

ಮುಂಬೈ, ಅ. 8: ಬಾಲಿವುಡ್‌ನಲ್ಲಿ ತಮ್ಮ ವಿಶಿಷ್ಟ ಅಭಿನಯ, ಖಡಕ್ ಸಂಭಾಷಣೆ ಮತ್ತು ನೈಜ ಪಾತ್ರಗಳ ಮೂಲಕ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿರುವ ಹಿರಿಯ ನಟ ನಾನಾ ಪಾಟೇಕರ, ತೆರೆಯ ಮೇಲಷ್ಟೇ ಅಲ್ಲದೆ ನಿಜಜೀವನದಲ್ಲೂ ದೇಶಸೇವೆಗೆ ಮುಂದಾಗಿದ್ದರು. 1999ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಚಿತ್ರರಂಗದ ವೃತ್ತಿಜೀವನಕ್ಕೆ ತಾತ್ಕಾಲಿಕ ವಿರಾಮ ನೀಡಿ ಭಾರತೀಯ ಸೇನೆಯೊಂದಿಗೆ ಸುಮಾರು 60 ದಿನಗಳನ್ನು ಕಳೆದಿದ್ದರು.
1991ರಲ್ಲಿ ಬಿಡುಗಡೆಯಾದ ‘ಪ್ರಹಾರ: ದಿ ಫೈನಲ್ ಅಟ್ಯಾಕ್’ ಚಿತ್ರದಲ್ಲಿ ಸೇನಾ ಕಮಾಂಡೊ ಪಾತ್ರ ನಿರ್ವಹಿಸಿದ್ದ ಪಾಟೇಕರ, ಆ ಪಾತ್ರಕ್ಕೆ ಜೀವ ತುಂಬುವ ಉದ್ದೇಶದಿಂದ ಸೇನಾ ತರಬೇತಿ ಪಡೆದಿದ್ದರು. ಮರಾಠಾ ಲೈಟ್ ಇನ್ಫಾಂಟ್ರಿಯೊಂದಿಗೆ ತರಬೇತಿ ಪಡೆದಿದ್ದ ಅವರಿಗೆ ಅಂದಿನಿಂದಲೇ ಭಾರತೀಯ ಸೇನೆಯೊಂದಿಗೆ ನಿಕಟ ನಂಟು ಬೆಳೆದಿತ್ತು.
1999ರಲ್ಲಿ ಕಾರ್ಗಿಲ್ ಯುದ್ಧ ಆರಂಭವಾದಾಗ ಸೈನಿಕರೊಂದಿಗೆ ಯುದ್ಧಭೂಮಿಯಲ್ಲಿ ಸೇವೆ ಸಲ್ಲಿಸುವ ಬಯಕೆಯಿಂದ ಸೇನೆಯ ಹಿರಿಯ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದ್ದರು. ಆದರೆ, ಇದಕ್ಕೆ ರಕ್ಷಣಾ ಸಚಿವರ ಅನುಮತಿ ಅಗತ್ಯವೆಂದು ಅಧಿಕಾರಿಗಳು ತಿಳಿಸಿದ್ದರು. ಹೀಗಾಗಿ ಅಂದಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರನ್ನು ಭೇಟಿಯಾದ ಪಾಟೇಕರ್, ತಾವು ಶೂಟಿಂಗ್‌ನಲ್ಲಿ ತರಬೇತಿ ಪಡೆದಿದ್ದು, ಪದಕವನ್ನೂ ಗೆದ್ದಿರುವುದಾಗಿ ವಿವರಿಸಿ ಅವಕಾಶ ಕೋರಿದ್ದರು.
ಅಗತ್ಯ ಅನುಮತಿ ದೊರೆತ ಬಳಿಕ ಸೇನೆಯ ‘ಕ್ವಿಕ್ ರಿಯಾಕ್ಷನ್ ಟೀಮ್’ (ಕ್ಯೂಆರ್‌ಟಿ) ಜತೆ ಸೇರಿಕೊಂಡ ಪಾಟೇಕರ್, ಶ್ರೀನಗರ, ದ್ರಾಸ್ ಮತ್ತು ಲೇಹ್ ಪ್ರದೇಶಗಳಲ್ಲಿ ಸುಮಾರು ಎರಡು ತಿಂಗಳು ಕಳೆದಿದ್ದರು. ಅತ್ಯಂತ ಕಠಿಣ ಹವಾಮಾನ ಹಾಗೂ ದುರ್ಗಮ ಪರ್ವತ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಎದುರಿಸಿದ್ದ ಅವರು, ಈ ಅವಧಿಯಲ್ಲಿ ಬರೋಬ್ಬರಿ 20 ಕೆ.ಜಿ. ತೂಕ ಕಳೆದುಕೊಂಡಿದ್ದರು. ಸೇನೆಯೊಂದಿಗೆ ತೆರಳುವಾಗ 76 ಕೆ.ಜಿ. ಇದ್ದ ಅವರ ತೂಕ, ಹಿಂದಿರುಗುವ ವೇಳೆಗೆ 56 ಕೆ.ಜಿ.ಗೆ ಇಳಿದಿತ್ತು ಎಂದು ಹೇಳಿಕೊಂಡಿದ್ದರು.
