ಬೆಳಗಾವಿ, ಜೂನ್ 12 : ಮಹಾನಗರ ಪಾಲಿಕೆಯ ಕಂದಾಯ ಶಾಖೆಯ ದಾಖಲೆ ನಿರ್ವಹಣೆ ಹಾಗೂ ಸೇವೆಗಳು ಇನ್ನು ಮುಂದೆ ಸಂಪೂರ್ಣ ಕಾಗದರಹಿತ ವ್ಯವಸ್ಥೆಯಡಿ ನಡೆಯಲಿದ್ದು, ಪಿಐಡಿ, ಮ್ಯೂಟೇಶನ್ ಹಾಗೂ ತೆರಿಗೆ ಸಂಬಂಧಿತ ಪ್ರಕ್ರಿಯೆಗಳನ್ನು ಆನ್‌ಲೈನ್ ಮೂಲಕವೇ ನಿರ್ವಹಿಸಲಾಗುವುದು ಎಂದು ಪಾಲಿಕೆ ಕಂದಾಯ ವಿಭಾಗದ ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿ ತಿಳಿಸಿದರು.
ಗುರುವಾರ ಪಾಲಿಕೆಯ ಕಂದಾಯ ಶಾಖೆಯ ಸಿಬ್ಬಂದಿಗಾಗಿ ಆಯೋಜಿಸಿದ್ದ ತಾಂತ್ರಿಕ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಮೇಯರ್, ಉಪಮೇಯರ್, ನಗರ ಸೇವಕರು ಹಾಗೂ ಆಯುಕ್ತರ ಸಹಕಾರದಿಂದ ಕಂದಾಯ ವಾರ್ಡ್‌ಗಳನ್ನು ಈಗಾಗಲೇ ಚುನಾವಣಾ ವಾರ್ಡ್‌ಗಳಾಗಿ ಪರಿವರ್ತಿಸಲಾಗಿದೆ ಎಂದರು.
ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಕಂದಾಯ ಶಾಖೆಯ ಸಿಬ್ಬಂದಿಯನ್ನು ಚುನಾವಣಾ ವಾರ್ಡ್‌ಗಳಿಗೆ ಮರುನಿಯುಕ್ತಿ ಮಾಡಿ ವಿವಿಧ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ. ಹೊಸ ವ್ಯವಸ್ಥೆಯಲ್ಲಿ ಚುನಾವಣಾ ವಾರ್ಡ್‌ಗಳಿಗೆ ಸಂಬಂಧಿಸಿದ ತೆರಿಗೆ, ಪಿಐಡಿ, ಮ್ಯೂಟೇಶನ್ ಸೇರಿದಂತೆ ಎಲ್ಲ ಸೇವೆಗಳು ಕಾಗದರಹಿತವಾಗಿ ಆನ್‌ಲೈನ್ ಮೂಲಕವೇ ನಡೆಯಲಿವೆ ಎಂದು ಹೇಳಿದರು.
ಈ ಬದಲಾವಣೆಯ ಯಶಸ್ವಿ ಅನುಷ್ಠಾನಕ್ಕಾಗಿ ವಲಯ ಆಯುಕ್ತರು, ಕಂದಾಯ ಅಧಿಕಾರಿಗಳು, ಕರ ವಸೂಲಿಗಾರರು ಸೇರಿದಂತೆ ಸಿಬ್ಬಂದಿಗೆ ಪ್ರಾತ್ಯಕ್ಷಿಕೆ ಸಹಿತ ತಾಂತ್ರಿಕ ತರಬೇತಿ ನೀಡಲಾಗುತ್ತಿದ್ದು, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಡಾ. ಸಿದ್ದು ಹುಲ್ಲೋಳಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ವಿಭಾಗದ ಉಪ ಆಯುಕ್ತ ಉದಯಕುಮಾರ ಟಿ. ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಪಾಲಿಕೆಯ ಕಂದಾಯ ಶಾಖೆಯ ವಿವಿಧ ಹಂತಗಳ ಸಿಬ್ಬಂದಿ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.