ಟೆಹ್ರಾನ್, ಸೆ. 9 : ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ತನ್ನ ಐದು ತೈಲ ಟ್ಯಾಂಕರ್‌ಗಳ ಮೇಲಿನ ಅಮೆರಿಕದ ದಾಳಿಯ ಬೆನ್ನಲ್ಲೇ ಹಾರ್ಮುಜ್ ಜಲಸಂಧಿಯ ಪ್ರವೇಶದ್ವಾರದಲ್ಲಿ ಅಮೆರಿಕ ಸೇನೆಗೆ ಸೇರಿದ ಅತ್ಯಾಧುನಿಕ ಮಾನವರಹಿತ ಜಲಾಂತರ್ಗಾಮಿ ವಾಹನವನ್ನು ವಶಪಡಿಸಿಕೊಂಡಿರುವುದಾಗಿ ಇರಾನ್ ಘೋಷಿಸಿದೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಅಧಿಕೃತ ಸುದ್ದಿವಾಹಿನಿ ಸೆಪಾಹ್ ನ್ಯೂಸ್ ಪ್ರಕಾರ, ಗುಪ್ತಚರ ಕಾರ್ಯಾಚರಣೆಯ ವೇಳೆ ಅಮೆರಿಕದ ಡೈವ್-ಎಲ್‌ಡಿ ಹೆಸರಿನ ಮಾನವರಹಿತ ನೀರೊಳಗಿನ ವಾಹನವನ್ನು ಇರಾನ್ ನೌಕಾಪಡೆ ತನ್ನ ವಶಕ್ಕೆ ಪಡೆದಿದೆ. ಅತ್ಯಾಧುನಿಕ ನೀರೊಳಗಿನ ತಂತ್ರಜ್ಞಾನ ಹೊಂದಿರುವ ಈ ವಾಹನವನ್ನು ಸಂಕೀರ್ಣ ಕಾರ್ಯಾಚರಣೆ ಮೂಲಕ ವಶಪಡಿಸಿಕೊಳ್ಳಲಾಗಿದೆ ಎಂದು ಇರಾನ್ ಹೇಳಿಕೊಂಡಿದ್ದು, ಅದರ ದೃಶ್ಯವನ್ನೂ ಬಿಡುಗಡೆ ಮಾಡಿದೆ.
ಇದೇ ವೇಳೆ, ಹಾರ್ಮುಜ್ ಜಲಸಂಧಿಯ ಮೇಲೆ ಹಾರಾಟ ನಡೆಸುತ್ತಿದ್ದ ಅಮೆರಿಕದ ಎಂಕ್ಯೂ-9 ರೀಪರ್ ಮಾನವರಹಿತ ಯುದ್ಧ ವಿಮಾನವನ್ನು ತನ್ನ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ಇರಾನ್ ಪ್ರತ್ಯೇಕವಾಗಿ ಹೇಳಿಕೊಂಡಿದೆ.
ಆದರೆ ಅಮೆರಿಕ ಸೇನೆ ಇದಕ್ಕೆ ವಿಭಿನ್ನ ವಿವರಣೆ ನೀಡಿದೆ. ತನ್ನ ಮಾನವರಹಿತ ನೀರೊಳಗಿನ ವಾಹನವೊಂದು ಸಮುದ್ರ ಪ್ರದೇಶದ ಸಮೀಕ್ಷೆ ನಡೆಸುತ್ತಿದ್ದ ವೇಳೆ ಒಂದು ದಿನದ ಹಿಂದೆ ತಾಂತ್ರಿಕ ದೋಷಕ್ಕೆ ಒಳಗಾಗಿತ್ತು ಎಂದು ತಿಳಿಸಿದೆ. ಇರಾನ್ ವಶಪಡಿಸಿಕೊಂಡಿರುವುದು ಇದೇ ಸಾಧನವೇ ಎಂಬುದನ್ನು ಅಮೆರಿಕ ಸ್ಪಷ್ಟಪಡಿಸಿಲ್ಲ.
ಈ ವಾಹನ ಹಳೆಯ ಮಾದರಿಯದ್ದಾಗಿದ್ದು, ಸೂಕ್ಷ್ಮ ಗುಪ್ತಚರ ಮಾಹಿತಿ ಸಂಗ್ರಹಿಸುವ ಸಾಮರ್ಥ್ಯ ಅಥವಾ ರಹಸ್ಯ ಸೋನಾರ್ ಮತ್ತು ರೇಡಾರ್ ಉಪಕರಣಗಳನ್ನು ಹೊಂದಿರಲಿಲ್ಲ ಎಂದು ಅಮೆರಿಕ ಸೇನೆ ಹೇಳಿದೆ.