ಚಿತ್ರರಂಗದಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೂ ದೇಶಸೇವೆಗೆ ಆದ್ಯತೆ ನೀಡಿದ್ದ ಪಾಟೇಕರ್, ಸೈನಿಕರೊಂದಿಗೆ ಕಳೆದ ದಿನಗಳನ್ನು ತಮ್ಮ ಜೀವನದ ಮರೆಯಲಾಗದ ಅನುಭವವೆಂದು ಬಣ್ಣಿಸಿದ್ದರು. ಕಾರ್ಗಿಲ್ ಸಮರದ ಸಂದರ್ಭದಲ್ಲಿ ಸೈನಿಕರು ಅನುಭವಿಸಿದ ಸಂಕಷ್ಟಗಳು, ಯುದ್ಧದ ಭೀಕರತೆ ಹಾಗೂ ಹುತಾತ್ಮ ಯೋಧರ ಸ್ಥಿತಿಯನ್ನು ಅವರು ಹಲವು ಸಂದರ್ಭಗಳಲ್ಲಿ ಭಾವುಕರಾಗಿ ಸ್ಮರಿಸಿಕೊಂಡಿದ್ದರು.
‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದ ಅವರು, ಯುದ್ಧಭೂಮಿಯಿಂದ ಹುತಾತ್ಮ ಸೈನಿಕರ ಮೃತದೇಹಗಳನ್ನು ತರಲಾಗುತ್ತಿತ್ತು. ಅವುಗಳಲ್ಲಿ ಅನೇಕ ಮೃತದೇಹಗಳು ತೀರಾ ಹದಗೆಟ್ಟ ಸ್ಥಿತಿಯಲ್ಲಿರುತ್ತಿದ್ದವು. ಅವುಗಳನ್ನು ಅವರ ಊರುಗಳಿಗೆ ಕಳುಹಿಸುವ ಮೊದಲು ಗೌರವಯುತವಾಗಿ ಸಿದ್ಧಪಡಿಸಲಾಗುತ್ತಿತ್ತು ಎಂದು ವಿವರಿಸಿದ್ದರು.
ಅದೇ ಸಂದರ್ಭದಲ್ಲಿ ತಮ್ಮ ಮನಕಲಕಿದ ಘಟನೆಯೊಂದನ್ನು ನೆನಪಿಸಿಕೊಂಡಿದ್ದ ಪಾಟೇಕರ್, ಆಸ್ಪತ್ರೆಯ ವಾರ್ಡ್‌ನಲ್ಲಿ ಓಡಾಡುತ್ತಿದ್ದಾಗ ಪರಿಚಿತ ಸೈನಿಕನೊಬ್ಬ ಹಿಂದಿನಿಂದ ‘ಹೇ ನಾನಾ’ ಎಂದು ಕರೆದಿದ್ದ. ಆತ ಮೈಮೇಲೆ ಉದ್ದನೆಯ ಹೊದಿಕೆ ಹೊದ್ದುಕೊಂಡಿದ್ದ. ಆತನನ್ನು ಸ್ಪರ್ಶಿಸಿದಾಗ ದೇಹ ಜ್ವರದಿಂದ ಸುಡುತ್ತಿತ್ತು. ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಆತ ಮತ್ತೆ ಯುದ್ಧಭೂಮಿಗೆ ಮರಳುವ ಹಂಬಲ ವ್ಯಕ್ತಪಡಿಸಿದ್ದ. ಆದರೆ, ಯುದ್ಧದಲ್ಲಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿರುವುದನ್ನು ತೋರಿಸಿದಾಗ ಆಘಾತವಾಯಿತು ಎಂದು ಹೇಳಿದ್ದರು.
ದೇಶಕ್ಕಾಗಿ ಹೋರಾಡುವ ಸೈನಿಕರ ತ್ಯಾಗ, ಅವರ ನೋವು ಹಾಗೂ ಯುದ್ಧದ ಭೀಕರತೆಯನ್ನು ಕಣ್ಣಾರೆ ಕಂಡಿದ್ದ ಪಾಟೇಕರ್, ಸೈನಿಕರ ದೇಶಪ್ರೇಮ ಮತ್ತು ಕರ್ತವ್ಯನಿಷ್ಠೆಯನ್ನು ಸದಾ ಗೌರವದಿಂದ ಸ್ಮರಿಸಿಕೊಳ್ಳುತ್ತಿದ್ದರು.
ತೆರೆಯ ಮೇಲೆ ಸೈನಿಕನ ಪಾತ್ರ ನಿರ್ವಹಿಸುವುದಕ್ಕೂ ನೈಜ ಯುದ್ಧದ ಪರಿಸ್ಥಿತಿಯಲ್ಲಿ ಸೈನಿಕರೊಂದಿಗೆ ಕಾಲ ಕಳೆಯುವುದಕ್ಕೂ ಇರುವ ಅಗಾಧ ವ್ಯತ್ಯಾಸವನ್ನು ಅನುಭವಿಸಿದ್ದ ಪಾಟೇಕರ್ ಅವರ ಕಾರ್ಗಿಲ್ ದಿನಗಳು, ಅವರ ಬದುಕಿನ ವಿಶಿಷ್ಟ ಅಧ್ಯಾಯವಾಗಿ ಉಳಿದಿವೆ.