ಹೊಸದಿಲ್ಲಿ, ಅ. 9: ರಾಷ್ಟ್ರ ರಾಜಧಾನಿಯಲ್ಲಿ ಶಾಂತಿಯುತ ಪ್ರತಿಭಟನೆಗಳನ್ನು ನಡೆಸಲು ಜಂತರ್ ಮಂತರ್ ಬದಲಾಗಿ ಅಗತ್ಯ ಮೂಲಸೌಕರ್ಯಗಳಿರುವ ಪರ್ಯಾಯ ಸ್ಥಳ ಗುರುತಿಸುವಂತೆ ಸುಪ್ರೀಂ ಕೋರ್ಟ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ ಕುಮಾರ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಹಾಗೂ ವಿದ್ಯಾರ್ಥಿ ಸಂಘಟನೆಗಳು ಅಕ್ಟೋಬರ್ 10ರಂದು ಕರೆ ನೀಡಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮೆಟ್ರೊ ನಿಲ್ದಾಣಗಳ ಮೇಲಿನ ನಿರ್ಬಂಧದ ಪ್ರಸ್ತಾವ ಹಾಗೂ ರೈಲುಗಳ ರದ್ದತಿಯನ್ನು ಪ್ರಶ್ನಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರ ನ್ಯಾಯಪೀಠವು, ಶಾಂತಿಯುತ ಪ್ರತಿಭಟನೆಗೆ ಅಗತ್ಯ ಸೌಲಭ್ಯಗಳಿರುವ ಸೂಕ್ತ ಸ್ಥಳ ಗುರುತಿಸುವ ಸಮಯ ಬಂದಿದೆ ಎಂದು ತಿಳಿಸಿತು.
ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಸಿಜೆಪಿ ಮತ್ತು ಭಾರತೀಯ ಯುವ ಕಾಂಗ್ರೆಸ್‌ಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಪರ್ಯಾಯವಾಗಿ ರಾಮಲೀಲಾ ಮೈದಾನದಲ್ಲಿ ಅವಕಾಶ ನೀಡಬಹುದಿತ್ತು ಎಂದು ವಕೀಲ ಪ್ರಶಾಂತ್ ಭೂಷಣ್ ವಾದಿಸಿದರು.
ಜಂತರ್ ಮಂತರ್ ಸುತ್ತಮುತ್ತ ಸರ್ಕಾರಿ ವಸತಿಗೃಹಗಳು ಹಾಗೂ ಸಂಸದರ ನಿವಾಸಗಳಿರುವುದರಿಂದ ಸಮಸ್ಯೆಗಳಿವೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ತಲುಪುವುದೂ ಕಷ್ಟವಾಗಬಹುದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು.
ಪರ್ಯಾಯ ಸ್ಥಳ ಗುರುತಿಸುವ ಸಲಹೆಗೆ ವಕೀಲರು ಸಹಮತ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಪ್ರಾಧಿಕಾರ ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಿದೆ ಎಂದು ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.