎಂದು ವರದಿಯಾಗಿದೆ.

ಆದರೆ ಚುನಾವಣಾ ಆಯೋಗವು ಈ 14 ಟಿಪ್ಪಣಿಗಳನ್ನು ನಿರಾಕರಿಸಿಲ್ಲವಾದರೂ, ಅವುಗಳನ್ನು ಆಯೋಗದ ಸಾಮಾನ್ಯ ‘ನಿರ್ಧಾರ ಪ್ರಕ್ರಿಯೆ’ಯ ಭಾಗವಾದ ಸಲಹೆಗಳು ಎಂದು ಹೇಳಿದೆ. ಕಳೆದ ಒಂದು ವರ್ಷದಲ್ಲಿ ತೆಗೆದುಕೊಂಡ ಎಲ್ಲ ನಿರ್ಧಾರಗಳೂ ಸರ್ವಾನುಮತದಿಂದ ಆಗಿವೆ ಎಂದು ಆಯೋಗ ಪ್ರತಿಪಾದಿಸಿದೆ.

ಈ ಹಂತದಲ್ಲಿ ಆರೋಪಗಳ ಸತ್ಯಾಸತ್ಯತೆ ಕುರಿತು ಸುಪ್ರೀಂ ಕೋರ್ಟ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಆದರೆ ಪ್ರಕರಣವು ಚುನಾವಣಾ ಆಯೋಗದ ಸಾಂಸ್ಥಿಕ ಸಮಗ್ರತೆ ಮತ್ತು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳಿಗೆ ಸಂಬಂಧಿಸಿದ ವಿಷಯ ಎಂಬುದನ್ನು ಪೀಠ ಗಮನಿಸಿದೆ. “ಆಯೋಗದ ನಿರ್ಧಾರಗಳು ನಿಯಮಗಳ ಪ್ರಕಾರ ಸರ್ವಾನುಮತದಿಂದ ಅಥವಾ ಬಹುಮತದಿಂದ ತೆಗೆದುಕೊಳ್ಳಲಾಗುತ್ತಿದೆ ಎಂದು ನಾವು ಭಾವಿಸುತ್ತೇವೆ. ಚುನಾವಣಾ ಆಯೋಗ ತನ್ನ ಅಫಿಡವಿಟ್ ಸಲ್ಲಿಸಲಿ” ಎಂದು ಸಿಜೆಐ ಹೇಳಿದರು.

ಎಸ್‌ಐಆರ್‌ ಸೇರಿದಂತೆ ಪ್ರಮುಖ ನೀತಿ ನಿರ್ಧಾರಗಳಿಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ಪೂರ್ಣ ಆಯೋಗದ ಮುಂದೆ ಮಂಡಿಸುವಂತೆ, ಆಯೋಗದ ನಿರ್ಧಾರ ಪ್ರಕ್ರಿಯೆಯನ್ನು ಬಹಿರಂಗಪಡಿಸುವಂತೆ ಹಾಗೂ ಬಹುಮತದ ಸಹಮತವಿಲ್ಲದೆ ತೆಗೆದುಕೊಂಡಿರುವ ಯಾವುದೇ ನಿರ್ಧಾರಗಳಿದ್ದರೆ ಅವುಗಳನ್ನು ಅಮಾನ್ಯಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.

ಚುನಾವಣಾ ಆಯೋಗ ಮತ್ತು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಒಂದು ವಾರದೊಳಗೆ ಅಫಿಡವಿಟ್ ಸಲ್ಲಿಸಲು ಸೂಚಿಸಿರುವ ಸುಪ್ರೀಂ ಕೋರ್ಟ, ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 13ಕ್ಕೆ ನಿಗದಿಪಡಿಸಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಡಿಲು ಬಡಿದು ಎರಡು ಹಸು ಸಾವುಐಎಚ್‌ಆರ್‌ಸಿ ಬೆಳಗಾವಿ ಜಿಲ್ಲಾ ಮಂಡಳಿ ಅಧ್ಯಕ್ಷರಾಗಿ ಅಬ್ದುಲ್ ಅಜೀಜ ಶೇಖ ನೇಮಕಚುಳಕಿಯಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ-ಖೋಖೋ ಕ್ರೀಡಾಕೂಟಕ್ಕೆ ಚಾಲನೆಮೊಬೈಲ್ ಟವರ್ ಆಮಿಷ, ಫೇಸ್‌ಬುಕ್ ಲಿಂಕ್: ಅಥಣಿಯ ಇಬ್ಬರು ರೈತರಿಗೆ ₹4.04 ಲಕ್ಷ ವಂಚನೆಅಥಣಿ ಲಾಡ್ಜನಲ್ಲಿ ವೇಶ್ಯಾವಾಟಿಕೆ ಆರೋಪ: ಮಹಿಳೆ ರಕ್ಷಣೆ, ಓರ್ವ ಬಂಧನಹಸುಗಳಿಗೆ ಮೇವು ಹಾಕುವ ವಿಚಾರಕ್ಕೆ ಜಗಳ: ಪತ್ನಿಯನ್ನು ಕುಡಗೋಲಿನಿಂದ ಕೊಚ್ಚಿ ಹತ್ಯೆಬಿಜೆಪಿ ಮುಖಂಡ ರವಿ ಪಾಟೀಲಗೆ ನಿರೀಕ್ಷಣಾ ಜಾಮೀನುಮೋದಿ-ಶಾ ಸೂಚನೆಯಂತೆ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ದ್ರೋಹ: ಕಾಂಗ್ರೆಸ್ಮಹಿಳಾ ಪತ್ರಕರ್ತೆಯರ ಪೊಲೀಸರ ಲೈಂಗಿಕ ಕಿರುಕುಳ ; ಎಫ್‌ಐಆರ್‌ಗೆ ಒತ್ತಾಯಿಸಿದವರು ವಶಕ್ಕೆಇದು ಗುಜರಾತ್, ಯುಪಿ ಅಲ್ಲ; ಕಾನೂನು ಮುರಿದರೆ ಪರಿಣಾಮ ಎದುರಿಸಿ: ಪ್ರಿಯಾಂಕ್ ಖರ್ಗೆ