6,000 ಮೀಟರ್ ಆಳಕ್ಕೂ ಇಳಿಯುವ ಸಾಮರ್ಥ್ಯ
ಅಮೆರಿಕ ಇತ್ತೀಚಿನ ವರ್ಷಗಳಲ್ಲಿ ಮಾನವರಹಿತ ನೌಕಾ ವ್ಯವಸ್ಥೆಗಳ ಅಭಿವೃದ್ಧಿಗೆ ಹೆಚ್ಚಿನ ಹೂಡಿಕೆ ಮಾಡುತ್ತಿದೆ. ವಿಶಾಲ ಸಮುದ್ರ ಪ್ರದೇಶಗಳ ಮೇಲ್ವಿಚಾರಣೆ, ಮಾಹಿತಿ ಸಂಗ್ರಹ ಹಾಗೂ ಹಡಗು ಮತ್ತು ಜಲಾಂತರ್ಗಾಮಿಗಳ ಪತ್ತೆಗೆ ಇವುಗಳನ್ನು ಬಳಸಲಾಗುತ್ತಿದೆ.
ಡೈವ್-ಎಲ್‌ಡಿ ತಯಾರಕ ಸಂಸ್ಥೆಯ ಮಾಹಿತಿಯ ಪ್ರಕಾರ, ಈ ವಾಹನ ಸುಮಾರು 10 ದಿನಗಳವರೆಗೆ ನೆಲೆಗೆ ಮರಳದೆ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು, ಸುಮಾರು 6,000 ಮೀಟರ್ ಆಳಕ್ಕೆ ಇಳಿಯಬಲ್ಲದು. 2024ರ ವರದಿಯೊಂದರ ಪ್ರಕಾರ, ಇದರ ಒಂದು ಘಟಕದ ಬೆಲೆ ಸುಮಾರು 25 ಲಕ್ಷ ಡಾಲರ್ ಎಂದು ಅಂದಾಜಿಸಲಾಗಿತ್ತು.
ಇದಕ್ಕೂ ಮುನ್ನ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಅಮೆರಿಕದ ಯುದ್ಧನೌಕೆಯನ್ನು ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೂಲಕ ಎರಡು ಬಾರಿ ಗುರಿಯಾಗಿಸಲು ಪ್ರಯತ್ನಿಸಿತ್ತು ಎಂದು ಅಮೆರಿಕ ಆರೋಪಿಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್‌ಗೆ ಸೇರಿದ ಐದು ಕಚ್ಚಾ ತೈಲ ಸಾಗಣೆ ಟ್ಯಾಂಕರ್‌ಗಳನ್ನು ನಾಶಪಡಿಸಿರುವುದಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಕಳೆದ ಎರಡು ದಿನಗಳಲ್ಲಿ ತನ್ನ ಯುದ್ಧನೌಕೆಯ ಮೇಲೆ ನಡೆದ ದಾಳಿಯ ಪ್ರಯತ್ನಗಳಿಗೆ ಪ್ರತಿಕ್ರಿಯೆಯಾಗಿಯೇ ಇರಾನಿ ತೈಲ ಟ್ಯಾಂಕರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂಬುದು ಅಮೆರಿಕದ ವಾದವಾಗಿದೆ.
27 ಇರಾನಿ ವಿಮಾನಯಾನ ಸಂಸ್ಥೆಗಳ ಮೇಲೆ ನಿರ್ಬಂಧ
ಸೇನಾ ಸಂಘರ್ಷದ ನಡುವೆಯೇ ಇರಾನ್ ಮೇಲಿನ ಆರ್ಥಿಕ ಒತ್ತಡವನ್ನೂ ಅಮೆರಿಕ ಹೆಚ್ಚಿಸಿದ್ದು, ಇರಾನ್‌ಗೆ ಸಂಬಂಧಿಸಿದ 27 ವಿಮಾನಯಾನ ಸಂಸ್ಥೆಗಳನ್ನು ನಿರ್ಬಂಧಿತ ಸಂಸ್ಥೆಗಳ ಪಟ್ಟಿಗೆ ಸೇರಿಸಿದೆ.
ಇರಾನ್‌ನ ವಾಣಿಜ್ಯ ವಿಮಾನಯಾನ ವ್ಯವಸ್ಥೆಯನ್ನು ರೆವಲ್ಯೂಷನರಿ ಗಾರ್ಡ್ ಶಸ್ತ್ರಾಸ್ತ್ರಗಳ ಖರೀದಿ ಮತ್ತು ಸಾಗಣೆ ಹಾಗೂ ಸಿಬ್ಬಂದಿಯ ಸ್ಥಳಾಂತರಕ್ಕೆ ಬಳಸಿಕೊಳ್ಳುತ್ತಿದೆ ಎಂದು ಅಮೆರಿಕ ಆರೋಪಿಸಿದೆ. ಖಾಸಗಿ ವಿಮಾನಯಾನ ಸಂಸ್ಥೆಗಳಂತೆ ಕಾರ್ಯನಿರ್ವಹಿಸುವ ಕೆಲವು ಸಂಸ್ಥೆಗಳ ಮೂಲಕ ಈ ಚಟುವಟಿಕೆ ನಡೆಸಲಾಗುತ್ತಿದೆ ಎಂಬುದು ಅಮೆರಿಕದ ಆರೋಪವಾಗಿದೆ.
ಇರಾನ್ ಅಮೆರಿಕ ಮೂಲದ ವಿಮಾನಗಳು ಮತ್ತು ಸೂಕ್ಷ್ಮ ತಂತ್ರಜ್ಞಾನಗಳನ್ನು ಪಡೆಯಲು ಬಳಸುತ್ತಿದೆ ಎನ್ನಲಾದ ಮುಂಚೂಣಿ ಕಂಪನಿಗಳು, ವಿದೇಶಿ ಮಧ್ಯವರ್ತಿಗಳು ಹಾಗೂ ಸಾಗಣೆ ಜಾಲಗಳನ್ನೂ ಹೊಸ ನಿರ್ಬಂಧಗಳ ವ್ಯಾಪ್ತಿಗೆ ತರಲಾಗಿದೆ.
ಅಮೆರಿಕ 2011ರಲ್ಲಿಯೇ ಇರಾನ್‌ನ ಮಹಾನ್ ಏರ್ ವಿರುದ್ಧ ಮೊದಲ ಬಾರಿಗೆ ನಿರ್ಬಂಧ ವಿಧಿಸಿತ್ತು. ನಂತರ ಆ ಸಂಸ್ಥೆಯೊಂದಿಗೆ ವ್ಯವಹಾರ ಸಂಬಂಧ ಹೊಂದಿವೆ ಎನ್ನಲಾದ ಹಲವು ಸಂಸ್ಥೆಗಳ ಮೇಲೂ ಕ್ರಮ ಕೈಗೊಂಡಿತ್ತು.
ಇನ್ನೊಂದೆಡೆ, ಅಮೆರಿಕದ ಕ್ರಮಗಳಿಗೆ ಪ್ರತಿಕ್ರಿಯಿಸಿರುವ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್, ಇರಾನ್ ಯುದ್ಧವನ್ನು ಬಯಸುವುದಿಲ್ಲವಾದರೂ ದೇಶದ ಮೇಲೆ ನಡೆಯುವ ಆಕ್ರಮಣವನ್ನು ಎದುರಿಸುವುದರಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜನರ ಹಿತಾಸಕ್ತಿ ಮತ್ತು ಪಶ್ಚಿಮ ಏಷ್ಯಾದ ಭದ್ರತೆ ಕಾಪಾಡಲು ಯುದ್ಧೋನ್ಮಾದದಿಂದ ದೂರವಿರುವುದು ಅಗತ್ಯ. ಆದರೆ ಆಕ್ರಮಣ ಮುಂದುವರಿದರೆ ಇರಾನ್ ತನ್ನ ಪ್ರತಿರೋಧವನ್ನೂ ಮುಂದುವರಿಸಲಿದೆ. ಆಕ್ರಮಣಕಾರರು ತಮ್ಮ ಕ್ರಮಗಳಿಗೆ ಪಶ್ಚಾತ್ತಾಪಪಡುವವರೆಗೂ ದೇಶದ ಹಕ್ಕುಗಳು ಮತ್ತು ಜನರ ರಕ್ಷಣೆಗೆ ಇರಾನ್ ದೃಢವಾಗಿ ನಿಲ್ಲಲಿದೆ ಎಂದು ಪೆಜೆಶ್ಕಿಯನ್ ತಿಳಿಸಿದ್ದಾರೆ.